ಶಾಸಕರು ಗೈರು ಕೈ ಪಾಳಯದಲ್ಲಿ ತಳಮಳ

ಬೆಂಗಳೂರು, ಮೇ 16- ಕೆ.ಪಿ.ಸಿ.ಸಿ ಕಛೇರಿಯಲ್ಲಿಂದು ಬೆಳಿಗ್ಗೆ 8-30 ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿತ್ತಾದರೂ 1 ಘಂಟೆಯಾದರೂ ಕೆಲ ಶಾಸಕರು ಸಭೆಗೆ ಆಗಮಿಸದಿದ್ದುದು ಕಾಂಗ್ರೆಸ್ ಪಾಳಯದಲ್ಲಿ ತಳಮಳ ಮೂಡಿಸಿತ್ತು.

ಅಂತಿಮವಾಗಿ ಮದ್ಯಾಹ್ನ 1-30ರ ವೇಳೆಗೆ ಬಳ್ಳಾರಿಯ ಬಿ. ನಾಗೇಂದ್ರ ಹಾಗೂ ಆನದ ಸಿಂಗ್ ಹೊರತುಪಡಿಸಿ ಎಲ್ಲಾ ಶಾಸಕರು ಆಗಮಿಸಿದ್ದು, ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಡುವಂತಾಯಿತು.

ಬಳ್ಳಾರಿ ಜಿಲ್ಲೆಯ ಡಿ. ನಾಗೇಂದ್ರ, ಆನಂದ ಸಿಂಗ್, ಬೆಳಗಾವಿಯ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಅವರುಗಳ ಗೈರು ಹಾಜರಾತಿ ಹಿರಿಯ ಮುಖಂಡರಲ್ಲಿ ತಳಮಳ ಮೂಡಿಸಿದ್ದಲ್ಲದೆ, ಬಿಜೆಪಿ ಇವರನ್ನು ಆಪರೇಶನ್ ಕಮಲದ ಮೂಲಕ ತನ್ನತ್ತ ಸೆಳದಿದೆಯೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದು ಸಹ ಕಂಡುಬಂತು.

ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ ಹೊಸದಾಗಿ ವಿಧಾನಸಭೆಗೆ ಚುನಾಯಿತಗೊಂಡಿರುವ ಕಾಂಗ್ರೆಸ್ ಶಾಸಕರ ಸಭೆಯನ್ನು ಇಂದು ಬೆಳಿಗ್ಗೆ 8-30ಕ್ಕೆ ನಿಗದಿಗೊಳಿಸಿ ಸಭೆಗೆ ಶಾಸಕರನ್ನು ಆಹ್ವಾನಿಸಿದ್ದರು.

ಬೆಳಿಗ್ಗೆ 8-30ಕ್ಕೆ ಸಭೆ ಆರಂಭಗೊಂಡಿತಾದರೂ ಆಗ ಸುಮಾರು 20 ಶಾಸಕರಷ್ಟೆ ಹಾಜರಿದ್ದರು. ಕ್ರಮೇಣ ಒಬ್ಬೊಬ್ಬ ಶಾಸಕರು ಆಗಮಿಸಿದರು. ಗಂಟೆ 11 ಆದಾಗ 56 ಜನ ಶಾಸಕರಷ್ಟೆ ಸಭೆಗೆ ಬಂದಿದ್ದರು. ಉಳಿದ 22 ಶಾಸಕರ ಗೈರು ಇಡೀ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ತಳಮಳಕ್ಕೆ ಕಾರಣವಾಗಿತ್ತು.

ನಂತರದಲ್ಲಿ ಮದ್ಯಾಹ್ನ 1 ಗಂಟೆ ವೇಳೆಯ ಹೊತ್ತಿಗೆ 69 ಶಾಸಕರ ಹಾಜರಾತಿ ಕಂಡುಬಂತು. ಉಳಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್‍ಗೆ ಬಂದಿದ್ದ ಹಾಗೂ ಬಿಜೆಪಿ ರೆಡ್ಡಿ ಸಹೋದರರ ಆಪ್ತರಾಗಿದ್ದ ಬಿ. ನಾಗೇಂದ್ರ, ಆನಂದ ಸಿಂಗ್ ಹಾಗೂ ಬೆಳಗಾವಿಯ ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಹೊರತುಪಡಿಸಿ ಎಲ್ಲಾ ಶಾಸಕರು ಸಭೆಗೆ ಬಂದಂತಾಯಿತು.

ಇನ್ನು ಜೆ.ಡಿ.ಎಸ್ ನಿಂದ ಕಾಂಗ್ರೆಸ್ ಸೇರಿ ಗೆಲವು ಸಾಧಿಸಿರುವ ಬೆಂಗಳೂರು ಶಾಸಕರಾದ ಜಮೀರ್ ಅಹ್ಮದ್ ಖಾನ್ ಮತ್ತು ಅಕಂಡ ಶ್ರೀನಿವಾಸ್ ಅವರು ಸಭೆಯ ಕೊನೆಯ ಗಳಿಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಖಂಡರು ನಿಟ್ಟುಸಿರು ಬಿಡುವಂತಾಯಿತು.

ಹಾಗೆಯೇ ಬೆಳಗಾವಿ ಜಿಲ್ಲೆಯಲ್ಲಿ ಚುನಾಯಿತಗೊಂಡಿರುವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಸಹ ಕಾಣಸಿಕೊಳ್ಳಲಿಲ್ಲ. ಆದರೂ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂಬ ಕಛಿತತೆ ನಾಯಕರಲ್ಲಿ ಕಂಡುಬಂತು.

ವಿಧಾನಸಭೆ ಚುನಾವಣೆಯಲ್ಲಿ ಚುನಾಯಿತಗೊಂಡ ಶಾಸಕರಿಗೆ ಚುನಾವಣಾಧಿಕಾರಿಗಳು ಪ್ರಮಾಣ ಪತ್ರಗಳನ್ನು ನೀಡಿದಾಗ ಸಂಜೆ 7 ಗಂಟೆ ಮೀರಿತ್ತು. ನಂತರದಲ್ಲಿ ಗೆದ್ದ ಶಾಸಕರು ಸಂಭ್ರಮಾಚರಣೆ, ಸಿಹಿ ಹಂಚುವಿಕೆ ಇತ್ಯಾದಿಗಳಲ್ಲಿ ತೊಡಗಿಕೊಂಡು ಕೆಲ ಶಾಸಕರು ತಡವಾಗಿ ಸಭೆಗೆ ಆಗಮಿಸಿದರು. ಇದು ಕೆ.ಪಿ.ಸಿ.ಸಿ ಕಛೇರಿಯಲ್ಲಿದ್ದ ಹಿರಿಯ ನಾಯಕರ ತಳಮಳಕ್ಕೆ ಕಾರಣವಾಗಿತ್ತು.

ಶಾಸಕರು ಕೈತಪ್ಪಿ ಹೋಗದಂತೆ ತಡೆಯಲು ಬಳ್ಳಾರಿ, ಹುಬ್ಬಳ್ಳಿ ಇತರೆಡೆಗಳಿಂದ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಗಳನ್ನು ಸಹ ವ್ಯವಸ್ಥೆ ಮಾಡಲಾಗಿತ್ತು.

ಒಟ್ಟಿನಲ್ಲಿ ಮದ್ಯಾಹ್ನ 1-30 ವೇಳೆಗೆ ಇನ್ನೂ 4 ಶಾಸಕರು ಸಭೆಗೆ ಬಾರದಿದ್ದುದು ತೀರ್ವ ತಳಮಳಕ್ಕೆ ಎಡೆಮಾಡಿಕೊಟ್ಟಿತ್ತು.

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಗೊಂಡಿರುವ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿವೆ.
ಬಿಜೆಪಿ ಆಪರೇಶನ್ ಕಮಲಕ್ಕೆ ಮುಂದಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಸಹ ರಣತಂತ್ರ ರೂಪಿಸಿದ್ದು, ಬಿಜೆಪಿಯ 8 ಶಾಸಕರಿಗೆ ಗಾಳ ಹಾಕಲು ಮುಂದಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ಶಾಸಕರನ್ನು ಸೆಳೆಯುವ ಜವಾಬ್ದಾರಿ ನೀಡಲಾಗಿದೆ. ಉತ್ತರ ಕರ್ನಾಟಕದ 8 ಶಾಸಕರಿಗೆ ಗಾಳ ಹಾಕಲು ಕಾಂಗ್ರೆಸ್ ಮುಂದಾಗಿದ್ದು, ಹೈಕಮಾಂಡ್ ಸೂಚನೆಯ ಮೇರೆಗೆ ಬಿ.ಜೆ.ಪಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಈ ಸಂಬಂಧ ಕೆ.ಪಿ.ಸಿ.ಸಿ ಕಛೇರಿಯಲ್ಲಿಂದು ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ ಪ್ರತ್ಯೇಕವಾಗಿ ಕುಳಿತು ಬಿಜೆಪಿ ಶಾಸಕರನ್ನು ಸಂಪರ್ಕಿಸುವ ಕಾರ್ಯದಲ್ಲಿ ತೊಡಗಿದ್ದರು.

ಇದಕ್ಕೆ ಇಂಬು ನೀಡುವಂತೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿ ಬಿಜೆಪಿಯ 6 ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದು ಸದ್ಯದಲ್ಲಿಯೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದರು.

Leave a Comment