ಶಾಲೆ ಕಡೆ, ನನ್ನ ನಡೆ ಜನರ ಸಹಕಾರಕ್ಕೆ ಮನವಿ

ಬೆಂಗಳೂರು, ಮೇ 18: ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕೆ ನೀಡುತ್ತಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಕರೆತರುವ ಜವಾಬ್ದಾರಿ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕರ ಮೇಲಿದೆ ಎಂದು ಕನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದರು.

ಇಂದು ಮದ್ಯಾಹ್ನ ಬಾಲ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಾಲೆ ಕಡೆ ನನ್ನ ನಡೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ರಾಜ್ಯ ಮಟ್ಟದ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಜವಾಬ್ದಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಸಾರ್ವಜನಿಕರ ಸಹಕಾರವೂ ಬಹಳ ಮುಖ್ಯ ಎಂದು ತಿಳಿಸಿದರು.

ಎಲ್ಲಾ ಮಕ್ಕಳಿಗೂ ಉಚಿತ ಕಡ್ಡಾಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕನ್ನು ಒಂದು ಮೂಲಭೂತ ಹಕ್ಕನ್ನಾಗಿ ಸರ್ವೊಚ್ಛ ನ್ಯಾಯಾಲಯ 1993 ರಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ-2009 ಅತ್ಯಂತ ಮಹತ್ವದ ಕಾಯ್ದೆಯಾಗಿದೆ ಎಂದರು.

ಪ್ರತಿಯೊಂದು ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ 6 ರಿಂದ 14 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತಂದು ಶಿಕ್ಷಣ ನೀಡುವುದು ಅತ್ಯವಶ್ಯಕವಾಗಿದೆ. ಈ ಅಭಿಯಾನ ಯಶಸ್ವಿಯಾಗಬೇಕಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಪ್ರಾಧಮಿಕ ಶಿಕ್ಷಣ ಇಲಾಖೆಯಿಂದ 6 ರಿಂದ 14 ವರ್ಷದ ಸುಮಾರು 70 ಸಾವಿರದ 116 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದನ್ನು ಗುರುತಿಸಲಾಗಿದೆ. ಈ ಎಲ್ಲ ಮಕ್ಕಳನ್ನು ಶಾಲೆಯ ಮುಖ್ಯವಾಹಿನಿಗೆ ತರಲು ಯೋಜನೆ ರೂಪಿಸಲಾಗಿದ್ದು, ಶಿಕ್ಷಣ ಇಲಾಖೆ ಹಾಗೂ ಇಲಾಖೆಯೇತರ ಸಮನ್ವಯತೆ ಅಗತ್ಯವಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿ ಮನೆಮನೆಗೆ ತೆರಳಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.

ಶೈಕ್ಷಣಿಕ ಸಾಲಿನ ಶಾಲೆಗಳ ಪ್ರಾರಂಭದ ಪೂರ್ವದಲ್ಲಿ ಅಂದರೆ ಮೇ 25 ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಜಿಲ್ಲಾ ಮಟ್ಟದಲ್ಲಿ, ನಂತರ ತಾಲೂಕು ಮಟ್ಟದಲ್ಲಿ ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಈಗಾಗಲೆ ಶಿಕ್ಷಣ ಇಲಾಖೆಯಿಂದ ನಿಗದಿಗೊಳಿಸಿರುವಂತೆ ಮೇ. 29 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ಅಂತೋನಿ ಸಬಾಸ್ಟಿಯನ್, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ ಹಂಚಾಟೆ, ಡಾ. ಕೃಪಾ ಅಮರ್ ಅಳ್ವಾ, ಎಸ್. ಜಯಕುಮಾರ್, ಯುನಿಸೆಫ್ ಪ್ರತಿನಿಧಿ ಸೋನಿಕುಟ್ಟಿ ಜಾರ್ಜ್, ನೀಲಂ ಮಾಬಿಜಾನಿ, ಡಾ. ನಿರಂಜನ ಆರಾಧ್ಯ ಹಾಜರಿದ್ದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಶಾಲೆಯಿಂದ ಹೊರಗುಳಿದ 5 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಯಿತು.

Leave a Comment