ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ; ನ್ಯಾಯಾಂಗ ತನಿಖೆಗೆ ಎಸ್‍ಡಿಪಿಐ ಆಗ್ರಹ

ಮೈಸೂರು, ಡಿ.2 – ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪರ್ಹಾನ್ ಎಂಬ ಯುವಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ 5 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿಕೊಂಡಿದೆ. ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಪಡಿಸಿರುವ ಯುವಕರು ಅಮಾಯಕರಾಗಿದ್ದು, ಹಲ್ಲೆ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆಯು ರಾಜಕೀಯ ಪ್ರೇರಿತವಾಗಿ ಅಮಾಯಕರನ್ನು ಗುರಿಪಡಿಸಿ ಬಂಧಿಸಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ ಅವರು, ಪಕ್ಷವನ್ನು ಗುರಿಯಾಗಿಸಿ ಪಕ್ಷದ ಮೇಲೆ ಈ ಪ್ರಕರಣವನ್ನು ತಳುಕು ಹಾಕಲು ಎಲ್ಲಾ ರೀತಿಯ ಪ್ರಯತ್ನಗಳು ಪೊಲೀಸ್ ಇಲಾಖೆಯಿಂದ ನಡೆಯುತ್ತಿರುವುದನ್ನು ಎಸ್‍ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಮತ್ತು ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದು ಅವರು ಹೇಳಿದರು.

ಪ್ರಮುಖ ಆರೋಪಿಯನ್ನು ಕೃತ್ಯ ನಡೆದ ಸಂದರ್ಭದಲ್ಲೇ ಬಂಧಿಸಲಾಗಿದ್ದು, ‘ಖ್ಯಾತನಾಗಬೇಕೆಂಬ ಹಂಬಲ’ ಈ ಕೃತ್ಯ ನಡೆಸಲು ಕಾರಣವೆಂದು ಹೇಳಿಕೊಂಡಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಆದರೂ ಪ್ರಕರಣಕ್ಕೆ ಸಂಬಂಧಿಸಿ ಅಮಾಯಕರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಿರುವುದು ಮಾತ್ರ ಖೇದಕರ, ಅಕ್ಷಮ್ಯ ಎಂದು ಅವರು ಹೇಳಿದರು.
ನ್ಯಾಯಾಂಗ ಬಂಧನದಲ್ಲಿರುವ ಅಮಾಯಕರನ್ನು ನ್ಯಾಯವಾದಿಗಳು ಭೇಟಿ ಮಾಡಿ ವಿಚಾರಿಸಿದ ಸಂದರ್ಭ ‘ಈ ಪ್ರಕರಣಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ, ನಾವು ನಿರಪರಾಧಿಗಳು. ಹಲ್ಲೆ ನಡೆಸಿದ ವ್ಯಕ್ತಿಯೊಂದಿಗೆ ಯಾವುದೇ ರೀತಿಯ ಸಂಪರ್ಕಗಳನ್ನು ಹೊಂದಿಲ್ಲ. ಆದರೂ ಪ್ರಕರಣದಲ್ಲಿ ಯಾವುದೋ ಪೂರ್ವಾಗ್ರಹ ಪೀಡಿತ ದುರುದ್ದೇಶಗಳಿಂದ ನಮ್ಮನ್ನು ಸಿಲುಕಿಸಲಾಗಿದೆ’ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ಅಮಾಯಕ ಯುವಕರ ಕುಟುಂಬ ಹಾಗೂ ಆತ್ಮೀಯ ಸ್ನೇಹಿತರನ್ನು ಭೇಟಿಯಾಗಿ ಪಕ್ಷವು ವಿಚಾರಿಸಿದ್ದು, ಪ್ರಕರಣದಲ್ಲಿ ಬಂಧನಕ್ಕೊಳಗಾದ ಅಮಾಯಕರಿಗೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಹಾಗಾಗಿ ಪ್ರಕರಣವನ್ನು ರಾಜಕೀಯ ಪ್ರೇರಿತವಾಗಿ ಬಳಸಿಕೊಂಡು, ಎಸ್‍ಡಿಪಿಐ ಪಕ್ಷವನ್ನು ಗುರಿಯಾಗಿಸಿ ಧಮನಿಸಲು ಪ್ರಯತ್ನಿಸುತ್ತಿರುವ ಈ ಸಂವಿಧಾನ ವಿರೋಧಿ ನಡೆಯನ್ನು ಕಟುವಾಗಿ ಖಂಡಿಸುತ್ತಾ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ, ಪ್ರಕರಣದ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವಂತೆ ಸರಕಾರವನ್ನು ಆಗ್ರಹಿಸುತ್ತೇವೆ ಎಂದು ಅಬ್ದುಲ್ ಮಜೀದ್ ತಿಳಿಸಿದರು.
ಹಲ್ಲೆ ಪ್ರಕರಣದಲ್ಲಿ ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸುತ್ತೇವೆ. ಆದರೆ ಅಮಾಯಕರ ಮೇಲೆ ಕ್ರಮ ಕೈಗೊಳ್ಳುವುದನ್ನು ಸಹಿಸಿಕೊಳ್ಳಲು ಮತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಆರೋಪಿಯು ಮೂರು ರಾಜಕೀಯ ಪಕ್ಷಗಳಲ್ಲಿ ಕಾಣಿಸಿಕೊಂಡಿದ್ದು ಪತ್ರಿಕೆಯಲ್ಲಿ ವರದಿಯಾಗಿದೆ. ಆದರೆ ಪೊಲೀಸರು ಆರೋಪಿಯನ್ನು ಎಸ್‍ಡಿಪಿಐ ಪಕ್ಷದ ಕಚೇರಿ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿ ಮುಂದೆ ನಿಲ್ಲಿಸಿ ಫೋಟೋ ತೆಗೆಸಿಕೊಂಡಿರುವುದು ಹಲವು ರೀತಿಯ ಅನುಮಾನ ಮತ್ತು ಸಂಶಯಗಳಿಗೆ ಆಸ್ಪದ ನೀಡಿದೆ. ಚುನಾವಣಾ ಆಯೋಗದಲ್ಲಿ ನೋಂದಾಯಿತ ಪಕ್ಷದ ಅಧಿಕೃತ ಕಚೇರಿಗೆ ಒಂದು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭೇಟಿ ನೀಡುವುದಕ್ಕಿಂತ ಮೊದಲು ಪಕ್ಷದ ಪದಾಧಿಕಾರಿಗಳಿಗೆ ನೊಟೀಸು ನೀಡಬೇಕಿತ್ತು. ಆದರೆ ಯಾವುದೇ ಮಾಹಿತಿಯಿಲ್ಲದೆ ಪಕ್ಷದ ಕಚೇರಿ ಮುಂಭಾಗ ಫೋಟೋವನ್ನು ತೆಗೆಸಿಕೊಂಡಿರುವುದು ಹಲವು ನಿಗೂಢತೆಗಳಿಗೆ ಕಾರಣವಾಗಿದೆ. ನ್ಯಾಯವನ್ನು ಪಾಲಿಸಬೇಕಾದ ಪೊಲೀಸರ ಈ ರೀತಿಯ ನಡೆಯ ಹಿಂದೆ ಎಸ್‍ಡಿಪಿಐ ಪಕ್ಷವು ಸಂಶಯ ವ್ಯಕ್ತಪಡಿಸುತ್ತದೆ.
ಈ ಹಿಂದೆ ಉದಯಗಿರಿ ಪೊಲೀಸರು ಅಮಾಯಕ ಯುವಕರನ್ನು ಬಂಧಿಸಿ, ಅಕ್ರಮ ಬಂಧನದಲ್ಲಿಟ್ಟಿರುವುದನ್ನು ಪ್ರಶ್ನಿಸಿ ನಡೆದ ‘ಜೈಲ್ ಭರೋ’ ಘಟನೆಗೆ ಸಂಬಂಧಿಸಿ, ಹೈಕೋರ್ಟ್ ಉದಯಗಿರಿ ಪೊಲೀಸರಿಗೆ ಛೀಮಾರಿ ಹಾಕಿದ್ದಲ್ಲದೆ 50 ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದು ಈ ಸಂದರ್ಭ ನೆನಪಿಸಬಹುದಾಗಿದೆ.
ಆದ್ದರಿಂದ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಅಮಾಯಕರ ಪರ ನಿರಂತರವಾದ ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಮತ್ತು ಅಧಿಕಾರವನ್ನು ದುರುಪಯೋಗಪಡಿಸುತ್ತಿರುವ ಅಧಿಕಾರಗಳ ವಿರುದ್ಧವೂ ಕಾನೂನು ರೀತಿಯ ಹೋರಾಟವನ್ನು ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಧಿಕಾರವನ್ನು ದುರುಪಯೋಗಪಡಿಸಿ, ರಾಜಕೀಯ ಒತ್ತಡಕ್ಕೆ ಮಣಿದು ಈ ಪ್ರಕರಣದಲ್ಲಿ ಎಸ್‍ಡಿಪಿಐ ಪಕ್ಷವನ್ನು ಧಮನಿಸಲು ಪ್ರಯತ್ನಿಸುವ ಹುನ್ನಾರದ ವಿರುದ್ಧ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಹಾಗೂ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಪಕ್ಷ ಚಿಂತನೆ ನಡೆಸಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಅನಸ್, ಬಂಧನಕ್ಕೊಳಗಾದ ಅಮಾಯಕ ಯುವಕರ ಪೋಷಕರು ಹಾಜರಿದ್ದರು.

Leave a Comment