ಶಾರದಾ ವಿದ್ಯಾ ಸಂಸ್ಥೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

ಮಂಗಳೂರು, ಆ.೧- ನಗರದ ಕೊಡಿಯಾಲಬೈಲಿನ ಶಾರದಾ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಕೇಂದ್ರ ಸರಕಾರದ ನೀತಿ ಆಯೋಗದ ಸಹಭಾಗಿತ್ವದ ಅಟಲ್ ಟಿಂಕಲ್ ಲ್ಯಾಬ್‌ನ ಉದ್ಘಾಟನಾ ಕಾರ್ಯಕ್ರಮ ಜರಗಿತು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ)ದ ಚಂದ್ರಯಾನದ ನಿವೃತ್ತ ಕಾರ್ಯನಿರ್ದೇಶಕ ಡಾ| ಎಸ್.ಎನ್. ಹೆಗ್ಡೆ ಲ್ಯಾಬ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವೆಂಬುದು ಮತ್ತೆಂದೂ ಸಿಗದ ಅಮೂಲ್ಯ ಸಮಯವಾಗಿದ್ದು ವಿದ್ಯಾರ್ಥಿಗಳು ಕ್ರೀಯಾಶೀಲತೆ, ಸೃಜನಶೀಲತೆಯ ಮನೋಭಾವವನ್ನು ಬೆಳೆಸಿಕೊಂಡು ಸಮಯದ ಸದುಪಯೋಗಗೈಯುತ್ತಾ ಹೆತ್ತವರ ಹಾಗೂ ರಾಷ್ಟ್ರದ ಕೀರ್ತಿಯನ್ನು ಬೆಳಗುವ ಕಾರ್ಯಕ್ಕೆ ಮುಂದಾಗಬೇಕು ಎಂಬುದಾಗಿ ಕರೆಯಿತ್ತರು.
ಇನ್ನೊರ್ವ ಅತಿಥಿ ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಮಾತನಾಡಿ, ವಿದ್ಯಾಸಂಸ್ಥೆಗಳ ಅಟಲ್ ಟಿಂಕರಿಂಗ್ ಲ್ಯಾಬಿನ ಉದ್ಧೇಶವನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಮಗುವಿನಂತೆ ಪ್ರಶ್ನಿಸುವ ಮನೋಭಾವ ಹಾಗೂ ಕುತೂಹಲ ಬುದ್ಧಿ, ಸಂಶೋಧನಾ ಗುಣಗಳನ್ನು ಬೆಳೆಸಿಕೊಂಡು ಹೆಚ್ಚಿನ ಜ್ಞಾನ ಸಂಪಾದನೆಗೆ ತೊಡಗುವುದರೊಂದಿಗೆ ಅಪೂರ್ವ ಸಾಧನೆಗೆ ಮುಂದಾಗಬೇಕು. ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಭವಿಷ್ಯದ ವಿಜ್ಞಾನಿಗಳಾಗಬೇಕು ಎಂಬುದಾಗಿ ಆಶಯ ವ್ಯಕ್ತಪಡಿಸಿದರು.
ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ ಮಾತನಾಡಿ, ಉತ್ತಮ ಶೈಕ್ಷಣಿಕ ಸಾಧನೆ ಹಾಗೂ ಬುದ್ಧಿಮತ್ತೆಯನ್ನು ಹೊಂದಿರುವ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಕೇವಲ ಎಂಜಿನಿಯರ್, ವೈದ್ಯಕೀಯ ಕ್ಷೇತ್ರಗಳಲ್ಲಷ್ಟೇ ಭವಿಷ್ಯವನ್ನು ಅರಸುವುದನ್ನು ಬಿಟ್ಟು ವಿಜ್ಞಾನ ಕ್ಷೇತ್ರ, ಆಡಳಿತ, ಸೇನೆಯಲ್ಲಿ ಅವಕಾಶ ಗಿಟ್ಟಿಸಲು ಪ್ರಯತ್ನಿಸಬೇಕು. ಅಟಲ್ ಟಿಂಕರಿಂಗ್ ಲ್ಯಾಬ್‌ನ ಸ್ಥಾಪನೆ ಕ್ರೀಯಾಶೀಲ, ಸೃಜನಶೀಲ, ಜ್ಞಾನದಾಹಿ ವಿದ್ಯಾರ್ಥಿಗಳಿಗೆ ಒಂದು ವರದಾನ ಎಂದು ಹೇಳಿದರು.
ಶಾರದಾ ಪದವಿಪೂರ್ವ ಕಾಲೇಜಿನ ಇಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕ ಗುರುರಾಜ ಡಾ| ಎಸ್.ಎನ್. ಹೆಗ್ಡೆಯವರನ್ನು ಪರಿಚಯಿಸಿದರು. ಸಿ.ಇ.ಎನ್.ಎಸ್. ಅಟೊನೊಮಸ್ ರಿಸರ್ಚ್ ಇನ್ಸ್ಟಿಟ್ಯೂಟಿನ ಹಿರಿಯ ವಿಜ್ಞಾನಿಗಳಾದ ಡಾ| ವೀಣಾ ಪ್ರಸಾದ್ ಮತ್ತು ಡಾ| ರಾಮಕೃಷ್ಣ ಮಟ್ಟೆ, ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷ ಕೆ.ಎಸ್.ಕಲ್ಲೂರಾಯ, ವಿಶ್ವಸ್ಥರಾದ ಪ್ರದೀಪ ಕುಮಾರ ಕಲ್ಕೂರ, ಶೈಕ್ಷಣಿಕ ಸಲಹೆಗಾರ ಡಾ| ಲೀಲಾ ಉಪಧ್ಯಾಯ, ಎಸ್.ಕೆ.ಡಿ.ಬಿ. ಅಸೋಶಿಯೇಶನ್ನಿನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ, ಶಾರದಾ ಪ.ಪೂ. ಕಾಲೇಜಿನ ಉಪ-ಪ್ರಾಂಶುಪಾಲ ಪ್ರಕಾಶ್ ನಾಯಕ್, ಶಾರದಾ ವಿದ್ಯಾಲಯದ ಉಪ-ಪ್ರಾಂಶುಪಾಲ ದಯಾನಂದ ಕಟೀಲ್, ಉಪನ್ಯಾಸಕ ಗುರುರಾಜ ಉಪಸ್ಥಿತರಿದ್ದರು.
ಶಾರದಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಮಹಬಲೇಶ್ವರ ಭಟ್ ಸ್ವಾಗತಿಸಿ, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಸುನೀತಾ ವಿ. ಮಡಿ ವಂದಿಸಿದರು. ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ವೈಶಾಲಿ ಸಭಾ ನಿರ್ವಹಣೆಗೈದರು.
ಸಭಾ ಕಾರ್ಯಕ್ರಮದ ಬಳಿಕ ಇಸ್ರೋ ವಿಜ್ಞಾನಿಗಳಾದ ಡಾ| ವೀಣಾ ಪ್ರಸಾದ್ ಹಾಗೂ ಡಾ| ರಾಮಕೃಷ್ಣ ಮಟ್ಟೆಯವರು ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು. ವಿದ್ಯಾರ್ಥಿನಿಯರಾದ ಕೃಷ್ಣ ಹಾಗೂ ಅದಿತಿ ಕದ್ರಿ ಗೋಷ್ಠಿಗಳ ನಿರ್ವಹಣೆ ಹಾಗೂ ಅತಿಥಿ ಪರಿಚಯಗೈದರು.

Leave a Comment