ಶಾಸಕರ ಸ್ವಗ್ರಾಮ ಚಿನಕುರಳಿಗೂ ಕಾಲಿಟ್ಟ ಕೊರೊನಾ

ಪಾಂಡವಪುರ, ಮೇ ೨೨- ಕಲ್ಲಿನ ಗಣಿನಾಡು ಎಂದೇ ಪ್ರಖ್ಯಾತಿ ಹೊಂದಿರುವ ತಾಲೂಕಿನ ಚಿನಕುರಳಿ ಗ್ರಾಮಕ್ಕೂ ಮಹಾಮಾರಿ ಕೊರೊನಾ ಕಾಲಿಟ್ಟಿದೆ.
ಲಾಕ್ ಡೌನ್ ಸಡಿಲಿಕೆ ಬಳಿಕ ರಾಣಿಬೆನ್ನೂರಿನಿಂದ ಚಿನಕುರುಳಿಗೆ ಭೇಟಿ ನೀಡಿದ್ದ ಬಾಲಕಿಗೆ ಕೊರೊನಾ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ಜೆಡಿಎಸ್‌ ಶಾಸಕ ಸಿ.ಎಸ್. ಪುಟ್ಟರಾಜು ಅವರ ಸ್ವಗ್ರಮಾ ಚಿನಕುರಳಿ ಇದೀಗ ಸೀಲ್‌ಡೌನ್‌ ಆಗಿದೆ.
ಕಳೆದ ಹಲವಾರು ದಿನಗಳ ಹಿಂದೆ ಮುಂಬೈಯಿಂದ ಶವ ತಂದು ಅಂತ್ಯಕ್ರಿಯೆ ನಡೆಸಿದ ಹಿನ್ನೆಲೆ ತಾಲೂಕಿನ ಬಿ.ಕೊಡಗಹಳ್ಳಿ ಗ್ರಾಮದ ಮೂವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಬೆನ್ನಲೇ ಚಿನಕುರಳಿ ಗ್ರಾಮದಲ್ಲಿ ಓರ್ವ ಬಾಲಕಿಯಿಂದಾಗಿ ಕೊರೊನಾ ಅಂಟಿದಂತಾಗಿದೆ. ಈ ಹಿನ್ನಲೆಯಲ್ಲಿ ಚಿನಕುರಳಿ ಗ್ರಾಮ ಹಾಗೂ ತಾಲೂಕಿನ ಜನರಲ್ಲಿ ಭೀತಿ ಆವರಿಸಿದೆ.
ಮೂಲತಹಃ ರಾಣಿಬೆನ್ನೂರು ತಾಲೂಕಿನ ಕಟ್ಟಡ ಕಾರ್ಮಿಕನ ಕುಟುಂಬದ 11 ವರ್ಷದ ಬಾಲಕಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಕಟ್ಟಡ ಕಾರ್ಮಿಕರ ಮೇಸ್ತ್ರಿ ರಾಣಿಬೆನ್ನೂರು ತಾಲೂಕಿನವರಾಗಿದ್ದು, ಕಳೆದ ಹಲವಾರು ದಿನಗಳಿಂದಲೂ ಚಿನಕುರಳಿ ಗ್ರಾಮದಲ್ಲಿನ ಕೆರೆತೊಣ್ಣೂರು ಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜು ಎಂಬುವರ ಮನೆಯಲ್ಲಿ ವಾಸವಿದ್ದು ಕಟ್ಟಡ ಕಾಮಗಾರಿ ನಡೆಸುತ್ತಿದ್ದರು ಎನ್ನಲಾಗಿದೆ.ಯುಗಾದಿ ಹಬ್ಬಕ್ಕೆ ಊರಿಗೆ ತೆರಳಿದ್ದ ಅವರು ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಗೋವಿಂದ ಬಡಾವಣೆ ತಾಂಡದಿಂದ ಆನಗೊಳ ಚೆಕ್‍ಪೋಸ್ಟ್ ಮೂಲಕ ಭಾನುವಾರ ಚಿನಕುರಳಿಗೆ ವಾಪಸ್ ಆಗಿದ್ದರು. ಬಳಿಕ ಕುಟುಂಬದ ಐವರನ್ನು ಸೋಮವಾರ ಕೊರೊನಾ ಪರೀಕ್ಷೆ ಮಾಡಿಸಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ 11 ವರ್ಷದ ಬಾಲಕಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಚಿನಕುರಳಿ ಗ್ರಾಮದಲ್ಲಿ ಸೋಂಕಿತ ಬಾಲಕಿ ವಾಸವಿದ್ದ ಮನೆ ವ್ಯಾಪ್ತಿಯ 100ಮೀಟರ್‍ವರೆಗೆ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿ ಸೀಲ್‍ಡೌನ್ ಮಾಡಲಾಗಿದೆ. ಚಿನಕುರಳಿ ಸಮೀಪದ 7 ಕಿ.ಮೀ. ವ್ಯಾಪ್ತಿಯ 45 ಗ್ರಾಮಗಳನ್ನು ಬಫರ್ ಝೋನ್ ಎಂದು ಘೋಷಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಸ್ಥಳಕ್ಕೆ ಎಸಿ ಶೈಲಜಾ, ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಟಿಎಚ್‍ಒ ಡಾ.ಸಿ.ಎ.ಅರವಿಂದ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ 40ಜನ ಕಟ್ಟಡ ಕಾರ್ಮಿಕರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ.
ತಾಲೂಕಿನ ಚಿನಕುರಳಿ ಸೇರಿದಂತೆ ಮೂರು ಕೊರೊನಾ ಪಾಸಿಟಿವ್ ಬಂದಿದ್ದ ಮೇಲುಕೋಟೆಯ ಬಿ.ಕೊಡಗಹಳ್ಳಿ ಗ್ರಾಮ ಸೇರಿದಂತೆ ಒಟ್ಟಾರೆ ಎರಡು ಗ್ರಾಮಗಳನ್ನೂ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

Leave a Comment