ಶಾಸಕ ಬೇಗ್ ವಿಚಾರಣೆ  ಸಿಎಂ ಬಿಜೆಪಿ ಟ್ವೀಟ್ ಸಮರ

ಬೆಂಗಳೂರು, ಜು ೧೬- ಐಎಂಎ ಬಹುಕೋಟಿ ವಂಚನೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಶಾಸಕ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿರುವ ಕ್ರಮ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಬಿಜೆಪಿ ಪಾತ್ರವಿದೆ. ಹೀಗಾಗಿಯೇ ಕುದುರೆ ವ್ಯಾಪಾರ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಆರೋಪಕ್ಕೆ ಟ್ವೀಟ್‌ನಲ್ಲಿ ತಿರುಗೇಟು ನೀಡಿರುವ ಬಿಜೆಪಿ, ರಾಜ್ಯದ ಜನರನ್ನು ತಪ್ಪುದಾರಿಗೆ ಎಳೆಯಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಬಿಜೆಪಿ ಸಹಕಾರ
ಐಎಂಎ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಮಾಜಿ ಸಚಿವರೊಬ್ಬರನ್ನು ರಕ್ಷಿಸಲು ಬಿಜೆಪಿ ಸಹಾಯ ಮಾಡುತ್ತಿದೆ. ಶಾಸಕ ರೋಷನ್ ಬೇಗ್ ತಪ್ಪಿಸಿಕೊಳ್ಳಲು ಬಿಜೆಪಿಯ ಮಾಜಿ ಶಾಸಕ ಯೋಗಿಶ್ವರ್ ಸ್ಥಳದಲ್ಲೇ ಇದ್ದು ಸಹಕಾರ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪದ ಹಿನ್ನೆಲೆಯಲ್ಲಿ ಶಾಸಕ ರೋಷನ್ ಬೇಗ್ ಮುಂಬೈಗೆ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಅವರನ್ನು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್ಐಟಿ ವಶಕ್ಕೆ ಪಡೆದಿದೆ ಎಂದು ಹೇಳಿದ್ದಾರೆ.
ರೋಷನ್ ಬೇಗ್ ಪರಾರಿಯಾಗಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಕೂಡ ಸ್ಥಳದಲ್ಲೇ ಇದ್ದು ಎಸ್ಐಟಿ ಪೊಲೀಸರ ಭೇಟಿಯ ಸಂದರ್ಭದಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಹುರುಳಿಲ್ಲ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಟ್ವೀಟ್‌ನಲ್ಲೇ ತಿರುಗೇಟು ನೀಡಿರುವ ಬಿಜೆಪಿ ರೋಷನ್ ಬೇಗ್ ಅವರೊಂದಿಗೆ ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಅಥವಾ ಇನ್ನಿಬ್ಬರು ಇದ್ದರು ಎನ್ನುವ ಮುಖ್ಯಮಂತ್ರಿ ಆರೋಪದಲ್ಲಿ ಉರುಳಿಲ್ಲ. ರಾಜ್ಯದ ಜನರನ್ನು ತಪ್ಪುದಾರಿಗೆ ಎಳೆಯಲು ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ದೂರಿದೆ.
ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿ ಫೂಟೇಜ್ ಮತ್ತು ಬೋರ್ಡಿಂಗ್ ಪಾಸ್‌ಗಳನ್ನು ಪರಿಶೀಲಿಸಲಿ ಎಂದು ಆಗ್ರಹಿಸಿದೆ. ಶಾಸಕ ರೋಷನ್ ಬೇಗ್ ಎಸ್ಐಟಿ ಮುಂದೆ ಹಾಜರಾಗಲು ಜುಲೈ 19 ರವರೆಗೂ ಕಾಲಾವಕಾಶವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
ರಾಜೀನಾಮೆ ನೀಡಿರುವ ಶಾಸಕರನ್ನು ರಾಜ್ಯ ಸರ್ಕಾರ ಬ್ಲಾಕ್ ಮೇಲ್ ಮಾಡುವ ಮೂಲಕ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಇದು ಸರಿಯಲ್ಲ ಎಂದು ಬಿಜೆಪಿ ಹೇಳಿದೆ.

ಅಸ್ಥಿರಕ್ಕೆ ಯತ್ನ
ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ನಾಯಕರು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಇದಕ್ಕಾಗಿ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮಾಜಿ ಸಚಿವರೊಬ್ಬರನ್ನು ತಪ್ಪಿಸಿಕೊಳ್ಳಲು ಬಿಜೆಪಿ ಬೆಂಬಲ ನೀಡಿದೆ.
-ಹೆಚ್.ಡಿ.ಕುಮಾರಸ್ವಾಮಿ
ಮುಖ್ಯಮಂತ್ರಿ

ತಪ್ಪುದಾರಿಗೆ ಎಳೆಯುವ ಪ್ರಯತ್ನ
ರಾಜ್ಯದ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡುತ್ತಿದ್ದಾರೆ. ಇದರಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ. ಈ ಸಂಬಂಧ ಸಿಸಿಟಿವಿ ಫೂಟೇಜ್ ಪರಿಶೀಲಿಸಲಿ
-ಬಿಜೆಪಿ ಟ್ವೀಟ್‌ನಲ್ಲಿ ಆರೋಪ

Leave a Comment