ಶಾಸಕರ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಖರ್ಗೆ ಆರೋಪ

 

ಕಲಬುರಗಿ,ಅ.22-ರಾಜ್ಯ ಬಿಜೆಪಿ ಸರ್ಕಾರ ಶಾಸಕರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಆರ್ಥಿಕ ಇಲಾಖೆಯಿಂದ ಟೆಂಡರ್ ಆದ, ಕ್ರೀಯಾ ಯೋಜನೆ ಸಿದ್ಧಗೊಂಡ ಮತ್ತು ಆರ್ಥಿಕ ಅನುಮೋದನೆ ದೊರೆತ ಕೆಲಸಗಳನ್ನು ಸರ್ಕಾರ ವಿನಾ ಕಾರಣ ರದ್ದು ಮಾಡುವ ಕೆಟ್ಟ ಪದ್ಧತಿ ಬೆಳೆಯುತ್ತಿದೆ ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಮತಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತ್ ರಾಜ್ ಮತ್ತು ಲೋಕೋಪಯೋಗಿ ಇಲಾಖೆ ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು 400 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಸರ್ಕಾರ ತಡೆಹಿಡಿದಿದೆ.ನಮ್ಮ ಸರ್ಕಾರವಿದ್ದಾಗ ಜಿಲ್ಲೆಯಲ್ಲಿ ಈ ರೀತಿ ಶಾಸಕರ ಮಧ್ಯೆ ತಾರತಮ್ಯ ಮಾಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಶಾಸಕರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಮಾಡುವ ಕೆಟ್ಟ ಚಾಳಿ ಬೆಳೆಸಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ರೀತಿಯ ತಾರತಮ್ಯ ಮಾಡಿರಲಿಲ್ಲ. ಚಿಂಚೋಳಿ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತರು, ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಶಾಸಕರಾದರೂ ಆ ಕ್ಷೇತ್ರದ ಅಭಿವೃದ್ಧಿಗೆ 30 ಕೋಟಿ, ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಆ ಕ್ಷೇತ್ರಕ್ಕೆ 20 ಕೋಟಿ, ಆಳಂದ 6 ಕೋಟಿ, ಐ.ಎ.ಎಸ್., ಕೆ.ಎ.ಎಸ್. ಟ್ರೇನಿಂಗ್ ಸೆಂಟರ್ ತರೆಯಲು 16 ಕೋಟಿ, ಎಲ್ಲ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯರ ಕ್ಷೇತ್ರಕ್ಕೆ 11.5 ಕೋಟಿ ರೂಪಾಯಿ ಅನುದಾನ ನೀಡಿದ್ದೇವೆ. ಯಾವುದೇ ಪಕ್ಷಭೇದ ಮಾಡದೆ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಸಕರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದಷ್ಟೇ ಅಲ್ಲ, ಟೆಂಡರ್, ಕ್ರೀಯಾ ಯೋಜನೆ ಮತ್ತು ಆರ್ಥಿಕ ಅನುಮೋದನೆ ದೊರೆತ ಕೆಲಸಗಳಿಗೆ ಕಡಿವಾಣ ಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಶಾಸಕರು ಮತ್ತು ಪಕ್ಷಗಳ ನಡುವೆ ತಾರತಮ್ಯ ಮಾಡುವುದಿಲ್ಲ, ದ್ವೇಷದ ರಾಜಕಾರಣ ಮಾಡುವುದಿಲ್ಲ. ಬಸವಣ್ಣನವರು ಹೇಳಿದ ಸಮಾನತೆ ತತ್ವದಲ್ಲಿ ಕಾರ್ಯನಿರ್ವಹಿಸುವೆ ಎಂದು ಭಾಷೆ ನೀಡಿದ್ದರು. ಆದರೆ ಈಗ ಮಾಡುತ್ತಿರುವುದು ಏನು ಎಂದು ಖರ್ಗೆ ಪ್ರಶ್ನಿಸಿದರು.

@12bc = ಕಲಬುರಗಿ ಅನಾಥ

ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಕಲಬುರಗಿ ಅಕ್ಷರಶ: ಅನಾಥವಾದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ಸಾಮಾಜಿಕ ಸಾಮಾಜಿಕ ನ್ಯಾಯ ಮತ್ತು ಸಮಾನತೆ ನಿರೀಕ್ಷಿಸಿದ್ದೇವು. ಆದರೆ ಅವರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಬಿಜೆಪಿ ಶಾಸಕರನ್ನು ಹೊರತುಪಡಿಸಿ ಬೇರೆ ಪಕ್ಷದ ಶಾಸಕರನ್ನು ಕರೆದಿಲ್ಲ. ನಾವು ಅನಾಥರಾದಂತಾಗಿದ್ದೇವೆ, ನಾವು ಏನಾದರು ಹೇಳಬೇಕು ಎಂದರೆ ಯಾರ ಮುಂದೆ ಹೇಳಬೇಕು ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಡಿಪ್ತೀರಿಯಾ ಸೊಂಕು ಕಾಣಿಸಿಕೊಂಡಿದೆ. 30 ಜನ ಮೆಡಿಕಲ್ ವಿದ್ಯಾರ್ಥಿಗಳು ಜಿಮ್ಸ್ ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿಯೇ 110 ಜನ ಚಿಕಿತ್ಸೆ ಪಡೆದಿದ್ದಾರೆ. ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಆದರೆ ಈ ಬಗ್ಗೆ ಸಚಿವರು ಗಮನವೇ ಹರಿಸಿಲ್ಲ ಎಂದು ದೂರಿದರು.

@12bc = ಕೇವಲ ಹೆಸರು ಬದಲಾವಣೆ

ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಗಂಜಿ ಕೇಂದ್ರವನ್ನು ಕಾಳಜಿ ಕೇಂದ್ರ ಎಂದು ಕೇವಲ ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿಯಾಗುವುದಿಲ್ಲ. ಒಂದು ರೂಪಾಯಿಯ ಕೆಲಸ ಮಾಡದೇ ಭಾವನಾತ್ಮಕವಾಗಿ ಜನರ ಮನ ಒಲಿಸುವ ಕೆಲಸ ನಡೆಯುತ್ತಿದೆ. ಈ ಭಾಗವನ್ನು ಕಲ್ಯಾಣ ಕರ್ನಾಟಕ ಮಾಡಲು ಬದ್ಧತೆ ಬೇಕು, ಪ್ರಾಮಾಣಿಕ ಪ್ರಯತ್ನಬೇಕು. ಕೇವಲ ಹೆಸರು ಬದಲಿಸಿದರೆ ಅಭಿವೃದ್ಧಿಯಾಗುವುದಿಲ್ಲ ಎಂದರು.

ಮುಖ್ಯಮಂತ್ರಿಗಳು ಸದನದಲ್ಲಿ ನೀಡಿದ ಭರವಸೆಯಂತೆ ನಡೆದುಕೊಂಡರೆ ಜನ ಕ್ಷಮೀಸುತ್ತಾರೆ. ಇದೇ ರೀತಿ ದ್ವೇಷದ ರಾಜಕಾರಣ ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದರ ಜೊತೆಗೆ ಕಾನೂನು ಹೋರಾಟ ನಡೆಸಬೇಕಾದದ್ದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಈ ಸರ್ಕಾರ ಪೂರ್ಣಾವಧಿ ಪೂರೈಸುವುದು ಅನುಮಾನ. ಅವರವರಲ್ಲಿಯೇ ಹೊಂದಾಣಿಕೆ ಇಲ್ಲ. ಚುನಾವಣೆಗೆ ತಯಾರಿ ನಡೆಸುತ್ತಿದೆ ಎನಿಸುತ್ತಿದೆ. ಶಾಸಕರಿಗೆ ಆಮಿಷ ಒಡ್ಡುವ, ಮಣಿಯದೆ ಹೋದವರ ಮೇಲೆ ಐ.ಟಿ, ಇಡಿ ದಾಳಿ ನಡೆಸುವ ಮೂಲಕ ಹೆದರಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಜಿ.ಪಂ.ಸದಸ್ಯ ಅರುಣಕುಮಾರ ಪಾಟೀಲ, ವಿಜಯಕುಮಾರ ಜಿ.ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

 

Leave a Comment