ಶಾಸಕ ಸೋಮಶೇಖರ್ ಗೆ ಜಾಮೀನು ರಹಿತ ವಾರಂಟ್

ಮೈಸೂರು, ಡಿ.7- ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಗೈರುಹಾಜರಾದ ಹಿನ್ನೆಲೆಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಮೈಸೂರಿನ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿ ಆದೇಶಿಸಿದೆ.
ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಎಂ.ಕೆ.ಸೋಮಶೇಖರ್ ಅವರು ಸುಳ್ಳು ಮಾಹಿತಿ ನೀಡಿ ಗ್ಯಾಸ್ ಏಜೆನ್ಸಿ ಪಡೆದಿರುವ ಬಗ್ಗೆ ಮಾಜಿ ಕಾರ್ಪೊರೇಟರ್ ಎಂ.ಸಿ.ಚಿಕ್ಕಣ್ಣ ಅವರು 2008ರ ಮೇ ತಿಂಗಳಲ್ಲಿ ದಾಖಲೆಗಳ ಸಹಿತ ಪತ್ರಿಕಾ ಹೇಳಿಕೆ ನೀಡಿದ್ದರು.
ಇದಕ್ಕೆ ಎಂ.ಕೆ.ಸೋಮಶೇಖರ್ ಅವರು, ಎಂ.ಸಿ.ಚಿಕ್ಕಣ್ಣ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಸೋಮಶೇಖರ್ ಅವರ ಈ ಹೇಳಿಕೆಯಿಂದ ನೊಂದ ಎಂ.ಸಿ.ಚಿಕ್ಕಣ್ಣ ಅವರು ಶಾಸಕರ ವಿರುದ್ಧ ನಗರದ ಜೆಎಂಎಫ್ ಸಿ ಮೂರನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ತಿಂಗಳ 4 ರಂದು ಶಾಸಕ ಎಂ.ಕೆ.ಸೋಮಶೇಖರ್ ಅವರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯವು ಶಾಸಕರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿದೆ.

Leave a Comment