ಶಶಿಕಲಾಗೆ ವಿಶೇಷ ಆತಿಥ್ಯ

ಬೆಂಗಳೂರು, ಸೆ.೧೩: ಅಕ್ರಮ ಆಸ್ತಿ ಸಂಪಾದನೆ ಆಪಾದನೆಯಲ್ಲಿ ಜೈಲು ಸೇರಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ನಟರಾಜನ್ ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡುತ್ತಿರುವುದು ಮತ್ತೆ ಮುಂದುವರಿದಿದೆ.
ಆರ್‌ಟಿಐಯಡಿ ಕೇಳಿರುವ ಪ್ರಶ್ನೆಗೆ ಸ್ವತಃ ಜೈಲು ಅಧಿಕಾರಿಗಳೇ ನೀಡಿರುವ ಉತ್ತರದಲ್ಲಿ ಇದು ಸ್ಪಷ್ಟವಾಗಿದ್ದು, ಜೈಲಿನ ನಿಯಮಗಳನ್ನು ಉಲ್ಲಂಘಿಸಿ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದು ವರದಿಯಾಗಿದೆ.
ಜೈಲು ನಿಯಮಗಳ ಪ್ರಕಾರ, ಯಾವುದೇ ಒಬ್ಬ ಕೈದಿಯನ್ನು ೧೫ ದಿನಗಳಿಗೊಮ್ಮೆ ನಾಲ್ಕರಿಂದ ಐದು ಮಂದಿ ಕುಟುಂಬದ ಆಪ್ತ ಸದಸ್ಯರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಬಹುದಾಗಿದೆ. ಆದರೆ ಈ ನಿಯಮವನ್ನು ಶಶಿಕಲಾ ವಿಷಯದಲ್ಲಿ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಜುಲೈ ೫ರಂದು ವೆಂಕಟೇಶ್, ದಿನಕರನ್, ಪಳನಿವೇಲು, ರಾಮಲಿಂಗಂ, ಹುಸೈನ್ ಮತ್ತು ವೆಟ್ರಿವೇಲ್ ಎಂಬವರು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಶಶಿಕಲಾ ಅವರನ್ನು ಭೇಟಿ ಮಾಡಿದ್ದಾರೆ. ಜುಲೈ ೧೧ರಂದು ಮತ್ತೆ ಏಳು ಮಂದಿ ಜೈಲಿಗೆ ಆಗಮಿಸಿ ಶಶಿಕಲಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ತಂಡದಲ್ಲಿ ಶಕೀಲಾ ವಿವೇಕ್, ಕೀರ್ತನಾ, ಜಯ, ವೆಟ್ರಿವೇಲ್, ತಾಮರೈಚೆಲುವನ್, ನಾಗರಾಜ್ ಇದ್ದರು. ಮತ್ತೆ ಆಗಸ್ಟ್ ೨ರಂದು ಕರ್ನಾಟಕದ ಎಐಎಡಿಎಂಕೆ ಮುಖಂಡರೊಬ್ಬರು ಸಂಜೆ ನಾಲ್ಕು ಗಂಟೆಯಿಂದ ೫.೫೦ರವರೆಗೆ ಶಶಿಕಲಾ ಅವರೊಟ್ಟಿಗೆ ಇರುವುದು ಜೈಲಿನ ದಾಖಲೆಗಳಿಂದ ಬಹಿರಂಗವಾಗಿದೆ. ಜೈಲಿನ ನಿಯಮಗಳ ಪ್ರಕಾರ ಯಾವುದೇ ಕೈದಿಯನ್ನು ಸಂಜೆ ಐದು ಗಂಟೆಯಿಂದ ಭೇಟಿ ಮಾಡಲು ಯಾರಿಗೂ ಅವಕಾಶವಿಲ್ಲ. ಆದರೆ ಇಲ್ಲಿ ಅದನ್ನು ನಿಯಮವನ್ನು ಉಲ್ಲಂಘಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೆ ನೀಡುವ ಬೆಳಗ್ಗಿನ ಉಪಹಾರವನ್ನು ಶಶಿಕಲಾ ಇದುವರೆಗೂ ಸ್ವೀಕರಿಸಿಲ್ಲ ಎಂದೂ ಆರ್‌ಟಿಐಗೆ ನೀಡಿರುವ ಉತ್ತರದಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಶಶಿಕಲಾ ಮತ್ತು ಇಳವರಸಿ ಅವರು ಸಾಮಾನ್ಯ ಬಣ್ಣದ ಉಡುಪಿನಲ್ಲಿ ಜೈಲು ಆವರಣದಲ್ಲಿ ಓಡಾಡುತ್ತಿರುವ ವಿಡಿಯೋ ತುಣುಕು ಬಹಿರಂಗವಾಗಿತ್ತು. ಶಶಿಕಲಾ ನಟರಾಜನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲು ಕೋಟ್ಯಂತರ ರೂ.ಗಳನ್ನು ಜೈಲು, ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ ಎಂಬ ಆರೋಪ ಈ ಹಿಂದೆ ಕೇಳಿಬಂದ ಬಳಿಕ ಜೈಲಿನ ಡಿಐಜಿ ರೂಪಾ ಮತ್ತು ಎಡಿಜಿ ಸತ್ಯನಾರಾಯಣ ರಾವ್ ಅವರ ನಡುವೆ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.

Leave a Comment