ಶಾಸಕ ತನ್ವೀರ್ ಸೇಠ್ ಸ್ಥಿತಿ ಗಂಭೀರ

ಮೈಸೂರು, ನ. ೧೮- ಮದುವೆ ಮಂಟಪದಲ್ಲಿ ಹಲ್ಲೆಗೆಗೊಳಗಾದ ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ತನ್ವೀರ್ ಸೇಠ್ ರ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿ ಕುತ್ತಿಗೆಯಲ್ಲಿರುವ ರಕ್ತನಾಳ, ನರಗಳಿಗೆ ಹಾನಿಯಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು
ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಹೇಳಿದ್ದಾರೆ.

ತನ್ವಿರ್ ಸೇಠ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಇನ್ನು 48 ಗಂಟೆಗಳ ಕಾಲ ಏನನ್ನು ಹೇಳಲು ಸಾಧ್ಯವಿಲ್ಲ. ಒಳಗಿನ ನರಗಳು, ಸ್ಪೈನಲ್ ಗೆ ಯಾವ ರೀತಿ ಹಾನಿಯಾಗಿದೆ ಎಂಬುದು ಮುಂದಿನ ಹಂತದ ಚಿಕಿತ್ಸೆಯಲ್ಲಿ ತಿಳಿಯಲಿದೆ. ರಾತ್ರಿ ಅವರ ಗಾಯಗಳಿಗೆ ರಕ್ತಸ್ರಾವಾಗದ ರೀತಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಕಿಡ್ನಿ ಸ್ವಲ್ಪ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಕ್ತದೊತ್ತಡ, ಶುಗರ್ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಪಡುತ್ತಿದ್ದೇವೆ. ಅದರ ಹೊರತಾಗಿ, ಯಾವುದೇ ರೀತಿಯ ಆರೋಗ್ಯ ಏರುಪೇರಿಲ್ಲ. ಜನರು ಪ್ರಾರ್ಥನೆ ಮಾಡಲಿ ಆಸ್ಪತ್ರೆ ಬರುವುದು ಬೇಡ ಎಂದು ಮನವಿ ಮಾಡಿದ್ದಾರೆ.

ತನ್ವೀರ್ ಸೇಠ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕತ್ತಿನ ಭಾಗದಲ್ಲಿ ಇರಿತವಾದ ಕಾರಣ ಕತ್ತು ಮತ್ತು ಹೃದಯವನ್ನು ಸಂಪರ್ಕಿಸುವ ಎರಡು ನರಗಳು ತುಂಡಾಗಿವೆ ಎಂದು ವರದಿಯಾಗಿದೆ. ಸತತ ಐದು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ನರಗಳನ್ನು ಮರುಜೋಡಣೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಸಂಬಂಧಿಗಳ ಭೀಗರ ಔತಣಕೂಟದಲ್ಲಿ ಭಾಗಿಯಾಗಿ ನಂತರ ಸಂಗೀತ ಕಾರ್ಯಕ್ರಮ ವೀಕ್ಷಿಸುತ್ತಿದ್ದ ವೇಳೆ ತನ್ವೀರ್ ಸೇಠ್ ಮೇಲೆ ದಾಳಿ ನಡೆದಿದೆ. ಮೈಸೂರಿನ ನಗರದ ಬನ್ನಿ ಮಂಟಪದ ಆವರಣದಲ್ಲಿ ನಡೆಯುತಿದ್ದ ಕಾರ್ಯಕ್ರಮ ಇದಾಗಿತ್ತು. ಆರೋಪಿ ಫರಾನ್ ನನ್ನು ಬಂಧಿಸಲಾಗಿದ್ದು, ಎನ್ ಆರ್ ಠಾಣೆ ಪೊಲೀಸರ ವಶದಲ್ಲಿದ್ದಾನೆ.

Leave a Comment