ಶಾಲಾ‌ಮಕ್ಕಳಿಗೆ ಟಿಪ್ಪು ಪಠ್ಯ ಬೇಡ: ಅಪ್ಪಚ್ಚು ರಂಜನ್

ಬೆಂಗಳೂರು, ಅ. 21- ಟಿಪ್ಪು ಜಯಂತಿ ಆಚರಣೆಗೆ ವಿರೊಧ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಇದೀಗ ಶಾಲಾ ಪಠ್ಯಪುಸ್ತಕಗಳಿಂದ ಟಿಪ್ಪು ಬಗೆಗಿನ ಪಾಠವನ್ನು ತೆಗೆದು ಹಾಕುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಟಿಪ್ಪು ಒಬ್ಬ ದೇಶ ದ್ರೋಹಿ. ಇಂತಹ ದೇಶದ್ರೋಹಿ ಬಗ್ಗೆ ರಾಜ್ಯದ ಪಠ್ಯ ಪುಸ್ತಕದಲ್ಲಿ ಪಾಠ ಸೇರಿಸುವುದ ಬೇಡ ಎಂದು ಶಿಕ್ಷಣ ಇಲಾಖೆಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ಪಠ್ಯ ಪುಸ್ತಕದಲ್ಲಿ ಟಿಪ್ಪು ಬಗ್ಗೆ ಸುಳ್ಳಾಗಿ ವೈಭವೀಕರಿಸಲಾಗಿದೆ. ದೇಶಭಕ್ತಿ ಪಾಠ ಹೇಳಬೇಕಾದ ಮಕ್ಕಳಿಗೆ ದೇಶ ದ್ರೋಹಿ ಬಗ್ಗೆ ಪಾಠ ಬೇಡ. ದೇಶಕ್ಕಾಗಿ ಎಂದು ಟಿಪ್ಪು ಹೋರಾಟ ಮಾಡಿಲ್ಲ. ಆತ ಯುದ್ಧ ಮಾಡಿದ್ದು ತನ್ನ ಸ್ವಾರ್ಥಕ್ಕಾಗಿ. ಫ್ರೆಂಚರ ಜೊತೆ ಕೈ ಜೋಡಿಸಿದ್ದ ಟಿಪ್ಪು. ಈ ಟಿಪ್ಪುವಿನ ಹೆಸರುನ್ನು ನಾಯಿಗೆ ಇಡಲಾಗುತ್ತದೆ ಎಂದು ಪತ್ರದಲ್ಲಿ ಅಪ್ಪಚ್ಚು ರಂಜನ್ ಪ್ರಸ್ತಾಪಿಸಿದ್ದಾರೆ.

ಮಡಿಕೇರಿಯಲ್ಲಿ ಟಿಪ್ಪು ಹೆಸರಿನಲ್ಲಿ‌ ನಡೆದಿದ್ದ ಮಾರಣಹೋಮವನ್ನು ಜನ ಇನ್ನೂ ಮರೆತಿಲ್ಲ. ಮಡಿಕೇರಿ ಭಾಗದಲ್ಲಿ ನಮ್ಮ ಮನೆಯ ನಾಯಿಗಳಿಗೆ ಟಿಪ್ಪು ಹೆಸರು ಇಡುತ್ತೇವೆ. ಮಂಗಳೂರಿನಲ್ಲಿ 50 ಸಾವಿರಕ್ಕೂ ಹೆಚ್ಚು ಕ್ರಿಶ್ಚಿಯನ್ನರನ್ನು ಬಲವಂತವಾಗಿ ಆತ ಮತಾಂತರ ಮಾಡಿದ್ದನು. ಟಿಪ್ಪು ಒಬ್ಬ ಕನ್ನಡ ವಿರೋಧಿ, ಅವನ ಆಡಳಿತ ಭಾಷೆ ಪರ್ಷಿಯನ್. ಹೀಗಾಗಿ ಟಿಪ್ಪು ‌ಪಾಠಗಳು ಪಠ್ಯದಲ್ಲಿ ಬೇಡ. ಈ ಬಗ್ಗೆ ತಜ್ಞರ ಸಮಿತಿ ರಚಿಸಿ ಅಭಿಪ್ರಾಯ ಸಂಗ್ರಹಿಸಿ. ಶಿಕ್ಷಣ ದೇಶ ಪ್ರೇಮ, ದೇಶ ಭಕ್ತಿ ಮೂಡಿಸಬೇಕು. ಟಿಪ್ಪುವಿನ ಬಗ್ಗೆ ಸೃಷ್ಟಿಸಿರುವ ಸುಳ್ಳು ಇತಿಹಾಸ ಮೊದಲು ಕೈ ಬಿಡಬೇಕು ಎಂದು ಅಪ್ಪಚ್ಚು ರಂಜನ್ ಮನವಿ ಮಾಡಿದ್ದಾರೆ.

Leave a Comment