ಶಸ್ತ್ರಚಿಕಿತ್ಸೆ: ಚನ್ನೈಗೆ ತೆರಳಿದ ಸಿದ್ದಗಂಗಾ ಶ್ರೀಗಳು

ತುಮಕೂರು, ಡಿ. ೭- ನಡೆದಾಡುವ ದೇವರು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಅಳವಡಿಸಿರುವ ಸ್ಟಂಟ್‌ಗಳಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಹೆಚ್ಚಿನ ಚಿಕಿತ್ಸೆಗೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಇಂದು ಶ್ರೀಗಳನ್ನು ವಿಶೇಷ ವಿಮಾನದ ಮೂಲಕ ಚನ್ನೈಗೆ ಕರೆದೊಯ್ಯಲಾಯಿತು.

ಶ್ರೀಮಠದಿಂದ ಬೆಳಿಗ್ಗೆ 10.20ಕ್ಕೆ ರಸ್ತೆ ಮೂಲಕ ಕಾರಿನಲ್ಲಿ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದ ಶ್ರೀಗಳನ್ನು ವಿಶೇಷ ಏರ್ ಆಂಬ್ಯುಲೆನ್ಸ್‌ನಲ್ಲಿ ವೈದ್ಯರ ತಂಡ ಚನ್ನೈಗೆ ಕರೆದೊಯ್ದರು.

ಸಿದ್ದಗಂಗಾ ಮಠದಿಂದ ತೆರಳಿದ ಶ್ರೀಗಳೊಂದಿಗೆ ಕಿರಿಯಶ್ರೀಗಳು ಮತ್ತು ಅವರ ಇಬ್ಬರು ಸಹಾಯಕರು ಕಾರಿನಲ್ಲಿ ಪ್ರಯಾಣಿಸಿದ್ದು, ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದವರೆಗೂ ಶ್ರೀಗಳ ಕಾರನ್ನು ಆಂಬ್ಯುಲೆನ್ಸ್ ಹಿಂಬಾಲಿಸಿಕೊಂಡೇ ಸಾಗಿತು.

ಚನ್ನೈನಲ್ಲಿರುವ ಡಾ. ರೆಲಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಮಹಮದ್ ರೆಲಾ ಅವರು ಶ್ರೀಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ಶ್ರೀಗಳ ಮಠದ ಮೂಲಗಳು ತಿಳಿಸಿವೆ.

ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಅಳವಡಿಸಿರುವ ಸ್ಟಂಟ್‌ನಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜ್ವರದ ಬಾಧೆ ಕಾಡುತ್ತಿದೆ. ಮಾತ್ರೆ, ಔಷಧಿಗಳನ್ನು ನೀಡಿದಾಗ ಮಾತ್ರ ಈ ಸೋಂಕು ಕಡಿಮೆಯಾಗುತ್ತಿದ್ದು, ಬಳಿಕ ಸೋಂಕಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಹೀಗಾಗಿ ಇದಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರೀಗಳನ್ನು ಚನ್ನೈನ ಡಾ.ರೆಲಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಚನ್ನೈನ ಡಾ. ರೆಲಾ ಮೆಡಿಕಲ್ ಆಸ್ಪತ್ರೆಯ ಪ್ರಸಿದ್ದ ವೈದ್ಯರಾದ ಡಾ. ರೇಲಾ ಅವರು ಶ್ರೀಗಳಿಗೆ ಚಿಕಿತ್ಸೆ ನೀಡಲಿದ್ದು, ಕಳೆದ ಎರಡು ವರ್ಷದ ಹಿಂದೆ ಡಾ. ಮಹಮದ್ ರೇಲಾ ಅವರು ಶ್ರೀಗಳ ಆರೋಗ್ಯ ತಪಾಸಣೆ ಮಾಡಿದ್ದರು. ನಾಳೆ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆ ಇದೆ.

ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮೂರರಿಂದ ನಾಲ್ಕು ದಿನಗಳ ಕಾಲ ಚನ್ನೈನಲ್ಲೇ ಚಿಕಿತ್ಸೆ ನೀಡಬೇಕಾಗಬಹುದು ಎಂದು ಶ್ರೀಗಳ ಆಪ್ತ ವೈದ್ಯರಾದ ಡಾ. ಪರಮೇಶ್ “ಸಂಜೆವಾಣಿ”ಗೆ ತಿಳಿಸಿದರು.

ಇನ್ನುಂದೆ ಸ್ಟೆಂಟ್ ಅಳ‌ವ‌ಡಿಕೆ ಕಷ್ಟ ಆಗುತ್ತದೆ ಎಂದು ಚನ್ನೈನ ವೈದ್ಯರ ಬಳಿ ಚರ್ಚಿಸಿದ್ದೆವು. ಅವರು ಕರೆದುಕೊಂಡು ಬನ್ನಿ ಎಂದು ತಿಳಿಸಿ, ಬದಲಿ ವ್ಯವಸ್ಥೆ ಏನಾದರೂ ಮಾಡಿ ಸ್ವಾಮೀಜಿಯವರನ್ನು ಗುಣಮುಖ ಮಾಡೋಣ ಎಂದು ಆಶ್ವಾಸನೆ ಕೊಟ್ಟಿದ್ದರಿಂದ ಚನ್ನೈಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಅವರು ಹೇಳಿದರು.

ಶ್ರೀಗಳಿಗೆ ಚಿಕಿತ್ಸೆ ನೀಡುವ ಸಂಬಂಧ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಪರಸ್ಪರ ಚರ್ಚೆ ನಡೆಸಿವೆ. ಚನ್ನೈಗೆ ಹೋದ ನಂತರ ಶ್ರೀಗಳಿಗೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗುತ್ತದೆ. ನಂತರ ರಾತ್ರಿ ಹೇಗೆ ಚಿಕಿತ್ಸೆ ನೀಡಬೇಕು ಎಂಬ ನಿರ್ಧಾರಕ್ಕೆ ಅಲ್ಲಿನ ವೈದ್ಯರು ಬರುತ್ತಾರೆ ಎಂದರು.

ನಿನ್ನೆ ಬಿಜಿಎಸ್ ಆಸ್ಪತ್ರೆಯ ವೈದ್ಯರಾದ ಡಾ. ರವೀಂದ್ರ ಮತ್ತು ಶ್ರೀಗಳ ಆಪ್ತ ವೈದ್ಯರಾದ ಡಾ.ಪರಮೇಶ್ ಅವರು ಚನ್ನೈಗೆ ತೆರಳಿ ಅಲ್ಲಿನ ವೈದ್ಯರೊಂದಿಗೆ ಶ್ರೀಗಳಿಗೆ ಚಿಕಿತ್ಸೆ ನೀಡುವ ಸಂಬಂಧ ಚರ್ಚೆ ನಡೆಸಿದ್ದರು. ನಂತರ ಚನ್ನೈನ ಖ್ಯಾತ ಅರವಳಿಕೆ ತಜ್ಞರಾದ ಡಾ. ಎಲ್.ಎನ್. ಕುಮಾರ್ ನೇತೃತ್ವದ ವೈದ್ಯರ ತಂಡವನ್ನು ಸಿದ್ದಗಂಗಾ ಮಠಕ್ಕೆ ಕರೆತಂದು ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದ್ದರು.

ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದ ಚನ್ನೈನ ಡಾ. ಎಲ್.ಎನ್. ಕುಮಾರ್ ಅವರು ಶ್ರೀಗಳಿಗೆ ಅಳವಡಿಸಿರುವ ಸ್ಟಂಟ್‌ಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಸೋಂಕು ನಿವಾರಣೆಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದನ್ನು ತಿಳಿಸಿ, ರಾತ್ರಿ ಚನ್ನೈಗೆ ವಾಪಸ್ಸಾಗಿದ್ದರು.

ಇದಾದ ನಂತರ ಡಾ. ರವೀಂದ್ರ, ಡಾ. ಪರಮೇಶ್, ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಸಿದ್ದಗಂಗಾ ಮಠದ ಆಡಳಿತ ಮಂಡಳಿಯವರು ಹಾಗೂ ಸರ್ಕಾರದೊಂದಿಗೆ ಶ್ರೀಗಳಿಗೆ ಚನ್ನೈನಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸುವ ಕುರಿತು ರಾತ್ರಿ 10.45ರ ವರೆಗೂ ಸುದೀರ್ಘ ಚರ್ಚೆ ನಡೆಸಿ ಚನ್ನೈಗೆ ಕರೆದೊಯ್ಯುವ ತೀರ್ಮಾನಕ್ಕೆ ಬಂದರು.

ಆದರೆ ಶ್ರೀಗಳು ಮಾತ್ರ ತಾವು ಎಲ್ಲೂ ಬರುವುದಿಲ್ಲ. ಶ್ರೀಮಠದಲ್ಲಿಯೇ ಚಿಕಿತ್ಸೆ ನೀಡುವಂತೆ ಹಠ ಹಿಡಿದಿದ್ದರು. ವೈದ್ಯರು, ಕಿರಿಯಶ್ರೀಗಳು ಹಿರಿಯ ಶ್ರೀಗಳೊಂದಿಗೆ ಚರ್ಚಿಸಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಚನ್ನೈಗೆ ತೆರಳಲು ಒಪ್ಪಿಸಿದರು ಎಂದು ತಿಳಿದು ಬಂದಿದೆ.

ಸಿದ್ದಗಂಗಾ ಮಠದ ವಾತಾವರಣ, ಶ್ರೀಗಳ ಕಾಯಕವನ್ನು ನೋಡಿಕೊಂಡು ಚನ್ನೈಗೆ ತೆರಳಿರುವ ಡಾ. ಎಲ್.ಎನ್. ಕುಮಾರ್ ಅವರು ಡಾ. ರೆಲಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಶ್ರೀಗಳಿಗಾಗಿ ವಿಶೇಷ ಕೊಠಡಿಯನ್ನು ಸಿದ್ದಗೊಳಿಸಿದ್ದಾರೆ. ಅಲ್ಲಿಯೇ ಶ್ರೀಗಳ ಇಷ್ಟಲಿಂಗ ಪೂಜಾ ಕೈಂಕರ್ಯಕ್ಕೂ ವ್ಯವಸ್ಥೆ ಮಾಡಿದ್ದಾರೆ ಎಂದು ಮಠದ ಮೂಲಗಳು ಹೇಳಿವೆ.

ಡಾ. ರವೀಂದ್ರ ಹೇಳಿಕೆ
ಶ್ರೀಗಳಿಗೆ ಈಗಾಗಲೇ 6 ಬಾರಿ ಎಂಡೊಸ್ಕೋಪಿ ಮೂಲಕ 11 ಸ್ಟಂಟ್‌ಗಳನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಸ್ಟಂಟ್‌ಗಳನ್ನು ಅಳವಡಿಸಲು ಜಾಗ ಇಲ್ಲ. ಅಲ್ಲದೆ ಈಗ ಅಳವಡಿಸಿರುವ ಸ್ಟಂಟ್‌ಗಳಲ್ಲಿ ಮತ್ತೆ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರೀಗಳನ್ನು ಚನ್ನೈಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಲು ತೀರ್ಮಾನಿಸಿರುವುದಾಗಿ ಬಿಜಿಎಸ್ ಆಸ್ಪತ್ರೆಯ ವೈದ್ಯರಾದ ಡಾ. ರವೀಂದ್ರ ತಿಳಿಸಿದರು.
ಶ್ರೀಗಳು ಕ್ಷೇಮವಾಗಿದ್ದಾರೆ. ಭಕ್ತಾದಿಗಳು ಆತಂಕಗೊಳ್ಳುವುದು ಬೇಡ. ಹೆಚ್ಚಿನ ಚಿಕಿತ್ಸೆಗಾಗಿ ಚನ್ನೈಗೆ ಕರೆದೊಯ್ಯಲಾಗುತ್ತಿದೆ ಅಷ್ಟೆ. ಈ ಬಗ್ಗೆ ಅನಗತ್ಯ ಗೊಂದಲಗಳ ಸೃಷ್ಠಿ ಬೇಡ ಎಂದರು.

ಡಾ. ರೆಲ್ಲಾ ಅವರು ಇಡೀ ಪ್ರಪಂಚದಲ್ಲಿ ಖ್ಯಾತ ಲಿವರ್ ಸ್ಪೆಷಲಿಸ್ಟ್ ಡಾಕ್ಟರ್. ಹಾಗಾಗಿ ಅವರ ಬಳಿಯೇ ಚಿಕಿತ್ಸೆ ಕೊಡಿಸಲು ನಾವೆಲ್ಲಾ ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.

ಮಠದಲ್ಲಿ ಭಕ್ತರ ದಂಡು
ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗಿದ್ದ ಭಕ್ತ ಸಮೂಹ ರಾತ್ರಿಯಿಡೀ ಶ್ರೀಮಠದಲ್ಲೇ ಕೊರೆವ ಚಳಿಯನ್ನು ಲೆಕ್ಕಿಸದೇ ಬೀಡು ಬಿಟ್ಟಿದ್ದಾರೆ.

ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆಯಲೇಬೇಕು ಎಂದು ರಾಜ್ಯದ ನಾನಾ ಕಡೆಗಳಿಂದ ಆಗಮಿಸಿರುವ ಭಕ್ತರು ಶ್ರೀಮಠದ ಆವರಣದಲ್ಲಿ ಜಮಾಯಿಸಿದ್ದಾರೆ. ಆದರೆ ಶ್ರೀಗಳ ದರ್ಶನಕ್ಕೆ ಅವಕಾಶ ಇಲ್ಲ ಎಂಬುದು ಗೊತ್ತಿದ್ದರೂ ಸಹ ಶ್ರೀಕ್ಷೇತ್ರದಲ್ಲೇ ತಂಗಿದ್ದು, ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಿಗೆ ಮೊರೆಯಿಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಬಾಕ್ಸ್.,.
ಶ್ರೀಗಳು ಕ್ಷೇಮವಾಗಿದ್ದಾರೆ..
ಶ್ರೀಗಳಿಗೆ ಈಗಾಗಲೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಪೂರ್ಣ ಪ್ರಮಾಣದಲ್ಲಿ ಶ್ರೀಗಳು ಗುಣಮುಖರಾಗುವ ದೃಷ್ಠಿಯಿಂದ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದು, ಚನ್ನೈನ ಪ್ರತಿಷ್ಠಿತ ಆಸ್ಪತ್ರೆಯಾದ ಡಾ. ರೆಲಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್‌ಗೆ ತೀರ್ಮಾನಿಸಲಾಗಿದೆ ಎಂದು ಕಿರಿಯಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಶ್ರೀಗಳ ಆರೋಗ್ಯ ಸುಧಾರಿಸಿದ್ದು, ಕ್ಷೇಮವಾಗಿದ್ದಾರೆ. ಈಗಾಗಲೇ ಅವರೇ ನಡೆದುಕೊಂಡು ಬಂದು ಮಾಧ್ಯಮದವರು ಮತ್ತು ಭಕ್ತಾದಿಗಳಿಗೆ ದರ್ಶನ ನೀಡಿ ಹೋಗಿದ್ದಾರೆ. ಹಾಗಾಗಿ ಭಕ್ತಾದಿಗಳು ಯಾವುದೇ ಆತಂಕಕ್ಕೆ ಒಳಗಾಗಬಾರದು. ಸ್ಟಂಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಸೋಂಕಿನ ನಿವಾರಣೆಗಾಗಿ ಚನ್ನೈಗೆ ಕರೆದೊಯ್ಯುತ್ತಿರುವುದಾಗಿ ಹೇಳಿದರು.

ಬಾಕ್ಸ್…
ಇಷ್ಟಲಿಂಗ ಪೂಜೆ ನೆರವೇರಿಸಿದ ಶ್ರೀಗಳು
ಎಂದಿನಂತೆ ಇಂದು ಬೆಳಿಗ್ಗೆಯೂ ಶ್ರೀಗಳು ಲವಲವಿಕೆಯಿಂದಲೇ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.
ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಇಷ್ಟಲಿಂಗ ಪೂಜೆ ನೆರವೇರಿಸಿದ ಶ್ರೀಗಳು ಪ್ರಸಾದ ಸೇವಿಸಿದರು.

Leave a Comment