ಶಾಸಕರ ರಾಜೀನಾಮೆ  ಸುಪ್ರೀಂ ಆದೇಶ ಸಿಎಂ ಅತೃಪ್ತಿ

ನವದೆಹಲಿ, ಜು. ೧೨- ಶಾಸಕರ ರಾಜೀನಾಮೆ ಸಂಬಂಧ ಸ್ಪೀಕರ್‌ಗೆ ಯಾವುದೇ ನೋಟಿಸ್ ನೀಡದೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದೂರಿದ್ದಾರೆ.
ಕಾಂಗ್ರೆಸ್-ಜೆಡಿಎಸ್‌ನ ಬಂಡಾಯ ಶಾಸಕರ ರಾಜೀನಾಮೆ ಸಂಬಂಧ ಸುಪ್ರೀಂಕೋರ್ಟ್ ಸ್ಪೀಕರ್‌ಗೆ ಯಾವುದೇ ನೋಟಿಸ್ ಜಾರಿ ಮಾಡದೆ ರಾಜೀನಾಮೆ ಬಗ್ಗೆ ಸೂಚನೆ ನೀಡಿದೆ ಎಂದು ಆರೋಪಿಸಿದ್ದಾರೆ.
ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದಲ್ಲಿ ಇಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ರಾಜೀವ್ ಧವನ್, ಅತೃಪ್ತ ಶಾಸಕರ ರಾಜೀನಾಮೆ ಸಂಬಂಧ ಯಾವುದೇ ತೀರ್ಪು ನೀಡಬೇಡಿ. ಅವರಿಗೆ ಪ್ರೋತ್ಸಾಹ ನೀಡಬೇಡಿ ಎಂದು ಮನವಿ ಮಾಡಿದರು.
ರಾಜೀನಾಮೆ ನೀಡಿರುವ ಶಾಸಕರು, ಸಮ್ಮಿಶ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದೆ ಎಂದು ಆರೋಪಿಸಿದ್ದಾರೆ. ಆದರೆ, ಸ್ವತಃ ಕೆಲ ಅತೃಪ್ತ ಶಾಸಕರೇ ಗಂಭೀರ ಸ್ವರೂಪದ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಶಾಸಕರು ನೀಡಿರುವ ರಾಜೀನಾಮೆ ಸಂಬಂಧ ಸ್ಪೀಕರ್ ಅವರಿಗೆ ವಿವರಣೆ ತೃಪ್ತಿಯಾದರೆ ರಾಜೀನಾಮೆ ಅಂಗೀಕರಿಸಬೇಕೋ ಅಥವಾ ಬೇಡವೋ ಎನ್ನುವುದನ್ನು ನಿರ್ಧರಿಸಲಿದ್ದಾರೆ ಎಂದರು.

Leave a Comment