ಶಸ್ತ್ರಚಿಕಿತ್ಸೆಗೆ ಚೆನ್ನೈಗೆ ತೆರಳಿದ ಸಿದ್ದಗಂಗಾ ಶ್ರೀಗಳು

ಬೆಂಗಳೂರು/ತುಮಕೂರು, ಡಿ. ೭- ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲು  ಹೆಚ್‌ಎಎಲ್ ವಿಮಾನನಿಲ್ದಾಣದಿಂದ ವಿಶೇಷ ವಿಮಾನ(ಏರ್ ಆಂಬುಲೆನ್ಸ್)ದಲ್ಲಿ ಚೆನ್ನೈನ ಡಾ. ರೇಲಾ ಇಂಟರ್‌ನ್ಯಾಷನಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸ್ವಾಮೀಜಿಗಳಿಗೆ ಅಳವಡಿಸಿರುವ ಸ್ಟಂಟ್‌ಗಳಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಹೆಚ್ಚಿನ ಚಿಕಿತ್ಸೆ ನೀಡಲು ಶ್ರೀಗಳನ್ನು  ಚೆನ್ನೈನ ಡಾ. ರೇಲಾ ಇಂಟರ್‌ನ್ಯಾಷನಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ಯಾತ್ಸಂದ್ರದಲ್ಲಿನ ಸಿದ್ಧಗಂಗಾ ಮಠದಿಂದ ೧೦.೩೦ ಕ್ಕೆ ಶ್ರೀಗಳು ಶೂನ್ಯ ಸಂಚಾರ(ಝೀರೋ ಟ್ರಾಫಿಕ್) ವ್ಯವಸ್ಥೆಯಲ್ಲಿ ಹೊರಟಿದ್ದು ೧೧.೪೦ ರ ಸುಮಾರಿಗೆ ಎಚ್‌ಎಎಲ್ ವಿಮಾನ ನಿಲ್ದಾಣ ತಲುಪಿದರು ಸ್ವಾಮೀಜಿಯನ್ನು ಅಲ್ಲಿಂದ ಐಕ್ಯಾಟ್ ಏರ್ ಆಂಬುಲೆನ್ಸ್ ಮೂಲಕ ಮಧ್ಯಾಹ್ನ ೧೨.೩೦ ಕ್ಕೆ ಚೆನ್ನೈಗೆ ಕರೆದೊಯ್ದು ರೇಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

7tum36

ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಖ್ಯಾತ ವೈದ್ಯರಾದ ಡಾ. ಮಹಮದ್ ರೆಲಾ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಲಿದ್ದು ನಂತರ ಮೂರ್‍ನಾಲ್ಕು ದಿನಗಳ ಕಾಲ ಚಿಕಿತ್ಸೆ ನಂತರ ವಾಪಸ್ ಮಠಕ್ಕೆ ಕರೆತರಲಾಗುವುದು ಎಂದು ಶ್ರೀಗಳ ಆಪ್ತ ವೈದ್ಯರಾದ ಡಾ. ಪರಮೇಶ್ ತಿಳಿಸಿದ್ದಾರೆ.ಸ್ವಾಮೀಜಿ ಅವರೊಂದಿಗೆ ಕಿರಿಯಶ್ರೀಗಳು,ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್, ಸ್ವಾಮೀಜಿ ಆರೈಕೆದಾರ ಮಲ್ಲಾರಾಧ್ಯ ಅವರು ಏರ್ ಅಂಬುಲೆನ್ಸ್ ನಲ್ಲಿ ತೆರಳಲಿದ್ದಾರೆ.

ಸ್ಟೆಂಟ್ ಅಳವಡಿಕೆ ಕಷ್ಟ

ಶ್ರೀಗಳಿಗೆ ಸ್ಟೆಂಟ್ ಅಳವಡಿಕೆ ಕಷ್ಟವಾದ ಹಿನ್ನಲೆಯಲ್ಲಿ ನಿನ್ನೆ ಬಿಜಿಎಸ್ ಆಸ್ಪತ್ರೆಯ ವೈದ್ಯರಾದ ಡಾ. ರವೀಂದ್ರ ಮತ್ತು ಶ್ರೀಗಳ ಆಪ್ತ ವೈದ್ಯರಾ ಡಾ.ಪರಮೇಶ್ ಅವರು ಚನ್ನೈಗೆ ತೆರಳಿ ಅಲ್ಲಿನ ವೈದ್ಯರೊಂದಿಗೆ ಚಿಕಿತ್ಸೆ ನೀಡುವ ಸಂಬಂಧ ಚರ್ಚೆ ನಡೆಸಿದ್ದರು. ನಂತರ ಚನ್ನೈನ ಖ್ಯಾತ ಅರವಳಿಕೆ ತಜ್ಞರಾದ ಡಾ. ಎಲ್.ಎನ್. ಕುಮಾರ್ ನೇತೃತ್ವದ ವೈದ್ಯರ ತಂಡವನ್ನು ಸಿದ್ದಗಂಗಾ ಮಠಕ್ಕೆ ಕರೆತಂದು ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದ್ದರು.

ಡಾ. ಮಹಮದ್ ರೆಲಾ ಅವರ ತಂಡ ಶ್ರೀಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬನ್ನಿ ಬದಲಿ ವ್ಯವಸ್ಥೆ ಏನಾದರೂ ಮಾಡಿ ಸ್ವಾಮೀಜಿಯವರನ್ನು ಗುಣಮುಖ ಮಾಡೋಣ ಎಂದು ಆಶ್ವಾಸನೆ ಕೊಟ್ಟರು ಕೂಡಲೇ . ಡಾ. ರವೀಂದ್ರ, ಡಾ. ಪರಮೇಶ್, ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಸಿದ್ದಗಂಗಾ ಮಠದ ಆಡಳಿತ ಮಂಡಳಿಯವರು ಹಾಗೂ ಸರ್ಕಾರದೊಂದಿಗೆ ಶ್ರೀಗಳಿಗೆ ಚನ್ನೈನಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸುವ ಕುರಿತು ರಾತ್ರಿ ೧೦.೪೫ರ ವರೆಗೂ ಸುದೀರ್ಘ ಚರ್ಚೆ ನಡೆಸಿ ಚನ್ನೈಗೆ ಕರೆದೊಯ್ಯುವ ತೀರ್ಮಾನ ಕೈಗೊಳ್ಳಲಾಯಿತು.

7tum37

ಆದರೆ ಶ್ರೀಗಳು ಮಾತ್ರ ತಾವು ಎಲ್ಲೂ ಬರುವುದಿಲ್ಲ. ಶ್ರೀಮಠದಲ್ಲಿಯೇ ಚಿಕಿತ್ಸೆ ನೀಡುವಂತೆ ಹಠ ಹಿಡಿದಿದ್ದರು. ವೈದ್ಯರು, ಕಿರಿಯಶ್ರೀಗಳು ಹಿರಿಯ ಶ್ರೀಗಳೊಂದಿಗೆ ಚರ್ಚಿಸಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಚನ್ನೈಗೆ ತೆರಳಲು ಒಪ್ಪಿಸಿದರು

೧೧ ಸ್ಟಂಟ್ ಅಳವಡಿಕೆ

ಶ್ರೀಗಳಿಗೆ ಈಗಾಗಲೇ ೬ ಬಾರಿ ಎಂಡೊಸ್ಕೋಪಿ ಮೂಲಕ ೧೧ ಸ್ಟಂಟ್‌ಗಳನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಸ್ಟಂಟ್‌ಗಳನ್ನು ಅಳವಡಿಸಲು ಜಾಗ ಇಲ್ಲ. ಅಲ್ಲದೆ ಈಗ ಅಳವಡಿಸಿರುವ ಸ್ಟಂಟ್‌ಗಳಲ್ಲಿ ಮತ್ತೆ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರೀಗಳನ್ನು ಚನ್ನೈಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಲು ತೀರ್ಮಾನಿಸಲಾಗಿದೆ ಶ್ರೀಗಳು ಕ್ಷೇಮವಾಗಿದ್ದಾರೆ. ಭಕ್ತಾದಿಗಳು ಆತಂಕಗೊಳ್ಳುವುದು ಬೇಡ. ಹೆಚ್ಚಿನ ಚಿಕಿತ್ಸೆಗಾಗಿ ಚನ್ನೈಗೆ ಕರೆದೊಯ್ಯಲಾಗುತ್ತಿದೆ ಅಷ್ಟೆ. ಈ ಬಗ್ಗೆ ಅನಗತ್ಯ ಗೊಂದಲಗಳ ಸೃಷ್ಠಿ ಬೇಡ ಡಾ. ರವೀಂದ್ರ ಮನವಿ ಮಾಡಿದರು

ಮಠದಲ್ಲಿ ಭಕ್ತರ ದಂಡು

ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗಿದ್ದ ಭಕ್ತ ಸಮೂಹ ರಾತ್ರಿಯಿಡೀ ಶ್ರೀಮಠದಲ್ಲೇ ಕೊರೆವ ಚಳಿಯನ್ನು ಲೆಕ್ಕಿಸದೇ ಬೀಡು ಬಿಟ್ಟಿದ್ದರುಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆಯಲೇಬೇಕು ಎಂದು ರಾಜ್ಯದ ನಾನಾ ಕಡೆಗಳಿಂದ ಆಗಮಿಸಿರುವ ಭಕ್ತರು ಶ್ರೀಮಠದ ಆವರಣದಲ್ಲಿ ಜಮಾಯಿಸಿದ್ದಾರೆ. ಆದರೆ ಶ್ರೀಗಳ ದರ್ಶನಕ್ಕೆ ಅವಕಾಶ ಇಲ್ಲ ಎಂಬುದು ಗೊತ್ತಿದ್ದರೂ ಸಹ ಶ್ರೀಕ್ಷೇತ್ರದಲ್ಲೇ ತಂಗಿದ್ದು, ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಿಗೆ ಮೊರೆಯಿಡುತ್ತಿದ್ದ ದೃಶ್ಯಗಳು ಕಂಡು ಬಂದವು.

7tum38

ಶ್ರೀಗಳು ಕ್ಷೇಮ

ಶ್ರೀಗಳ ಆರೋಗ್ಯ ಸುಧಾರಿಸಿದ್ದು, ಕ್ಷೇಮವಾಗಿದ್ದಾರೆ. ಈಗಾಗಲೇ ಅವರೇ ನಡೆದುಕೊಂಡು ಬಂದು ಮಾಧ್ಯಮದವರು ಮತ್ತು ಭಕ್ತಾದಿಗಳಿಗೆ ದರ್ಶನ ನೀಡಿ ಹೋಗಿದ್ದಾರೆ. ಹಾಗಾಗಿ ಭಕ್ತಾದಿಗಳು ಯಾವುದೇ ಆತಂಕಕ್ಕೆ ಒಳಗಾಗಬಾರದು. ಸ್ಟಂಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಸೋಂಕಿನ ನಿವಾರಣೆಗಾಗಿ ಚನ್ನೈಗೆ ಕರೆದೊಯ್ಯುತ್ತಿರುವುದಾಗಿ ಕಿರಿಯ ಶ್ರೀಗಳು ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಇಷ್ಟಲಿಂಗ ಪೂಜೆ

ಎಂದಿನಂತೆ ಇಂದು ಬೆಳಿಗ್ಗೆಯೂ ಶ್ರೀಗಳು ಲವಲವಿಕೆಯಿಂದಲೇ ಇಷ್ಟಲಿಂಗ ಪೂಜೆಯನ್ನು ಸುಮಾರು ೨೦ ನಿಮಿಷಕ್ಕೂ ಅಧಿಕ ಕಾಲ ನೆರವೇರಿಸಿ ಪ್ರಸಾದ ಸೇವಿಸಿದ ಚೆನ್ನೈಗೆ ಕರೆದೊಯ್ಯಲಾಯಿತು.

Leave a Comment