ಶಾಸಕ ತೇಲ್ಕೂರ ಪಾದಯಾತ್ರೆ ನಾಳೆ

 

ಕಲಬುರಗಿ ಜೂ 20:ಸಮ್ಮಿಶ್ರ ಸರ್ಕಾರ ಅಧಿಕಾರ ಬಂದಾಗಿನಿಂದ ಇಲ್ಲಿಯವರೆಗೆ ಜನ ಸಾಮಾನ್ಯರ, ರೈತರ, ಕಾರ್ಮಿಕರ ಹಲವಾರು ಸಮಸ್ಯೆಗಳು ಪರಿಹಾರವಾಗದೇ ಉಳಿದಿದ್ದು ಈಗ ಮತ್ತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯ ಮಾಡಲು ಬರುತ್ತಿರುವದು ಯಾವ ಪರುಷಾರ್ಥಕ್ಕಾಗಿ ? ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸೇಡಂ ತಾಲೂಕು ಸೇರಿದಂತೆ ಈ ಭಾಗದ ಹಲವು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಾಳೆ ( ಜೂನ್ 21) ಬೆಳಿಗ್ಗೆ 8 ಗಂಟೆಗೆ ಯಾನಾಗುಂದಿಯಿಂದ  ಸಿಎಂ ಗ್ರಾಮವಾಸ್ತವ್ಯ ಮಾಡಲಿರುವ ಚಂಡರಕಿ ಗ್ರಾಮದವರೆಗೆ ( ಸುಮಾರು 15 ಕಿಮೀ ಅಂತರ) 4-5 ಸಾವಿರ ರೈತರೊಂದಿಗೆ ಪಾದಯಾತ್ರೆ ಕೈಗೊಳ್ಳುವದಾಗಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.ಸಾಲಮನ್ನಾ ಪಡೆದ ಎಲ್ಲ ಫಲಾನುಭವಿ ರೈತರಿಗೆ ಋಣಮುಕ್ತ ಪತ್ರ ನೀಡಿ ಹೊಸ ಸಾಲ ವಿತರಿಸಬೇಕು.ಡಿಸಿಸಿ ಬ್ಯಾಂಕು ಪುನರುಜ್ಜೀವನಗೊಳಿಸಲು ಅದನ್ನು ಸೂಪರ್‍ಸೀಡ್ ಮಾಡಬೇಕು.317(ಜೆ) ಜಾರಿಯಾದ ಬಳಿಕ ಖಾಲಿ ಇರುವ 40 ಸಾವಿರ ಹುದ್ದೆ ಭರ್ತಿ ಮಾಡಬೇಕು.ಹಿಂದುಳಿದ ಹೈಕ ಭಾಗಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಬೇಕು.ಕಾಗಿಣಾ ನದಿಗೆ ಏತ ನೀರಾವರಿ ಯೋಜನೆ ಅಳವಡಿಸಬೇಕು . ಈ ಭಾಗದಲ್ಲಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

ಶ್ವೇತ ಪತ್ರ ಹೊರಡಿಸಿ:

ಬಿಜೆಪಿ ಶಾಸಕರು ಆಯ್ಕೆಯಾದ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ಈ ಕುರಿತಂತೆ ಶ್ವೇತಪತ್ರ ಹೊರಡಿಸಲು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲ್ಯಾಣಪ್ಪ ಪಾಟೀಲ,ಹಣಮಂತ ರೆಡ್ಡಿ,ಶರಣು ಶಂಕರ,ಮುಕುಂದ ದೇಶಪಾಂಡೆ,ಶರಣಪ್ಪ ತಳವಾರ,ನಾಗಪ್ಪ ಕೊಳ್ಳಿ,ಶ್ರೀನಿವಾಸ ಪಿಳ್ಳೆ,ಓಂಪ್ರಕಾಶ ಪಾಟೀಲ ,ಸಂಗಣ್ಣ ಇಜೇರಿ ನಾಗರೆಡ್ಡಿ ದೇಶಮುಖ ಸೇರಿದಂತೆ ಹಲವರಿದ್ದರು..

Leave a Comment