ಶಾಸಕರ ರಾಜೀನಾಮೆ ಮುಂದುವರಿದ ವಾದ-ವಿವಾದ

ನವದೆಹಲಿ, ಜು. ೧೬- ಶಾಸಕರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಿಗೆ ಸೂಚನೆ ನೀಡುವಂತೆ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಸುಪ್ರೀಂಕೋರ್ಟ್‌ಗೆ ಮಾಡಿದ ಮನವಿಯನ್ನು ವಿರೋಧಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಯಥಾ ಸ್ಥಿತಿಯನ್ನು ಹಿಂಪಡೆದು ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಹೀಗಾಗಿ ಅತೃಪ್ತ ಶಾಸಕರು ಮತ್ತು ಸ್ಪೀಕರ್ ನಿರ್ಧಾರದ ಕುರಿತು ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ಸ್ಪೀಕರ್‌ಗೆ ಹೀಗೆ ಮಾಡಿ ಎಂದು ಸೂಚನೆ ನೀಡಲು ಸಾಧ್ಯವಾಗದು. ಆದರೆ ಶಾಸಕರು ರಾಜೀನಾಮೆ ನೀಡಿ ಹಲವು ದಿನ ಕಳೆದರೂ ಯಾಕೆ ಕ್ರಮ ಕೈಗೊಂಡಿಲ್ಲ. ಶಾಸಕರು ಸುಪ್ರೀಂಕೋರ್ಟ್‌ಗೆ ಬರುವ ತನಕ ಸ್ಪೀಕರ್ ಮೌನವಾಗಿದ್ದೇಕೆ ಎಂದು ಎರಡೂ ಕಡೆಯ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.
ಅತೃಪ್ತ ಶಾಸಕರ ರಾಜೀನಾಮೆ ವಿಳಂಬ ಸಂಬಂಧ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠದ ಮುಂದೆ ಎರಡೂ ಕಡೆಯ ವಕೀಲರು ತಮ್ಮ ವಾದ ಮಂಡಿಸಿ ಸ್ಪೀಕರ್‌ಗೆ ರಾಜೀನಾಮೆ ಅಂಗೀಕರಿಸುವಂತೆ ಕಾಲಾವಕಾಶ ನೀಡಬೇಕೆಂದು ಅತೃಪ್ತರ ಪರ ವಕೀಲರು ಮನವಿ ಮಾಡಿದರೆ, ತರಾತುರಿಯಲ್ಲಿ ರಾಜೀನಾಮೆ ಅಂಗೀಕರಿಸಲು ಬರುವುದಿಲ್ಲ. ಶಾಸಕರು ಖುದ್ದು ಹಾಜರಾಗುವಂತೆ ನೊಟೀಸ್ ನೀಡಿದರೂ ಶಾಸಕರು ಹಾಜರಾಗಿಲ್ಲ. ಹೀಗಾಗಿ ಕಲಂ 190ರ ಪ್ರಕಾರ ವಿಚಾರಣೆ ಮಾಡದೆ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ. ಹೀಗಾಗಿ ಕಾಲಾವಕಾಶ ಬೇಕು ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದ ಮಂಡಿಸಿದರು.
ಬೆಳಿಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ, ಹರಿಯಾಣ, ಓಡಿಷಾ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನ್ಯಾಯಾಲಯ ಸ್ಪೀಕರ್‌ಗೆ ನಿರ್ದೇಶನ ನೀಡಿದ ಉದಾಹರಣೆಗಳಿವೆ. ಈಗ ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಸ್ಪೀಕರ್‌ಗೂ ಸೂಚನೆ ನೀಡಿ ಕಾಲಮಿತಿಯೊಳಗೆ ರಾಜೀನಾಮೆ ಅಂಗೀಕರಿಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಈ ಹಂತದಲ್ಲಿ ಮದ್ಯ ಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಶಾಸಕರ ರಾಜೀನಾಮೆ ಅಥವಾ ಅನರ್ಹತೆಯ ಬಗ್ಗೆ ತೀರ್ಮಾನಿಸುವ ಹಕ್ಕು ಸ್ಪೀಕರ್‌ಗೆ ಇದೆ. ಸ್ಪೀಕರ್ ವಿವೇಚನಾಧಿಕಾರವನ್ನು ನಾವು ಪ್ರಶ್ನಿಸುವುದಿಲ್ಲ. ಕೈಬರಹದ ಮೂಲಕ ನಿಯಮಾವಳಿಗಳ ಮೂಲಕ ರಾಜೀನಾಮೆ ನೀಡಿದ್ದರೆ. ಅದನ್ನು ಅಂಗೀಕರಿಸಲು ವಿಳಂಬ ಮಾಡುವಂತೆಯೂ ಇಲ್ಲ. ಸ್ವಇಚ್ಛೆ ಮತ್ತು ಸತ್ಯ ಎರಡೇ ರಾಜೀನಾಮೆ ಅಂಗೀಕಾರಕ್ಕೆ ಇರುವ ಮಾನದಂಡ ಎಂದು ಹೇಳಿದರು.
ಈ ಮಧ್ಯೆ ವಾದ ಮುಂದುವರಿಸಿದ ಮುಕುಲ್ ರೋಹ್ಟಗಿ ಶಾಸಕರು ರಾಜೀನಾಮೆ ನೀಡಿರುವ ಹಕ್ಕನ್ನು ಸ್ಪೀಕರ್ ತಡೆಯುವಂತಿಲ್ಲ. ಕಲಂ 191/2 ಪ್ರಕಾರ ರಾಜೀನಾಮೆ ಶಾಸಕರ ಹಕ್ಕಾಗಿದೆ. ಪಕ್ಷದ ಶಿಸ್ತು ಉಲ್ಲಂಘಿಸಿದರೆ ಅದು ಸದನದ ಹೊರಗಿನ ವಿಷಯವಾಗಲಿದೆ. ಅನರ್ಹತೆಗೆ ಯಾವುದೇ ಕಾರಣಗಳಿಲ್ಲ ಎಂದು ತಮ್ಮ ವಾದ ಮಂಡಿಸಿದರು.
ಸರ್ಕಾರವನ್ನು ಉಳಿಸಿಕೊಳ್ಳಲು ರಾಜೀನಾಮೆ ಹಿಂಪಡೆಯಲು ಶಾಸಕರನ್ನು ಹೆದರಿಸಲು ಅನರ್ಹತೆಯ ವಿಷಯ ಪ್ರಸ್ತಾಪಿಸಲಾಗಿದೆ. ಅನರ್ಹತೆ ಮಾಡಲು ಯಾವುದೇ ಸ್ಪಷ್ಟ ಕಾರಣಗಳಿಲ್ಲ. ಇದಕ್ಕೆ ಸ್ಪೀಕರ್ ಬಳಿ ಸಾಕ್ಷಿಯೂ ಇಲ್ಲ ಎಂದು ಹೇಳಿದರು.
ಸ್ಪೀಕರ್ ವಿವೇಚನಾಧಿಕಾರವನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ಶಾಸಕರ ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ತೀರ್ಮಾನಿಸುವ ಹಕ್ಕಿದೆ. ಅದು ಬೇಗ ಆಗಲಿ ಎನ್ನುವುದಷ್ಟೇ ನಮ್ಮ ಉದ್ದೇಶ ಎಂದು ಹೇಳಿದರು.
ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದ ಮಂಡಿಸಿ ತಮ್ಮ ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಒಂದು ಸಾಂವಿಧಾನಿಕ ಸಂಸ್ಥೆ ಮತ್ತೊಂದು ಸಾಂವಿಧಾನಿಕ ಸಂಸ್ಥೆಗೆ ನಿರ್ದೇಶನ ನೀಡಲು ಬರುವುದಿಲ್ಲ. ಅತೃಪ್ತ ಶಾಸಕರ ರಾಜೀನಾಮೆಗೂ ಮುನ್ನ ಅವರ ಅನರ್ಹತೆಯ ದೂರು ಇದೆ. ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಬಗ್ಗೆ ಸ್ಪೀಕರ್ ನಾಳೆ ಇಲ್ಲವೇ ಬಹುಮತ ಸಾಭೀತಿಗೂ ಮುನ್ನವೇ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಿದರು.
ಆತುರಾತುರವಾಗಿ ರಾಜೀನಾಮೆ ವಿಷಯದ ಬಗ್ಗೆ ತೀರ್ಮಾನ ಕೈಗೊಳ್ಳುವುದು ಅಸಾಧ್ಯ. ಈ ರೀತಿ ಮಾಡಲೂ ಬಾರದು, ಅದಕ್ಕೊಂದು ಕ್ರಮವಿದೆ. ಆ ಪ್ರಕಾರವೇ ನಡೆಯಬೇಕು. ಒಂದು ವೇಳೆ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದರೆ ಸರ್ಕಾರ ಪತನವಾಗಲಿದೆ. ಹೀಗಾಗಿ ಸ್ಪೀಕರ್ ಅವರ ನಿರ್ಧಾರಕ್ಕೆ ಬಿಡುವುದು ಸೂಕ್ತ ಎಂದು ಹೇಳಿದರು.
ಭೋಜನ ವಿರಾಮದ ಹಿನ್ನೆಲೆಯಲ್ಲಿ ವಿಚಾರಣೆಯ್ನು 2 ಗಂಟೆಯ ನಂತರ ಮುಂದೂಡಲಾಯಿತು.

Leave a Comment