ಶಾಸಕ ರೇಣುಕಾಚಾರ್ಯ ಪೊಲೀಸ್ ವಶಕ್ಕೆ

ಬೆಂಗಳೂರು, ಜೂನ್ 16 : ಏಕಾಂಗಿಯಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ನುಗ್ಗಲು ಯತ್ನಿಸಿದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಜಿಂದಾಲ್ ವಿಚಾರದಲ್ಲಿ ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದೆ.

ಭಾನುವಾರ ಬಿಜೆಪಿ ಬಾವುಟ ಹಿಡಿದು, ಪೊಲೀಸ್ ಬ್ಯಾರಿಕೇಡ್‌ನಿಂದ ತಪ್ಪಿಸಿಕೊಂಡು ಮುಖ್ಯಮಂತ್ರಿಗಳ ಗೃಹ ಕಚೇರಿಗೆ ನುಗ್ಗಲು ಎಂ.ಪಿ.ರೇಣುಕಾಚಾರ್ಯ ಪ್ರಯತ್ನ ನಡೆಸಿದರು. ತಕ್ಷಣ ಪೊಲೀಸರು ಅವರನ್ನು ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಕರೆದುಕೊಂಡು ಹೋದರು.

ಕರ್ನಾಟಕ ಸರ್ಕಾರದ ವಿರುದ್ಧ ಶುಕ್ರವಾರದಿಂದ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಭಾನುವಾರ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಲಾಯಿತು.ಶಿವಾನಂದ ವೃತ್ತದ ಗಾಂಧಿ ಭವನದ ಮುಂದೆ ಪೊಲೀಸರು ಪಾದಯಾತ್ರೆಯನ್ನು ತಡೆದರು. ಬ್ಯಾರಿಕೇಡ್‌ಗಳನ್ನು ಹಾಕಿ ಮುಂದೆ ಹೋಗದಂತೆ ನಿಲ್ಲಿಸಿದರು. ಯಡಿಯೂರಪ್ಪ, ಆರ್.ಅಶೋಕ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದುಕೊಂಡರು. ಎಲ್ಲರನ್ನು ಬಿಎಂಟಿಸಿ ಬಸ್ಸಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಪಕ್ಷದ ಬಾವುಟ ಹಿಡಿದು ಬಸ್ಸಿನಿಂದ ಜಿಗಿದ ರೇಣುಕಾಚಾರ್ಯ ಅವರು ಬ್ಯಾರಿಕೇಡ್‌ ತಳ್ಳಿಕೊಂಡು ಗೃಹ ಕಚೇರಿ ಕೃಷ್ಣಾದತ್ತ ಓಡಿದರು.

ತಕ್ಷಣ 10 ಕ್ಕೂ ಹೆಚ್ಚು ಪೊಲೀಸರು ಅವರನ್ನು ಸುತ್ತುವರೆದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಎಂ.ಪಿ.ರೇಣುಕಾಚಾರ್ಯ ಅವರನ್ನು ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಕರೆದುಕೊಂಡು ಹೋದರು

Leave a Comment