ಶಾಸಕ ಶಿವಣ್ಣಗೆ ಐಟಿ ಶಾಕ್

ಆನೇಕಲ್, ಏ.೧೬- ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಬಾರಿಯೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಆನೇಕಲ್ ಶಾಸಕ ಶಿವಣ್ಣ ಅವರ ಮನೆ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಿಗ್ಗೆ 6 ಗಂಟೆ ಸುಮಾರಿಗೆ ಶಾಸಕ ಶಿವಣ್ಣ ಅವರ ಚಂದಾಪುರ ಆನೇಕಲ್ ಸೂರ್ಯ ಸಿಟಿಯ ಅವರ ಮನೆ ಮತ್ತು ಕಚೇರಿ ಸೇರಿದಂತೆ ಅಕ್ಕ ಪಕ್ಕದಲ್ಲಿರುವ ಎರಡು ಮನೆಗಳ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಶಿವಣ್ಣ ಅವರಿಗೆ ಸಂಬಂಧಪಟ್ಟ ಮನೆ ಕಚೇರಿಗಳಲ್ಲಿ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಆದಾಯ ತೆರಿಗೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ನಿನ್ನೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿವಣ್ಣ ಮತ್ತೊಮ್ಮೆ ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಐಟಿ ಅಧಿಕಾರಿಗಳು ನಡೆಸಿರುವ ಈ ದಾಳಿಯನ್ನು ಖಂಡಿಸಿರುವ ಅವರ ಬೆಂಬಲಿಗರು ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ.

Leave a Comment