ಶಾಲೆಗಳು ಅಕ್ಷರ ಕಲಿಸುವ ದೇಗುಲಗಳು

ಮಧುಗಿರಿ, ಜ. ೧೨- ನಮ್ಮ ಶಾಲೆಗಳು ಅಕ್ಷರ ಕಲಿಸುವ ದೇಗುಲಗಳು. ಆ ನಿಟ್ಟಿನಲ್ಲಿ  ಮಕ್ಕಳಲ್ಲಿ ಅರಿವನ್ನು ಎಚ್ಚರಿಸಿ ಬದುಕುವ ಕಲೆಯನ್ನು ಕಲಿಸುವಂತಾಗಬೇಕು. ಆ ಮೂಲಕ ಸಮಾಜದ ಆಸ್ತಿಯಾಗಿ ಮಕ್ಕಳು ರೂಪಿತವಾಗಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.
ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆಯ 2018-19ನೇ ಸಾಲಿನ ಚಿರೆಕ್ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆತ್ತವರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಜತೆಗೆ ಶಾಲೆಗಳು ಉತ್ತಮ ಸತ್ಪ್ರಜೆಗಳನ್ನಾಗಿ ನಿರ್ಮಿಸುವ ದೇಗುಲಗಳಾಗಬೇಕು. ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ದೇಶ ಪ್ರೇಮ ಹಾಗೂ ಪ್ರೀತಿ, ವಿಶ್ವಾಸ ಕಲಿಸಿ ಸಮಾಜಮುಖಿಯಾಗಿ ಬೆಳೆಸುವ ಮೂಲಕ ಮಕ್ಕಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಮಹತ್ವದ ಹೊಣೆಗಾರಿಕೆ ಇಂದಿನ ಶಿಕ್ಷಣದಲ್ಲಿ ಶಿಕ್ಷಕರ ಹಾಗೂ ತಂದೆ-ತಾಯಿಯರ ಜವಾಬ್ದಾರಿ ಅಡಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿರೆಕ್ ಪಬ್ಲಿಕ್ ಶಾಲೆಯ ಮಹಾ ಪೋಷಕ ಹಾಗೂ ರೋಟರಿ ಮಾಜಿ ರಾಜ್ಯಪಾಲ ಹೆಚ್.ಕೆ.ವಿ. ರೆಡ್ಡಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ನಮ್ಮ ಸಂಸ್ಕಾರಯುತ ಶಿಕ್ಷಣ ಕಲಿಕೆಗೆ ಶಿಕ್ಷಕರು ಮತ್ತು ಪೋಷಕರು ಪ್ರೇರೇಪಿಸಬೇಕು ಎಂದರು.

ಚಿರೆಕ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ  ಹಾಗೂ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಭಾಸ್ಕರ್‌ರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮ ಶಾಲೆ ಒಂದು ಚಿಕ್ಕ ಸಸಿಯಿಂದ ಇಂದು ಪೋಷಕರು, ಶಿಕ್ಷಕರ ನೆರವಿನಿಂದ ಹೆಮ್ಮರವಾಗಿ ಬೆಳೆದು ತಮ್ಮ ಮುಂದೆ ನಿಂತಿರುವುದು ಸಂತಸದ ವಿಚಾರ. ಇನ್ನು ಮುಂದೆಯೂ ನಿಮ್ಮಗಳ ಸಹಕಾರವಿರಲಿ ಎಂದು ಕೋರಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ  ಚೇತನ ಇಂಗ್ಲೀಷ್ ಶಾಲೆಯ ಕಾರ್ಯದರ್ಶಿ ತುಂಗೋಟಿ ರಾಮಣ್ಣ ಮಾತನಾಡಿ, ಈ ಶಾಲೆಯು ಉತ್ತಮವಾಗಿ ಬೆಳೆಯಲಿ ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರವೂ ಪ್ರಧಾನವೆಂದು ತಿಳಿಸುತ್ತಾ, ಮಧುಗಿರಿಯ ಆಂಗ್ಲ ಮಾಧ್ಯಮ ಶಾಲೆಗಳು ನಗರದಲ್ಲಿರುವ ಕಾನ್ವೆಂಟ್ ಶಾಲೆಗಳಿಗೆ ಸರಿಸಮಾನವಾಗಿವೆದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹಯ್ಯ ಮಾತನಾಡಿ, ಈ ದೇಶ ಕಾಯಲು ಸೈನಿಕರು ಆಯುಧವಾದರೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಶಿಕ್ಷಣವೇ ಆಯುಧ ಎಂದರು.

ಸಮಾರಂಭದಲ್ಲಿ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾದ ಶೈಲಶ್ರೀರೆಡ್ಡಿ, ಮುಖ್ಯ ಶಿಕ್ಷಕ ಎಸ್.ಎನ್. ರಾಘವೇಂದ್ರ,  ಜೆ.ಎಂ.ಎಫ್.ಸಿ. ಸಿವಿಲ್ ನ್ಯಾಯಾಧೀಶರಾದ ಆರ್.ಪಲ್ಲವಿ, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ  ಪಿ.ಎಂ. ಉಮೇಶ್, ಪವನ್ ಎಜುಕೇಷನ್ ಟ್ರಸ್ಟ್‌ನ ಖಜಾಂಚಿ ಶಾಂತಮ್ಮ, ಕಾಂತಮ್ಮ, ಚರಿತ್ರಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Leave a Comment