ಶಾಸಕರ ಬಗ್ಗೆ ಎಂಟಿಕೆ ಹಗರು ಹೇಳಿಕೆ ಸಲ್ಲದು: ಮುದ್ದೇಗೌಡ

ತುರುವೇಕೆರೆ, ಆ. ೧೮- ನಮ್ಮ ಪಕ್ಷದ ಶಾಸಕರಾದ ಮಸಾಲೆ ಜಯರಾಮ ನೀರಗಂಟಿಯಾಗಿ ನಿಂತು ತಾಲ್ಲೂಕಿನ ಎಲ್ಲ ಕೆರೆ-ಕಟ್ಟೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಇದನ್ನರಿಯದೆ ಬೆಂಗಳೂರಿನಲ್ಲಿ ವಾಸವಿರುವ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪನವರು ತಿಂಗಳಿಗೊಮ್ಮೆ ತಾಲ್ಲೂಕಿಗೆ ಬಂದು ನಮ್ಮ ಪಕ್ಷದ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಪಕ್ಷದ ವಕ್ತಾರ ಮುದ್ದೇಗೌಡ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕರಿಗೆ ಸೋಲಿನ ಹತಾಶ ಭಾವನೆ ಪದೇ ಪದೇ ಕಾಡಿದಂತಿದೆ. ಹಾಗಾಗಿ ಪತ್ರಿಕಾ ಹೇಳಿಕೆಗಳನ್ನು ನೀಡುವುದರ ಮೂಲಕ ಅವರ ಹತಾಶೆಯನ್ನು ಹೊರ ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿದ್ದುಕೊಂಡು ತಿಂಗಳಿಗೊಮ್ಮೆ ಬಂದು ಅವರ ಬಾಲಬುಡುಕರು ಹೇಳಿದಂತೆ ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ. ವಾಸ್ತವತೆ ಅರಿವಿಲ್ಲದೆ ಮಾತನಾಡುವುದರ ಬದಲು ಖುದ್ದು ಭೇಟಿ ನೀಡಿ ಮಾತನಾಡಲಿ, ಆಡಳಿತಾತ್ಮಕವಾಗಿ ಅವರು ಸಲಹೆ ನೀಡಿದರೆ ಸ್ವಾಗತಿಸುತ್ತೇವೆ. ಆದರೆ ವೃಥಾ ಆರೋಪ ಸರಿಯಲ್ಲ ಎಂದರು.

ಪಕ್ಷದ ಮಾಜಿ ಯುವ ಮೋರ್ಚಾ ಅಧ್ಯಕ್ಷ ಬಿ.ಎಂ.ಎಸ್. ಉಮೇಶ್ ಮಾತನಾಡಿ, ರಾಜಕಾರಣ ಮುಗಿದು ಹೋದ ಕಥೆ. ಅಭಿವೃದ್ದಿಗೆ ನಮ್ಮ ಪಕ್ಷದ ಶಾಸಕರಿಗೆ ಅವಕಾಶ ನೀಡಬೇಕು. ಹಾಗೆ ನೋಡಿದರೆ ಮಾಜಿ ಶಾಸಕರ ಕೊಡುಗೆ ತಾಲ್ಲೂಕಿಗೆ ನಗಣ್ಯ. ಹದಿನೈದು ವರ್ಷಗಳಿಂದ ಆಡಳಿತ ನಡೆಸಿದ ಮಾಜಿ ಶಾಸಕರು ಪಟ್ಟಣದ ವಾಣಿಜ್ಯ ಸಂಕೀರ್ಣಕ್ಕೆ ಕಾಯಕಲ್ಪ ಕಲ್ಪಿಸಲಾಗಲಿಲ್ಲ. ಒಳಚರಂಡಿ ವ್ಯವಸ್ಥೆ ಹಳ್ಳ ಹಿಡಿಯುವಂತೆ ಮಾಡಿದರು. ಮಲ್ಲಾಘಟ್ಟ ಕುಡಿಯುವ ನೀರಿನ ಕಾಮಗಾರಿಯೂ ಹಳ್ಳ ಹಿಡಿಯುವಂತೆ ಮಾಡಿದ್ದಾರೆ. ತಾಲೂಕಿನಾದ್ಯಂತ ಕಳಪೆ ರಸ್ತೆಗಳು ನಿರ್ಮಾಣವಾಗಿವೆ. ಇದಕ್ಕೆಲ್ಲಾ ಹೊಣೆ ಯಾರು, ಹದಿನೈದು ವರ್ಷದಲ್ಲಿ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ನಿರ್ಮಾಣ ಮಾಡಬಹುದಿತ್ತು. ಅದನ್ನು ಮರೆತು ಸೋಲಿನ ಹತಾಶ ಭಾವನೆಯಲ್ಲಿ ಶಾಸಕರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ನವೀನ್‍ಬಾಬು. ಪ್ರಧಾನ ಕಾರ್ಯದರ್ಶಿ ಜಿ.ವಿ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment