ಶಾಸಕ ಸುರೇಶ್‌ಗೌಡರಿಂದ ಬೆದರಿಕೆ: ಗೌರಿ ಆರೋಪ

ತುಮಕೂರು, ಜ. ೧೩- ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್‌ಗೌಡ ಮತ್ತು ಅವರ ಮಕ್ಕಳಿಂದ ನನಗೆ ತುಂಬಾ ಅನ್ಯಾಯವಾಗಿದ್ದು, ಅವರಿಂದ ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ನೀಡಬೇಕು ಎಂದು ನೊಂದ ಯುವತಿ ಗೌರಿ ಮನವಿ ಮಾ‌ಡಿದ್ದಾರೆ.

ಶಾಸಕ ಸುರೇಶ್‌ಗೌಡ ಅವರು ನನಗೆ ಸಂಬಂಧದಲ್ಲಿ ಚಿಕ್ಕಪ್ಪ ಆಗಬೇಕು. ಇವರ ತಂದೆ ಹಾಗೂ ನನ್ನ ತಾತ ಇಬ್ಬರು ಅಣ್ಣ ತಮ್ಮಂದಿರು. ನಾನು ಅಂತಿಮ ವರ್ಷದ ಎಲ್.ಎಲ್.ಬಿ. ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದೇನೆ. ಶಾಸಕರ ಮಕ್ಕಳು ನನ್ನ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಫ್ರಾಡ್ ಎಂದು ಹಾಕುವ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ನನ್ನ ಬಗ್ಗೆ ಫೇಸ್‌ಬುಕ್‌ನಲ್ಲಿ ಫ್ರಾಡ್ ಎಂದು ಹಾಕಿರುವ ಇವರ ಬಳಿ ನಾನು ಇವರಿಗೆ ವಂಚನೆ ಮಾಡಿರುವ ಬಗ್ಗೆ ಯಾವ ದಾಖಲೆ ಇದೆ ತೋರಿಸಲಿ. ಬೇರೆ ಯಾರಿಗೋ ಬೆಂಬಲ ನೀಡಲು ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾ ನನ್ನ ಮೇಲೆ ದೌರ್ಜನ್ಯ ಪ್ರದರ್ಶಿಸುತ್ತಾರೆ ಎಂದರು.

ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಇದೆ. ನಮಗೆ ಏನೇ ಆದರೂ ಶಾಸಕ ಸುರೇಶ್‌ಗೌಡ ಮತ್ತು ಮಕ್ಕಳೇ ಕಾರಣ ಎಂದು ಅವರು ಹೇಳಿದರು.

ಶಾಸಕ ಸುರೇಶ್‌ಗೌಡ ವಿರುದ್ದ ವಕೀಲರ ಸಲಹೆ ಪಡೆದು ಪೊಲೀಸ್ ಕಮೀಷನರ್‌ಗೆ ದೂರು ಕೊಡುವುದಾಗಿ ಹೇಳಿದರು.
ನಾನೆಂದೂ ಸುರೇಶ್‌‌ಗೌಡರ ಮಗಳೆಂದು ಹೇಳಿಕೊಂಡಿಲ್ಲ. ನನಗೆ ಚಿಕ್ಕಪ್ಪ ಆಗಬೇಕೆಂದು ಹೇಳಿದ್ದೇನೆ. ಯಾರನ್ನೂ ಬ್ಲಾಕ್‌ಮೇಲ್ ಮಾಡಿ ಅಥವಾ ಅವರ ಹೆಸರು ಬಳಸಿಕೊಂಡು ಯಾರ ಬಳಿಯೂ ಹಣ ದೋಚಿಲ್ಲ. ಆದರೂ ಅವರ ಮಕ್ಕಳು ನನ್ನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಸಮಾಜದಲ್ಲಿ ತಲೆ ಎತ್ತದಂತೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಸುರೇಶ್‌ಗೌಡ ಸಹ ಅತ್ಯಂತ ಕೆಟ್ಟ ಪದ ಬಳಸಿ ನನ್ನನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದರು.

ಹೆಣ್ಣಿಗೆ ಗೌರವ ಕೊಡದವರನ್ನು ನನ್ನ ಚಿಕ್ಕಪ್ಪ ಅಂತ ಹೇಳಿಕೊಳ್ಳಲು ಅಸಹ್ಯವಾಗುತ್ತಿದೆ. ಸುರೇಶ್‌ಗೌಡ ಹಾಗೂ ಅವರ ಮಕ್ಕಳ ವಿರುದ್ದ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡುವುದಾಗಿ ಅವರು ಹೇಳಿದರು.

Leave a Comment