ಶಾಸಕರ ಖರೀದಿ ದೋಸ್ತಿ ಬಿಜೆಪಿ ವಾಗ್ವಾದ

ಬೆಂಗಳೂರು, ಫೆ. ೧೨- ಶಾಸಕರ ಖರೀದಿ ಯತ್ನ ಹಾಗೂ ಮುಂಬೈನಲ್ಲಿರುವ ಜೆಡಿಎಸ್ ಶಾಸಕರೊಬ್ಬರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಸ್ತಾಪಿಸುತ್ತಿದ್ದಂತೆ ವಿರೋಧ ಪಕ್ಷ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಆಡಳಿತ ಪಕ್ಷದ ಸದಸ್ಯರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಉಂಟಾದ ಕೋಲಾಹಲ-ಗದ್ದಲದ ವಾತಾವರಣದ ನಡುವೆ ಸಭಾಧ್ಯಕ್ಷ ರಮೇಶ್ ಕುಮಾರ್ ಕಲಾಪವನ್ನು ಕೆಲಹೊತ್ತು ಮುಂದೂಡಿದ ಪ್ರಸಂಗ ನಡೆಯಿತು.

ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು, ಆಪರೇಷನ್ ಕಮಲದ ಆಡಿಯೋ ಕುರಿತು ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ತಂಡ ರಚನೆ ಮಾಡುವ ಸಭಾಧ್ಯಕ್ಷರ ಸಲಹೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ವಿಶೇಷ ತನಿಖಾ ತಂಡದಿಂದ ಈ ಪ್ರಕರಣ ಕುರಿತು ತನಿಖೆ ನಡೆಸುವುದು ಬೇಡ. ಸದನ ಸಮಿತಿ ಅಥವಾ ಹಾಲಿ ನ್ಯಾಯಾಧೀಶರೊಬ್ಬರಿಂದ ತನಿಖೆ ಮಾಡಿಸಬೇಕು ಎಂಬ ಒತ್ತಾಯದ ನಡುವೆ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, ಶಾಸಕರ ಖರೀದಿಗೆ ಬಿಜೆಪಿ ನಡೆಸಿರುವ ಯತ್ನಗಳ ಬಗ್ಗೆ ಪ್ರಸ್ತಾಪಿಸಲು ಮುಂದಾದರು.

ಪ್ರಸ್ತುತ ಮುಂಬೈನಲ್ಲಿರುವ ಜೆಡಿಎಸ್ ಶಾಸಕರೊಬ್ಬರ ಪರಿಸ್ಥಿತಿ ಕುರಿತು ಸದನದ ಗಮನಕ್ಕೆ ತರಲು ಕುಮಾರಸ್ವಾಮಿ ಅವರು ಮುಂದಾಗುತ್ತಿದ್ದಂತೆ ಬಿಜೆಪಿಯ ಮಾಧುಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಕೆಲವು ಬಿಜೆಪಿ ಸದಸ್ಯರು ಮುಂಬೈನಲ್ಲಿರುವ ಶಾಸಕರ ಬಗ್ಗೆ ನೀವು ಪ್ರಸ್ತಾಪ ಮಾಡುತ್ತಿದ್ದೀರಿ. ಗೋವಾದಲ್ಲಿ ಏನಾಯಿತು ಎಂಬುದನ್ನು ಹೇಳಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ಇದಕ್ಕೆ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಸದಸ್ಯರು ಏರಿದ ದನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಪರಿಸ್ಥಿತಿಯಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದು ಕೇಳದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸುಳಿವು ಅರಿತ ಸಭಾಧ್ಯಕ್ಷ ರಮೇಶ್ ಕುಮಾರ್, 15 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿ ಹೊರ ನಡೆದರು.

ಇದಕ್ಕೂ ಮುನ್ನ ಕುಮಾರಸ್ವಾಮಿ, ಸದನದಲ್ಲಿ ನಿನ್ನೆಯಿಂದ ನಾವು ಮಾತನಾಡಿಲ್ಲ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ತಮ್ಮ ಸರ್ಕಾರ ಹಾಗೂ ತಾವು ಪ್ರತಿಪಕ್ಷ ಸದಸ್ಯರ ಮೇಲೆ ಸೇಡಿನ ರಾಜಕಾರಣ ಮಾಡುತ್ತೇನೆಂಬ ಸಂಶಯವನ್ನು ಆ ಭಾಗದ ಸದಸ್ಯರು ವ್ಯಕ್ತಪಡಿಸಿದ್ದಾರೆ. ವಿಶೇಷ ತನಿಖಾ ತಂಡ ಸರ್ಕಾರದ ನಿಯಂತ್ರಣದಲ್ಲಿರುತ್ತದೆ. ಅವರ ಮನಬಂದಂತೆ ತನಿಖೆಯನ್ನು ಮಾಡಿಸಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಇಂತಹ ಅನುಮಾನ ಯಾರಿಗೂ ಬೇಡ ಎಂದರು.

ಅವರ (ಬಿಜೆಪಿ) ಜತೆಗೂ ಸೇರಿ ಸರ್ಕಾರ ಮಾಡಿದ್ದೇನೆ. ಅಂತಹ ಸಂದರ್ಭದಲ್ಲಿ 150 ಕೋಟಿ ರೂ. ಲಂಚ ಪಡೆದಿರುವುದಾಗಿ ನನ್ನ ಮೇಲೆ ಆರೋಪ ಹೊರಿಸಲಾಗಿತ್ತು. ಅಂತಹ ಸಂದರ್ಭದಲ್ಲೂ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ ಎಂದರು.

ವಿರೋಧ ಪಕ್ಷದ ನಾಯಕ ಯಡಿಯೂರಪ್ಪನವರು ನಮ್ಮ ಶಾಸಕರೊಬ್ಬರ ಪುತ್ರನಿಗೆ ರಾತ್ರಿ 11.30ಕ್ಕೆ ದೂರವಾಣಿ ಕರೆ ಮಾಡುವ ಅವಶ್ಯಕತೆ ಏನಿತ್ತು? 25 ಬಾರಿ ಫೋನ್ ಕರೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ಪುತ್ರ ನನಗೆ ಫೋನ್ ಮಾಡಿ ವಿಷಯ ತಿಳಿಸಿದರು. ಆಗ ನಾನೇ ಮಾತುಕತೆಗೆ ಹೋಗು ಎಂದು ಹೇಳಿದ್ದೆ. ಸರ್ಕ್ಯೂಟ್ ಹೌಸ್‌ನಲ್ಲಿ ಕಾಯ್ದುಕೊಂಡು ಮಾತನಾಡುವ ಅಗತ್ಯವಾದರೂ ಏನಿತ್ತು? ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಶಾಸಕರ ಬೆಂಬಲ ವಿಚಾರ ತೀರ್ಮಾನವಾಗಬೇಕಾಗಿರುವುದು ರಾಜಭವನದಲ್ಲಿ ಅಲ್ಲ, ಈ ಸದನದಲ್ಲಿ ಎಂಬ ತೀರ್ಪು ಬರಲು ಕರ್ನಾಟಕವೇ ಕಾರಣ ಎಂದ ಅವರು, ಸಮ್ಮಿಶ್ರ ಸರ್ಕಾರ ಬಂದಾಗಿನಿಂದ ಸರ್ಕಾರ ಪತನಗೊಳ್ಳುತ್ತದೆ ಎಂಬ ಗಡುವನ್ನು ಪದೇ ಪದೇ ನೀಡಲಾಗುತ್ತಿದೆ. ಸಂಕ್ರಾಂತಿಗೆ ಸರ್ಕಾರ ಬೀಳುತ್ತೆ ಎಂದು ಹೇಳಲಾಗಿತ್ತು ಎಂದರು.

ಶಾಸಕರ ಖರೀದಿ ಯಾರ ಕಾಲದಲ್ಲಿ ಆರಂಭವಾಗಿದ್ದು ಎಂದು ಕುಮಾರಸ್ವಾಮಿ ಅವರು ಹೇಳುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ತಾವು ಕುಳಿತಲ್ಲಿಂದಲೇ `ನಿಮ್ಮಿಂದಲೆ ಆರಂಭವಾಗಿದ್ದು’ ಎಂದು ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಆಗಲೂ ಮಾಧುಸ್ವಾಮಿ ಅವರು ಆಕ್ಷೇಪವನ್ನು ವ್ಯಕ್ತಪಡಿಸಿದಾಗ ಅದಕ್ಕೆ ದನಿಗೂಡಿಸಿದ ಯಡಿಯೂರಪ್ಪ ಅವರು ವಿಜಿಗೌಡ ಅವರನ್ನು ಎಂಎಲ್‌ಸಿ ಮಾಡಲು 25 ಕೋಟಿ ರೂ. ಕೇಳಿದ್ದಾದರೂ ಯಾರು? ಎಂದು ತಿರುಗೇಟು ನೀಡಿದರು.

ಮಾತು ಮುಂದುವರೆಸಿದ ಕುಮಾರಸ್ವಾಮಿ, ಅಲ್ಲಿಂದಲೇ ತನಿಖೆಯಾಗಬೇಕು,  ಆ ಕ್ಯಾಸೆಟ್‌ನ್ನು ಸದನದಲ್ಲಿ ಮಂಡಿಸಲು ಆಕ್ಷೇಪವಿಲ್ಲ, ನಾನು ನಿಮ್ಮಂತೆ(ಯಡಿಯೂರಪ್ಪ) ಪಲಾಯನವಾದಿ ಅಲ್ಲ. ಆ ಘಟನೆ ನಡೆದಿದ್ದು, ನನ್ನ ಮನೆಯಲ್ಲಿ. ಕಾರ್ಯಕರ್ತರ ಎದುರು, ಆ ಸಂದರ್ಭದಲ್ಲಿ ನಾನು ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನೆ. ನಮ್ಮದು ಪ್ರಾದೇಶಿಕ ಪಕ್ಷ, ನನಗೇ ದುಡ್ಡು ಕೊಡು ಎಂದು ವಿಜಿಗೌಡರನ್ನು ಕೇಳಲ್ಲ. ಅದು ನಮ್ಮ ಪಕ್ಷದ ವಿಷಯ ಎಂದರು.

ಮಾಧುಸ್ವಾಮಿ ಅವರು ಎದ್ದು ನಿಂತು ವಿಷಯ ದಾರಿ ತಪ್ಪುತ್ತಿದೆ. ಸ್ವೀಕರ್ ರಮೇಶ್ ಕುಮಾರ್ ವಿರುದ್ಧ ಆಡಿಯೋದಲ್ಲಿ ಕೇಳಿ ಬಂದಿರುವ ವಿಷಯಕ್ಕೆ ಸೀಮಿತವಾಗಿ ಚರ್ಚೆ ನಡೆಯಬೇಕು. ಎಲ್ಲವನ್ನೂ ಕಲಸುಮೇಲೊಗರ ಮಾಡುವ ಮೂಲಕ ತಲೆ ಕೊಡವಿಕೊಂಡು ಹೋಗಲಾಗುಪುದಿಲ್ಲ ಎಂದರು.

ಮಾಧುಸ್ವಾಮಿ ತಮ್ಮ ಟೀಕೆಯನ್ನು ಮುಂದುವರೆಸಿದಾಗ ಸಚಿವರಾದ ಬಿ.ಟಿ. ದೇವೇಗೌಡ, ವೆಂಕಟರಾವ್, ಪುಟ್ಟರಾಜು ಮತ್ತಿತರರು ಏಟಿಗೆ ಎದುರೇಟು ಎಂಬಂತೆ ಮಾತನಾಡಿದರು. ಆಗ ಕುಮಾರಸ್ವಾಮಿ ಅವರು ನನ್ನ ಕಡೆ ಕೈ ತೋರಿಸಿ ಮಾತನಾಡಿದ್ದಕ್ಕೆ ಈ ವಿಷಯವನ್ನು ಪ್ರಸ್ತಾಪ ಮಾಡಬೇಕಾಯಿತು.

ನನ್ನ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ ಎಂದು ಆ ಭಾಗದ (ವಿರೋಧ ಪಕ್ಷ) ಸದಸ್ಯರು ಹೇಳಿದ್ದರಿಂದ ಮಾತನಾಡಲು ಎದ್ದು ನಿಂತಿದ್ದೇನೆ. ಮುಂಬೈನಲ್ಲಿರುವ ನಮ್ಮ ಶಾಸಕರೊಬ್ಬರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ ಎಂದು ಹೇಳಿದಾಗ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಗದ್ದಲಕ್ಕೆ ಕಾರಣರಾದರು.

ಅದಕ್ಕೆ ಆಡಳಿತ ಪಕ್ಷದ ಸದಸ್ಯರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿ ಕೋಲಾಹಲ ವಾತಾವರಣ ಉಂಟಾದ ನಡುವೆ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದರು.

Leave a Comment