ಶಾಲೆಗಳಲ್ಲಿ ಮುಂಜಾನೆ ಪ್ರಾರ್ಥನೆ ಕಡ್ಡಾಯ

ಪಟ್ನಾ, ಆ. ೧೨: ಶಾಲೆಗಳಲ್ಲಿ ಸಿಬ್ಬಂದಿ ಹಾಗೂ ಮಕ್ಕಳಿಗೆ ಮುಂಜಾನೆಯ ಪ್ರಾರ್ಥನೆಯನ್ನು ಬಿಹಾರ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಮಕ್ಕಳಲ್ಲಿ ಶಿಸ್ತು ಮತ್ತು ಸಯಮಪಾಲನೆ ರೂಢಿಗತವಾಗಬೇಕೆಂಬ ಉದ್ದೇಶದಿಂದ ಕೂಡಲೇ ಜಾರಿಗೆ ಬರುವಂತೆ ರಾಜ್ಯದ ೭೬,೦೦೦ ಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಬೆಳಗಿನ ಪ್ರಾರ್ಥನೆಯನ್ನು ಏರ್ಪಡಿಸಬೇಕು. ಈ ವೇಳೆ ಲೌಡ್ ಸ್ಪೀಕರ್ ಬಳಸಿಕೊಂಡು ವೇದಿಕೆ ಮೇಲೆ ನಾಡ ಗೀತೆಗಳನ್ನು ಜೋರಾಗಿ ಹಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ರಾಜ್ಯದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಕೆ. ಮಹಾಜನ್ ಈ ಆದೇಶ ಹೊರಡಿಸಿದ್ದು ಎಲ್ಲ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಿಗೆ ಇದನ್ನು ರವಾನಿಸಲಾಗಿದೆ.

ಪ್ರಾಥಮಿ, ಮಾಧ್ಯಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿ ಮಕ್ಕಳು ಹಾಗೂ ಶಾಲಾ ಸಿಬ್ಬಂದಿಯಲ್ಲಿ ಶಿಸ್ತು ಮತ್ತು ಸಮಯ ಪಾಲನೆ ಪ್ರೋತ್ಸಾಹಿಸುವ ಸದುದ್ದೇಶದಿಂದ ‘ಚೇತನ ಸತ್ರ ಅಥವಾ ಪ್ರಾರ್ಥನಾ ಸಭಾ’ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಆದೇಶ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆಗೆ ಮಹಾಜನ್ ಸ್ಪಷ್ಟಪಡಿಸಿದ್ದಾರೆ.

Leave a Comment