ಶಾಸಕ ಎಸ್ ಎ ಆರ್ ಮನೆಯಲ್ಲಿ ಕುಳಿತು ರಾಜಕಾರಣ ಮಾಡುವುದಿಲ್ಲ

ದಾವಣಗೆರೆ.ಸೆ.20;  ಮಹಾನಗರ ಪಾಲಿಕೆಯಲ್ಲಿ 5 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‍ನವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಅವರ ಅವಧಿಯಲ್ಲಿ ನಡೆದಿರುವ ಕಾರ್ಯಗಳನ್ನು ಏನು ಎಂಬುದು ಜನತೆಗೆ ಗೊತ್ತಿದೆ ಎಂದು ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಶಿವರಾಜ್ ಪಾಟೀಲ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು  ಶಾಸಕರಾದ ಎಸ್.ಎ. ರವೀಂದ್ರನಾಥ್ ಕಳೆದ ಒಂದೂವರೆ ವರ್ಷದಿಂದ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಪ್ರತಿದಿನ ಬೆಳಿಗ್ಗೆ 6 ರಿಂದ ಜನರಿಗೆ ಸಿಗುತ್ತಾರೆ. ಅಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲೂ ಸಹ ಭೇಟಿ ನೀಡಿ ಸ್ಥಳದಲ್ಲೇ ಜನರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಜನರೊಂದಿಗೆ ಯಾವ ರೀತಿ ಬೆರೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕಾಂಗ್ರೆಸ್‍ನವರು ಪಾಲಿಕೆಯಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ಯಾವ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬುದನ್ನು ತಿಳಿಯಲು ಪ್ರತಿದಿನ ನಗರ ಪ್ರದಕ್ಷಿಣೆ ಹಾಕಬೇಕು ಆಗ ಯಾವ ಅಭಿವೃದ್ದಿ ನಡೆದಿದೆ ಎಂದು ಗೊತ್ತಾಗುತ್ತದೆ. ನಾಲೈದು ಭಾಗದಲ್ಲಿ ರಸ್ತೆ ಬಿಟ್ಟರೆ ಯಾವ ಅಭಿವೃದ್ದಿಯೂ ನಡೆದಿಲ್ಲ. ಗಾಜಿನ ಮನೆ ಪೂರ್ಣವಾಗದೇ ಅಸ್ಥಿಪಂಜರದಂತೆ ಆಗಿದೆ. ಆದರೆ ಶಾಸಕರು ಪದೇಪದೇ ಭೇಟಿ ನೀಡಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಭಾಗಶ ಕಾಮಗಾರಿಗಳನ್ನು ಪೂರ್ಣಗೊಳಿಸಿ ಜನರ ವೀಕ್ಷಣೆಗೆ ಅವಕಾಶ ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಅನುಷ್ಠಾನಕ್ಕೆ ಬಂದು 3 ವರ್ಷ ಕಳೆದಿದೆ. ಇಲ್ಲಿಯವರೆಗೂ 360 ಕೋಟಿ ರೂ. ಹಣ ಬಂದಿದೆ. ಆದರೆ ಕೇವಲ 3 ಕೋಟಿ ಹಣವೂ ಖರ್ಚಾಗಿಲ್ಲ. ಯಾವ ಅಭಿವೃದ್ದಿಯೂ ನಡೆದಿಲ್ಲ. ಆದರೆ ಪ್ರಚಾರಕ್ಕಾಗಿ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು. ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಕುಂದಪ್ಪ ಮಾತನಾಡಿ ಶಾಸಕರ ಬಗ್ಗೆ ಟೀಕೆ ಮಾಡುವುದು ಶೋಭೆ ತರುವುದಿಲ್ಲ. ಶಾಸಕರು ನಡೆಸಿರುವ ಅಭಿವೃದ್ದಿ ಕಾರ್ಯ ಜನರಿಗೆ ಗೊತ್ತಿದೆ. ಮನೆಯಲ್ಲಿ ಕುಳಿತು ರಾಜಕಾರಣ ಮಾಡಿದವರಿಗೆ ಇದು ತಿಳಿಯುವುದಿಲ್ಲ. ನಮ್ಮ ಶಾಸಕರು ಜನರ ಮಧ್ಯೆ ಇರುವವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಿದ್ದಲಿಂಗಪ್ಪ,ಹನುಮಂತಪ್ಪ,ಪಿ.ಎಸ್ ಬಸವರಾಜ್,ಪ್ರಸನ್ನಕುಮಾರ್ ಮತ್ತಿತರರಿದ್ದರು.
ಬಾಕ್ಸ್
ಹಿಂಬಾಲಕರು ವರ್ತನೆಯಿಂದಲೇ ಮಾಜಿ ಸಚಿವರು ಚುನಾವಣೆಯಲ್ಲಿ ಸೋಲುಕಂಡಿದ್ದಾರೆ. ಇದನ್ನು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.ಹಿಂಬಾಲಕರು ಎನಿಸಿಕೊಂಡವರು ನಡೆಸಿದ ಭ್ರಷ್ಠಾಚಾರ,ಅಧಿಕಾರಿಗಳ ಮೇಲಿನ ದೌರ್ಜನ್ಯದಿಂದ ಅವರು ಸೋತಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಅವರ ಅವಧಿಯಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ,ಯಾವ ಅಭಿವೃದ್ದಿಯೂ ನಡೆದಿಲ್ಲ ಇದನ್ನೆಲ್ಲಾ ಗಮನಿಸಿದರೆ ಮೊದಲೇ ಅವರಿಗೆ ಸೋಲು ನಿಶ್ಚಯವಾಗಿತ್ತು ಎನ್ನುವುದು ತಿಳಿಯುತ್ತಿದೆ. ಕಾಂಗ್ರೆಸ್ ನವರ ಆರೊಪಗಳು ಅವರ ವೈಫಲ್ಯಗಳನ್ನು ತೋರಿಸುತ್ತಿವೆ.
– ಶಿವರಾಜ್ ಪಾಟೀಲ್
ಬಿಜೆಪಿ ಮುಖಂಡರು.

Leave a Comment