ಶಾಸಕರ ಖರೀದಿ ಯತ್ನ ಪರಿಷತ್‌ನಲ್ಲಿ ವಾಗ್ವಾದ ಸದನ ಮುಂದಕ್ಕೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಫೆ. ೧೧- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದು, ಈ ಪ್ರಕರಣವನ್ನು ತನಿಖೆಗೆ ನಡೆಸಬೇಕೆಂದು ಆಗ್ರಹಪಡಿಸಿ, ಆಡಳಿತ ಪಕ್ಷದ ಸದಸ್ಯರು ವಿಧಾನ ಪರಿಷತ್‌ನಲ್ಲಿಂದು ಪ್ರಸ್ತಾಪಿಸಿದಾಗ ಸದನದಲ್ಲಿ ಕಾವೇರಿದ ವಾತಾವರಣ ಉಂಟಾಯಿತು.

ಸದನ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯ ಐವಾನ್ ಡಿಸೋಜ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಯಡಿಯೂರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಪಡಿಸಿದರು.

ಐವಾನ್ ಡಿಸೋಜ ಅವರು ಸದನದಲ್ಲಿ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕೆರಳಿದ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿಯವರು ಮೊದಲು ನೀವು ರಾಜೀನಾಮೆ ನೀಡಬೇಕೆಂದು ತಿರುಗೇಟು ನೀಡಿದರು. ಆಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ವಾಗ್ದಾಳಿಯೇ ನಡೆಯಿತು. ಸಭಾಪತಿ ಪ್ರತಾಪ್ ಚಂದ್ರಶೇಖರ ಶೆಟ್ಟಿಯವರು ಆರೋಪ ಮತ್ತು ಪ್ರತಿ ಆರೋಪದಲ್ಲಿ ಮುಳುಗಿದ್ದ ಸದಸ್ಯರನ್ನು ಸುಮ್ಮನಿರುವಂತೆ ಮಾಡಿದ ಪ್ರಯತ್ನ ಫಲ ಕೊಡಲಿಲ್ಲ.

ಒಂದು ಹಂತದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪರಸ್ಪರ ಧಿಕ್ಕಾರದ ಘೊಷಣೆಗಳನ್ನು ಕೂಗಿದರು. ಆಗ ಸಹನೆ ಕಳೆದುಕೊಂಡ ಸಭಾಪತಿಯವರು ಈ ಸದನವನ್ನು ನೀವೇ ನಡೆಸಿಕೊಳ್ಳಿ. ಏನು ಬೇಕಾದರೂ ಮಾತನಾಡಿಕೊಳ್ಳಿ ಎಂದು ಸುಮ್ಮನೇ ಕುಳಿತರು. ಆಗಲೂ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಐವಾನ್ ಡಿಸೋಜ ಅವರು ಪರಸ್ಪರ ವಾಗ್ವಾದದಲ್ಲಿ ನಿರತರಾಗಿದ್ದರು.

ಯಡಿಯೂರಪ್ಪ ಅವರು ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದು, ಕೋಟ್ಯಂತರ ರೂಪಾಯಿ ಆಮಿಷವೊಡ್ಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಡಿಸೋಜ ಮತ್ತೊಮ್ಮೆ ಆಗ್ರಹಪಡಿಸಿದರು.

ಸದನ ದಿಕ್ಕು ತಪ್ಪುತ್ತಿದ್ದಿದ್ದನ್ನು ಕಂಡ ಸಭಾಪತಿಯವರು ಸದನವನ್ನು 5 ನಿಮಿಷಗಳ ಕಾಲ ಮುಂದೂಡಿದರು.

ಸದನ ಮತ್ತೆ ಸಮಾವೇಶಗೊಂಡಾಗ ಕಾಂಗ್ರೆಸ್ ಸದಸ್ಯರು ಪ್ರಕರಣವನ್ನು ತನಿಖೆ ನಡೆಸಬೇಕು ಎಂಬ ಪಟ್ಟನ್ನು ಮುಂದುವರೆಸಿದರು. ಆಗ ಸಭಾಪತಿಗಳು ಸಿಟ್ಟಿಗೆದ್ದ ಸಭಾಪತಿಗಳು ನೀವು ಈ ವಿಷಯ ಪ್ರಸ್ತಾಪಿಸಲು ನೋಟೀಸ್ ನೀಡಿಲ್ಲ. ಹಾಗಾಗಿ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಚರ್ಚೆ ನಡೆಸುವುದು ಬೇಡ ಎಂದು ಕಾಂಗ್ರೆಸ್ ಸದಸ್ಯರನ್ನು ಸುಮ್ಮನಾಗಿಸುವ ಪ್ರಯತ್ನ ನಡೆಸಿದರು.

ಹೆಚ್.ಎಂ.ರೇವಣ್ಣ ಅವರಿಗೆ ಪ್ರಶ್ನೆ ಕೇಳುವಂತೆ ಸೂಚನೆ ನೀಡಿದ್ದರು. ಆದರೆ ರೇವಣ್ಣ ಅವರು ಪ್ರಶ್ನೆ ಕೇಳಲು ಮುಂದಾಗಲಿಲ್ಲ. ಯಡಿಯೂರಪ್ಪ ರವರು ಕಾಂಗ್ರೆಸ್ ಸದಸ್ಯರಿಗೆ ಒಡ್ಡಿದ ಆಮಿಷದ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹ ಪಡಿಸಿದರು.
ಮತ್ತೆ ಸಿಟ್ಟಿಗೆದ್ದ ಸಭಾಪತಿಗಳು ನೋಟೀಸ್ ನೀಡದೇ ಇಚ್ಛೆ ಬಂದ ರೀತಿ ಮಾತನಾಡಲು ಆಗುವುದಿಲ್ಲ. ಪ್ರಶ್ನೋತ್ತರ ಕಲಾಪ ನಡೆಸಲು ಮುಂದಾಗಿದ್ದೇನೆ. ರೇವಣ್ಣ ನಿಮಗೆ ಹೇಳಿದರೇ ಅರ್ಥವಾಗುವುದಿಲ್ಲವೇ ಎಂದು ಗುಡುಗಿದರು.
ಸಭಾಪತಿಗಳ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಕಾಂಗ್ರೆಸ್ ನ ಪ್ರಕಾಶ್ ರಾಥೋಡ್ ರವರು ಯಡಿಯೂರಪ್ಪ ಅವರು ಮಾಡಿದ್ದು ಸಂವಿಧಾನಕ್ಕೆ ಅಪಚಾರವೆಸಗಿದ್ದಂತೆ. ಪ್ರಶ್ನೋತ್ತರ ಕಲಾಪವನ್ನು ಮುಂದೂಡಿ ಎಂದು ಸಭಾಪತಿ ಅವರಲ್ಲಿ ಮನವಿ ಮಾಡಿದರು.
ಐವಾನ್ ಡಿಸೋಜಾ ಅವರು ಯಡಿಯೂರಪ್ಪ ರವರು ರಾಜಕೀಯ ನಿವೃತ್ತ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಮಾತಿನಂತೆ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆಗೆ ಜೆಡಿಎಸ್ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಜೆಡಿಎಸ್ ನ ಶರವಣ್ಣ, ಭೋಜೇಗೌಡ, ಶ್ರೀ ಕಂಠೇಗೌಡ, ರಮೇಶ್ ಗೌಡ ಮತ್ತಿತರ ಸದಸ್ಯರು ಸಭಾಪತಿ ಅವರು ಪೀಠದ ಮುಂದಿನ ಭಾವಿಯೊಳಗೆ ಇಳಿದು ಧರಣಿ ನಡೆಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಜೆಡಿಎಸ್ ಸದಸ್ಯರು ಸದನದಲ್ಲಿ ಧರಣಿ ನಡೆಸುತ್ತಿದ್ದಂತೆ ಸಹನೆ ಕಳೆದುಕೊಂಡ ಬಿಜೆಪಿ ಸದಸ್ಯರು ಶೇಮ್ ಶೇಮ್ ಎಂದು ಕೂಗಿದರು. ಪ್ರತಿ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ಸದಸ್ಯರಿಗೆ ಮಾನ, ಮರ್ಯಾದೆ ಇಲ್ಲ. ತನಿಖೆ ಯಾರು ನಡೆಸಬೇಕು ಎಂಬುದೇ ಅವರಿಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಸದನದಲ್ಲಿ ಮತ್ತೆ ಗದ್ದಲ ಕೋಲಾಹಲ, ಉಂಟಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಮತ್ತೆ ಒಂದು ಗಂಟೆಗಳ ಮುಂದೂಡಿದರು.
ಸದನದ ಇತಿಹಾಸದಲ್ಲಿ ಆಡಳಿತ ಪಕ್ಷದ ಸದಸ್ಯರು, ಧರಣಿ ನಡೆಸುತ್ತಿರುವುದು ಇದೇ ಮೊದಲು ನೋಟೀಸ್ ನೀಡದೇ ಅನಗತ್ಯವಾಗಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ . ಆಡಳಿತ ಪಕ್ಷದವರಿಗೆ ಇದು ಶೋಭೆ ತರುವ ವಿಷಯವಲ್ಲ.
ಕೋಟಾ ಶ್ರೀನಿವಾಸ ಪೂಜಾರಿ
-ಪ್ರತಿಪಕ್ಷದ ನಾಯಕರು

Leave a Comment