ಶಾಸಕರ ಖರೀದಿ ಆಡಿಯೋ ತನಿಖೆ : 15 ದಿನದಲ್ಲಿ ವರದಿ ಸಲ್ಲಿಸಲು ಸ್ಪೀಕರ್ ಸೂಚನೆ ಸಿಎಂ ಸಮ್ಮತಿ

ಬೆಂಗಳೂರು, ಫೆ. ೧೧- ರಾಜ್ಯ ರಾಜಕೀಯದಲ್ಲಿ ಅಲ್ಲೋಲ – ಕಲ್ಲೋಲ ಸೃಷ್ಟಿಸಿದ್ದ ಬಿಜೆಪಿ ನಾಯಕರು ಹಾಗೂ ಗುರುಮಿಠ‌ಕಲ್ ಶಾಸಕ ಪುತ್ರನ ಆಡಿಯೋ ವಿಚಾರ ವಿಧಾನಸಭೆಯಲ್ಲಿಂದು ಪ್ರಸ್ತಾಪವಾಗಿ ಈ ಆಡಿಯೋ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ 15 ದಿನದಲ್ಲಿ ವರದಿ ಸಲ್ಲಿಸುವಂತೆ ಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದರು.

ಇಂದು ಸದನ ಆರಂಭವಾಗುತ್ತಿದ್ದಂತೆಯೇ ಈ ಆಡಿಯೋ ಬಗ್ಗೆ ಪ್ರಸ್ತಾಪಿಸಿ ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಭಾವುಕರಾಗಿ ಮಾತನಾಡಿದ ಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ಅವರು, ಈ ಆಡಿಯೋ ಬಗ್ಗೆ ಯಾವ ರೀತಿ ತನಿಖೆ ಆಗಬೇಕು. ಈ ಆಡಿಯೋದಲ್ಲಿನ ವಿಚಾರ ಸದನದ ಹಕ್ಕುಚ್ಯುತಿಯೇ, ಇಲ್ಲವೇ ಎಂಬ ಬಗ್ಗೆ ಸದನದಲ್ಲಿ ಸುದೀರ್ಘವಾಗಿ ಸುಮಾರು 2 ಗಂಟೆ ಚರ್ಚೆ ನಡೆದ ನಂತರ ಅಂತಿಮವಾಗಿ ರೂಲಿಂಗ್ ನೀಡಿದರು. ಈ ಆಡಿಯೋ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸಿ 15 ದಿನದಲ್ಲಿ ತನಿಖಾ ವರದಿಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು.ಯಾವ ರೀತಿ ತನಿಖೆ ನಡೆಸಬೇಕು, ಕಾನೂನು ವಿಚಾರ, ಇವುಗಳನ್ನೆಲ್ಲಾ ನೀವೇ ಗಣನೆಗೆ ತೆಗೆದುಕೊಂಡು ವಿಶೇಷ ತಂಡದಿಂದ ತನಿಖೆ ಮಾಡಿಸಿ ಎಂದು ಸಭಾಧ್ಯಕ್ಷರು ಹೇಳಿ ಆಡಿಯೋ ಬಗೆಗಿನ ಚರ್ಚೆ ಮುಗಿದಿದೆ ಎಂದರು.

ಸಭಾಧ್ಯಕ್ಷರಿಂದಲೇ ಪ್ರಸ್ತಾಪ
ಇಂದು ಸದನ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್, ಸದನದ ಕಲಾಪ ಪಟ್ಟಿಯಂತೆ ಪ್ರಶ್ನೋತ್ತರ ನಡೆಸಬೇಕಿತ್ತು. ಆದರೆ ವಿಶೇಷ ಸನ್ನಿವೇಶ ಸೃಷ್ಠಿಯಾಗಿರುವುದರಿಂದ ಪ್ರಶ್ನೋತ್ತರ ನಡೆಸುತ್ತಿಲ್ಲ. ಕಳೆದ 8 ರಂದು ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಮಧ್ಯಾಹ್ನ 12.10 ರಲ್ಲಿ ಪತ್ರ ಕಳುಹಿಸಿದ್ದಾರೆ. ಪತ್ರದ ಜತೆ ಧ್ವನಿಸುರುಳಿಯನ್ನು ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳು ಮಾಧ್ಯಮಗಳಿಗೂ ಈ ಧ್ವನಿ ಸುರುಳಿಯನ್ನು ತಲುಪಿಸಿದ್ದಾರೆ. ಈ ಧ್ವನಿ ಸುರುಳಿಯಲ್ಲಿ ನನ್ನ ಹೆಸರು ಪ್ರಸ್ತಾಪವಾಗಿರುವ ಬಗ್ಗೆಯೂ ಹೇಳಿದ್ದಾರೆ. ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಕೆಲ ಅಭಿಮಾನದ ಮಾತುಗಳನ್ನು ನನ್ನ ಬಗ್ಗೆ ಆಡಿದ್ದಾರೆ. ಇದಕ್ಕೆ ನಮ್ರತೆಯಿಂದ ಕೃತಜ್ಞತೆ ಹೇಳುತ್ತೇನೆ. ಮುಂದೆಯೂ ಇದೇ ರೀತಿ ಸದನದಲ್ಲಿ ಇರುತ್ತೇನೆ ಎಂದು ಆಶ್ವಾಸನೆ ನೀಡಿದ್ದೇನೆ. ಇದೇ ರೀತಿ ಗೌರವಾನ್ವಿತವಾಗಿ ನಡೆದುಕೊಳ್ಳುತ್ತೇನೆ ಎಂದು ಸದನದಲ್ಲಿ ಹೇಳಿದರು.
ಧ್ವನಿ ಸುರುಳಿಯಲ್ಲಿನ ಸಂಭಾಷಣೆಯನ್ನು ಆಲಿಸಿದ್ದೇನೆ. ಧ್ವನಿಸುರಳಿಯಲ್ಲಿನ ಧ್ವನಿ ಹಾಗೂ ಸತ್ಯ ಹೊರ ಬರಬೇಕಾಗಿದೆ ಎಂದರು

ಈ ಶಾಸನ ಸಭೆಗೆ ಅಭಿಮಾನವಿಟ್ಟು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅದಕ್ಕೆ ಅಪಚಾರ, ಅವಮಾನ ಆಗಬಾರದು. ನನ್ನಿಂದ ಇದಕ್ಕೆ ಅವಮಾನ ಅಪಚಾರ ಆಗಿದೆ ಎಂದರೆ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋಗುತ್ತೇನೆ ಎಂದು ಭಾವುಕರಾಗಿ ಹೇಳಿ ದುಃಖದ ಸಂಗತಿ ಎಂದರೆ ಪ್ರಧಾನಿ ಮೋದಿ ಅವರ ಹೆಸರು ಇಲ್ಲಿ ಬಳಕೆಯಾಗಿದೆ. ಸಂಸತ್‌ ಬಗ್ಗೆ ಮತ್ತು ಶಾಸನ ಬಗ್ಗೆ ಇದು ಗೌರವ ತರುವುದಿಲ್ಲ ಎಂದರು.

ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರಾಗಿದ್ದ ತಮಿಳುನಾಡಿನ ಯಾರಾಚಳಿಯನ್ ಅವರು ಹೇಳಿದ ಮಾತುಗಳನ್ನು ಉಲ್ಲೇಖಿಸಿದ ಸಭಾಧ್ಯಕ್ಷರು, ಶಾಸನ ಸಭೆಯೇ ಕಷ್ಟವಾದರೆ ಅದು ಪ್ರಜಾಪ್ರಭುತ್ದವ ಅಂತ್ಯ ಎಂದಿದ್ದರು. ಹಾಗಾಗಿ ಈ ಧ್ವನಿ ಸುರುಳಿ ಬಗ್ಗೆ ತನಿಖೆಯಾಗಬೇಕಾಗಿದೆ. ಶುಕ್ರವಾರದಂದು ಬಜೆಟ್ ಇದ್ದಿದ್ದರಿಂದ ಇದನ್ನು ಪ್ರಸ್ತಾಪಿಸಲು ಸಾಧ್ಯವಾಗಲಿಲ್ಲ. ಕಳೆದ ಎರಡು ದಿನಗಳಿಂದ ನಾನು ಯಾವ ಮನಸ್ಥಿತಿಯಲ್ಲಿ ರಾತ್ರಿ ಕಳೆದಿದ್ದೇನೆ ಎಂಬುದನ್ನು ಊಹಿಸಿಕೊಳ್ಳಿ ಎಂದರು.

ಸತ್ಯ ಸಾಬೀತು ಆಗಲೇಬೇಕು. ಈ ಧ್ವನಿಸುರುಳಿಯಲ್ಲಿ ಮಾತನಾಡಿರುವುದು ಯಾರು ಎಂಬುದು ಗೊತ್ತಾಗಬೇಕು. ಎಲ್ಲಿ ಯಾವಾಗ ದುಡ್ಡು ಕೊಟ್ಟಿದ್ದಾರೆ. ಯಾವ ನೋಟುಗಳನ್ನು ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕಿದೆ. ನಾನು ಮಾಧ್ಯಮದವರಲ್ಲಿ ಮನವಿ ಮಾಡುತ್ತೇನೆ, ದೊಮಲೂರಿನ ಅಮರ್‌ಜ್ಯೋತಿ ಲೇಔಟ್‌ನ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಸರ್ಕಾರಿ ಮನೆ ತೆಗೆದುಕೊಂಡಿಲ್ಲ. ಹಣ ಇಡಲಿಕ್ಕೂ ಜಾಗಬೇಕಲ್ಲ, ಮಾಧ್ಯಮದವರು ಹೋಗಿ ನೋಡಿಕೊಂಡು ಬರಲಿ. ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಾಮಫಲಕ ಹಾಕಿಲ್ಲ. ಈ ರೀತಿ ಗೌರವಯುತವಾಗಿ ಬದುಕ್ಕಿದ್ದನೆ. ಈ ರೀತಿ ನನ್ನ ಬಗ್ಗೆ ಆಪಾದನೆ ಬಂದರೆ ಸಹಿಸಲಾಗುವುದು. ವಾಜಪೇಯಿ ಲೋಕಸಭೆಯಲ್ಲಿ ಹೇಳಿದ್ದು ನನ್ನ ಜ್ಞಾಪಕಕ್ಕೆ ಬರುತ್ತದೆ. ನನಗೆ ನನ್ನ ಸಾವಿನ ಬಗ್ಗೆ ಭಯವಿಲ್ಲ. ಚಾರಿತ್ರ್ಯ ವಧೆ ಸಾವಿಗಿಂತ ಹೆಚ್ಚಿನ ಕ್ರೌರ್ಯ ಎಂದಿದ್ದರು. ವಾಜಪೇಯಿ ಅವರಿಗೆ ನನ್ನನ್ನು ಹೋಲಿಸಿಕೊಳ್ಳುತ್ತಿಲ್ಲ. ಅವರ ಕಾಲಿನ ಉಗುರಿನ ಧೂಳಿಗೂ ನಾನು ಸಮವಲ್ಲ. ಆದರೆ ಅವರು ನಮ್ಮ ಆದರ್ಶಪ್ರಾಯರು. ನಾನು ಸಂಕಷ್ಟದ ಸನ್ನಿವೇಶದಲ್ಲಿದ್ದೇನೆ ಎಂದು ಭಾವುಕರಾದರು.
ನನ್ನ ತಂದೆ-ತಾಯಿಗೆ ನಾನು ಕೊನೆ 8ನೇ ಮಗ. ನಾನೇ ಕಡೆಯವನು. ನನ್ನ ತಾಯಿ ಆಗಾಗ ಹೇಳುತ್ತಿದ್ದರು. ನಮಗಿಂತ ಉಳ್ಳವರ ಮನೆಗೆ ಹೋಗಿ ವಾಪಸ್ ಬರುವಾಗ ನಮ್ಮ ಪಾದವನ್ನು ಅವರ ಹೊಸಲಿಗೆ ಉಜ್ಜಬೇಕು. ಅವರ ಧೂಳನ್ನು ಅಲ್ಲಿಯೇ ಬಿಡಬೇಕು ನಮ್ಮ ಮನೆಯವರಿಗೆ ತರಬಾರದು ಎಂದು. ಆ ರೀತಿಯ ನೈತಿಕತೆಯ ಪಾಠ ಕೇಳಿಕೊಂಡು ಬದುಕ್ತಿದ್ದೇನೆ. ನನ್ನ ತಾಯಿಯೇ ನನ್ನ ನೈತಿಕತೆಯ ಗುರು. ಫಿಲಾಸಫರ್, ನನ್ನ ತಾಯಿಯ ಮಾತುಗಳಂತೆ ನಾನು ಬದುಕಿದ್ದೇನೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು.

ಈ ಆರೋಪದಿಂದ ನನಗಂತೂ ನೋವಾಗಿದೆ. ಈ ಬಗ್ಗೆ ತನಿಖೆ ಆಗಲೇಬೇಕು ಎಂದರು. ಈ ಆಡಿಯೋ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ತನಿಖೆ ನಡೆಸಲು ಸೂಚನೆ ನೀಡುತ್ತೇನೆ ಎಂದು ಸಭಾಧ್ಯಕ್ಷರು ಹೇಳುತ್ತಿದ್ದಂತೆಯ ಎದ್ದು ನಿಂತ ಸಚಿವ ಕೃಷ್ಣಭೈರೇಗೌಡ, ತಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದಾಗ ಸಭಾಧ್ಯಕ್ಷರು ಒಪ್ಪಿ, ಮಾತನಾಡಲು ಅವಕಾಶ ನೀಡಿದರು .

ಕೃಷ್ಣಭೈರೇಗೌಡ ಮಾತನಾಡಿ, ನಿಮಗಾಗಿರುವ ನೋವು ನಮಗೆ ಅರ್ಥವಾಗುತ್ತದೆ. ಇದು ನಿಮ್ಮಗಷ್ಟೇ ಆದ ಅಪಮಾನ ಅಲ್ಲ ಇಡೀ ಸನದಕ್ಕೆ ಆದ ಅಪಮಾನ. ಇದು ಸದನದ ಹಕ್ಕುಚ್ಯುತಿಯಾಗುತ್ತದೆ. ನೀವು ಹೃದಯ ವೈಶಾಲ್ಯತೆ ಮೆರೆದು ಮಾತನಾಡಿರುವವರನ್ನು ಮನ್ನಿಸಬಹುದು ಆದರೆ ಸಭಾಧ್ಯಕ್ಷರ ಬಗ್ಗೆ ಈ ರೀತಿ ಮಾತನಾಡುವುದು ಹಕ್ಕುಚ್ಯುತಿ. ಜತೆಗೆ ಸದನದ ನಿಂದನೆ ಹಾಗಾಗಿ ಈ ಬಗ್ಗೆ ತನಿಖೆಯಾಗಲೇಬೇಕು ಎಂದರು.
ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಬಿಜೆಪಿಯ ಮಾಧುಸ್ವಾಮಿ, ಸಭಾಧ್ಯಕ್ಷರೇ ನಿಮಗೆ ಅಪಮಾನವಾದರೆ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ನಿಮ್ಮ ಬಗ್ಗೆ ಅತೀವ ಗೌರವವಿದೆ. ನೀವು ಏನೆಂಬುದು ನನಗೆ ಗೊತ್ತಿದೆ. ನಿಮ್ಮ ಬಗ್ಗೆ ಆರೋಪ ಮಾಡಿದವರಿಗೆ ಶಿಕ್ಷೆ ಆಗಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಯಾರೋ ಹೊರಗಡೆ ಮಾತನಾಡಿರುವುದುನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಈ ಪ್ರಕರಣವನ್ನು ಇಲ್ಲಿಯೇ ಕೈಬಿಡಿ ಎಂದು ಮನವಿ ಮಾಡಿದರು.

‌ಆಗ ಸಭಾಧ್ಯಕ್ಷರು ಸಹ ಸಾಧ್ಯವಿಲ್ಲ. ಯಾರು ಮಾತನಾಡಿದ್ದಾರೆ ಎಂಬುದು ಗೊತ್ತಾಗಲೇಬೇಕು. ಈ ಮಾತುಗಳನ್ನು ಜವಾಬ್ದಾರಿ ಸ್ಥಾನದಲ್ಲಿರುವವರೇ ಎಂಬುವುದು ನನಗೆ ಆಡಿಯೋದಿಂದ ಮನವರಿಕೆಯಾಗಿದೆ. ಜತೆಗೆ ಆಡಿಯೋದಲ್ಲಿ ಹಿಂದೆ ನಾವು ಆಪರೇಷನ್ ಕಮಲಕ್ಕೆ ಒಳಗಾಗಿ ಸಭಾಧ್ಯಕ್ಷರಿಂದ ಅನರ್ಹಗೊಂಡು ನಂತರ ನ್ಯಾಯಾಲಯದಲ್ಲಿ ಗೆದ್ದು ಬಂದಿದ್ದೇವೇ ಎಂಬ ಮಾತುಗಳನ್ನು ಹೇಳಿದ್ದಾರೆ. ಇಂತಹ ಪ್ರಕ್ರಿಯೆಯಲ್ಲಿ ಒಳಗಾಗಿರುವವರೆ ಇದರಲ್ಲಿ ಭಾಗಿಯಾಗಿದ್ದಾರೆ. ಅದು ಯಾರೆಂಬುದು ಗುರುತು ಹಚ್ಚಬೇಕು. ಇದನ್ನು ಇಲ್ಲಿಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ವಿಚಾರದ ಬಗ್ಗೆ ಸದನದಲ್ಲಿ ಸಾಕಷ್ಟು ಜಿಜ್ಞಾಸೆ, ವಾದ ಪ್ರತಿವಾದಗಳು ನಡೆದವು. ಸದನದಲ್ಲಿ ಈ ಬಗ್ಗೆ ಮಾತನಾಡಿದ ಸದಸ್ಯರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್. ಈಶ್ವರಪ್ಪ, ಕೆ.ಜಿ. ಬೋಪಯ್ಯ, ರಾಜೀವ್, ಸಿ..ಟಿ. ರವಿ ಸುರೇಶ್‌ಕುಮಾರ್, ಸಚಿವ ಡಿ.ಕೆ. ಶಿವಕುಮಾರ್, ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವು ಸದಸ್ಯರು ಸಭಾಧ್ಯಕ್ಷ ರಮೇಶ್‌ಕುಮಾರ್ ರವರು ಎಂತಹವರು, ಅವರ ವ್ಯಕ್ತಿತ್ವ, ಅವರ ಪ್ರಾಮಾಣಿಕ ಬದುಕಿನ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಆ ರೀತಿ ಆದರ್ಶಪ್ರಾಯವಾಗಿ ಅವರು ಇದ್ದಾರೆ. ಅವರ ಬಗ್ಗೆ ಈ ರೀತಿ ಮಾತನಾಡಿರುವುದು ಸರಿಯಲ್ಲ. ತನಿಖೆ ಆಗಲೇಬೇಕು ಎಂದು ದ್ವನಿಗೂಡಿಸಿದರು.

Leave a Comment