ಶಾರಿಂದ ಬಹುಮಾನ ಗಿಟ್ಟಿಸಲು ಬಿಜೆಪಿ ನಾಯಕರ ಪೈಪೋಟಿ: ಸಿದ್ದು ಟೀಕೆ

ಬೆಂಗಳೂರು, ನ. ೨೨- ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದ ಬಹುಮಾನ ಗಿಟ್ಟಿಸಿಕೊಳ್ಳುವ ಆಸೆಯಿಂದ ಬಿಜೆಪಿ ನಾಯಕರು ನನ್ನ ಮೇಲೆ ಮುಗಿ ಬಿದ್ದು ಟೀಕೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕರೆಲ್ಲ ನನ್ನ ಮೇಲೆ ಮುಗಿ ಬೀಳುತ್ತಿರುವುದನ್ನು ನೋಡಿದರೆ ಅಮಿತ್ ಶಾ ಇವರಿಗೆ ಬಹುಮಾನ ಕೊಡುವ ಭರವಸೆ ನೀಡಿದಂತಿದೆ ಎಂದು ಟ್ವಿಟ್ಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ನಾನು ಏಕಾಂಗಿಯಾಗಿದ್ದರೆ ಬಿಜೆಪಿ ನಾಯಕರಿಗೆ ನನ್ನ ಬಗ್ಗೆ ಭಯ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನ ಮಾನಸಿಕ ಸ್ಥಿತಿ ಬಗ್ಗೆ ಬಡಬಡಿಸುತ್ತಿರುವ ಕೇಂದ್ರ ಸಚಿವ ‌ಡಿ.ವಿ. ಸದಾನಂದಗೌಡರ ಬಗ್ಗೆ ಅನುಕಂಪವಿದೆ. ಮೊದಲು ಮುಖ್ಯಮಂತ್ರಿ ಸ್ಥಾನದಿಂದ ನಂತರ ರೈಲ್ವೆ, ಕಾನೂನು ಅಂಕಿ-ಅಂಶ, ಸಚಿವ ಖಾತೆಗಳಿಂದ ಹೀಗೆ ಎಲ್ಲ ಕಡೆ ತಿರಸ್ಕೃತಗೊಂಡಿರುವ ಸದಾನಂದ ಗೌಡರು, ಈಗ ಬಿಜೆಪಿಯಲ್ಲಿ `ಗೊಬ್ಬರ’ವಾಗಿ ಹೋಗಿದ್ದಾರೆ. ಈ ಹತಾಶೆಯಿಂದ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.

ಪಕ್ಷದಲ್ಲಿ ಏಕಾಂಗಿಯಾಗಿರುವ ಸದಾನಂದಗೌಡರನ್ನು ಬಿಜೆಪಿಯಲ್ಲಿ ಯಾರೂ ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇದಕ್ಕಾಗಿ ಅವರು ತಮ್ಮ ಜೋಕುಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.

Leave a Comment