ಶಾಲಾ-ಕಾಲೇಜುಗಳಿಗೆ ಶುದ್ಧ ಕುಡಿವ ನೀರು: ಸಚಿವರ ಭರವಸೆ

ಪಾವಗಡ, ನ. ೮- ತಾಲ್ಲೂಕಿನ ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಮುಂದಿನ ದಿನಗಳಲ್ಲಿ ಶುದ್ದ ಕುಡಿಯುವ ನೀರನ್ನು ನೀಡಲಾಗುವುದು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.

ಪಟ್ಟಣದ ಕಾಳಿದಾಸನಗರದಲ್ಲಿ ಸ್ಥಾಪಿತವಾದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಲೋಕಸಭಾ ಸದಸ್ಯರ ನಿಧಿಯಿಂದ ತಾಲ್ಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಅನುಷ್ಠಾನಗೊಳಿಸುವ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ಶುದ್ದ ಕುಡಿಯುವ ನೀರು ಸಿಗಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.

ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮಾಡುತ್ತಿರುವ ಜಪಾನಂದ ಜೀ ಅವರ ಶ್ರಮ ಶ್ಲಾಘನೀಯ. ಈ ಘಟಕಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತೆ ಜನತೆಯಲ್ಲಿ ಮನವಿ ಮಾಡಿದರು.

ಬರದ ನಾಡಲ್ಲಿ ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ನೀರಿನ ಕೊರತೆಯನ್ನು ಎಲ್ಲಾ ರೀತಿಯಲ್ಲೂ ಎದುರಿಸಲು ಸರ್ಕಾರ ಬದ್ಧವಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.

ತಾಲ್ಲೂಕಿನ 40 ಕೆರೆಗಳು ಭದ್ರಮೇಲ್ದಂಡೆ ಯೋಜನೆ ಮೂಲಕ ಮತ್ತು ಎತ್ತಿನಹೊಳೆ ಯೋಜನೆ ಮೂಲಕ ನಾಗಲಮಡಿಕೆ ಕಸಬ ಹೋಬಳಿಯ ಕೆರೆಗಳನ್ನು ತುಂಬಿಸಲಾಗುವುದು. ತುಂಗಭದ್ರ ಯೋಜನೆ ಕಾಮಗಾರಿಗೆ ಮುಂದಿನ ತಿಂಗಳು ಪಾವಗಡದಲ್ಲಿ ಚಾಲನೆ ನೀಡಲಾಗುವುದು. ಇದಕ್ಕೆ ಸಂಬಂಧಿಸಿದ ವರ್ಕ್ ಅರ್ಡರ್‌ನ್ನು ಗುತ್ತಿಗೆದಾರರಿಗೆ ನೀಡಲಾಗಿದೆ ಎಂದರು.

ತಾಲ್ಲೂಕಿಗೆ ನೀರು ಹರಿಸುವ ಯೋಜನೆಗೆ ನಾನು ಬದ್ದನಾಗಿದ್ದೇನೆ. ಸರ್ಕಾರ ಸಹ ಬದ್ದವಾಗಿದೆ. ಮೇಲಿಂದ ಮೇಲೆ ಸಭೆಗಳನ್ನು ನಡೆಸುವ ಮೂಲಕ ಭದ್ರಾ  ಮೇಲ್ದಂಡೆ ಯೋಜನೆಯನ್ನು ಚುರುಕುಗೊಳಿಸಲಾಗಿದೆ. ಚಿತ್ರದುರ್ಗ ನಾಲೆಯಿಂದ ಪಾವಗಡಕ್ಕೆ ನೀರು ಹರಿಯಲಿದೆ. ಪೈಪ್‌ಲೈನ್ ಸರ್ವೆ ಮತ್ತು ಎಸ್ಟಿಮೆಟ್ 650 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಸಿದ್ದಗೊಂಡಿದ್ದು, ತ್ವರಿತವಾಗಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಕುಡಿಯುವ ನೀರಿನ ಘಟಕಗಳ ದುರಸ್ತಿ ಬಗ್ಗೆ ಅಧಿಕಾರಿಗಳು ಮಾಹಿತಿ ಸರಿಯಾಗಿ ಕೊಡುತ್ತಿಲ್ಲ. ಕುಡಿಯುವ ನೀರು ಬೇಸಿಗೆಯಲ್ಲಿ ಉಂಟಾಗುವ ಕೊರತೆ ಈಗಲೇ ಸನ್ನದ್ದವಾಗಬೇಕು. ಮಳೆ ಬಂದಿಲ್ಲ, ಕೆರೆಗಳು ನೀರಿಲ್ಲ, ಹಳ್ಳ ಹರಿದಿಲ್ಲ, ಅಂರ್ತಜಲ ಆಳಕ್ಕೆ ಇಳಿದು ಕೊಳವೆ ಬಾವಿಗಳು ಗಂಗೆಗೊಂದರಂತೆ ಬತ್ತುತ್ತಿವೆ ಎಂದರು.

ತಾಲ್ಲೂಕಿನ ಸುತ್ತಲೂ ಹರಿಯುತ್ತಿರುವ ಹದ್ರೀನೀವಾ ಯೋಜನೆ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆ ಬಗ್ಗೆ ಸಚಿವರು ಸರ್ಕಾರದೊಂದಿಗೆ ಚರ್ಚಿಸಬೇಕು. ನಾನು ಈಗಾಗಲೇ ಪ್ರಸ್ತಾಪ ಮಾಡಿದ್ದೇನೆ. ಆ ಯೋಜನೆಯಿಂದಲೂ ನೀರು ಹರಿದರೆ ತಾಲ್ಲೂಕಿಗೆ ನೀರಿನ ಬರ ಇರದು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಪಾನಂದ ಜೀ, ಶುದ್ದ ಕುಡಿಯುವ ನೀರಿನ 10ನೇ ಘಟಕ ಇಲ್ಲಿ ಪ್ರಾರಂಭಿಸಲಾಗಿದೆ. ಇದರ ಸ್ವಚ್ಚತೆ ಇಲ್ಲಿನ ಜನಗಳದ್ದು, ಇದರ ಸದ್ಬಳಕೆಯಾಗಬೇಕು. ಇಷ್ಟರಲ್ಲೆ ಕ್ರೀಡಾಂಗಣದ ಬಳಿ ಒಂದು ಘಟಕ ಸ್ಥಾಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ  ಸುಮಾ ಅನಿಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನರಸಿಂಹಯ್ಯ, ಎ. ಶಂಕರರೆಡ್ಡಿ, ನರಸಿಂಹರೆಡ್ಡಿ, ಜಿ. ಸುದೇಶ್‌ಬಾಬು, ಮನುಮಹೇಶ್, ಮೇಧಾವಿನಾಗರಾಜ್, ನಾಗೇಂದ್ರ, ವಸಂತಕುಮಾರ್, ಸಾಂಬ ಸದಾಶಿವರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Leave a Comment