ಶರಿಯತ್ ಪಾಲನೆಗೆ ತೊರಗಲ್ಲ ಕರೆ

ಹುಬ್ಬಳ್ಳಿ, ಮಾ. 14- ಇಸ್ಲಾಮಿ ಶರಿಯತ್ ಎಂಬುದು ಅಲ್ಲಾಹನ ಆಜ್ಞೆಗಳಾಗಿದ್ದು, ಮುಸ್ಲಿಂ ಸಮುದಾಯದ ಒಮ್ಮತಾಭಿಪ್ರಾಯ ಹಾಗೂ ಇಮಾಮರ ಇಜ್ತಿಹಾದ ಸಂಶೋಧನೆಗಳನ್ನು ಒಳಗೊಂಡ ಕಾನೂನುಗಳ ಸಮಾಹಾರವಾಗಿದೆ. ಈ ಶರಿಯತ್‍ನಂತೆ ಬದುಕು ಸಾಗಿಸುವುದರಿಂದ ಮಾತ್ರ ನಾವು ಇಹಲೋಕದಲ್ಲೂ ಪರಲೋಕದಲ್ಲೂ ಯಶಸ್ವಿಯಾಗುವೆವು ಎಂದು ಧಾರವಾಡ ಜಿಲ್ಲಾ ದುರ್ಬಲ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಐ.ಎಂ. ತೊರಗಲ್ಲ ಹೇಳಿದರು.
ಶರಿಯತ್ ತತ್ವಾದರ್ಶಗಳಿಂದ ಕೂಡಿದ್ದು, ನ್ಯಾಯದೃಷ್ಟಿಯಿಂದ ಪರಿಪೂರ್ಣವಾಗಿದೆ. ಇದರ ಚಾಲನೆಯು ನಮ್ಮನ್ನು ಇಹಲೋಕ ಪರಲೋಕಗಳಲ್ಲೂ ವಿಜಯಿಗಳನ್ನಾಗಿ ಮಾಡುತ್ತದೆ. ಇದರ ಉಲ್ಲಂಘನೆ ಮಾಡಿದರೆ ಅಲ್ಲಾಹನ ಕ್ರೋಧವನ್ನು ಅಹ್ವಾನಿಸಿದಂತೆ. ಶರಿಯತ್ ಆದೇಶಗಳನ್ನು ಧಿಕ್ಕರಿಸಿದರೆ ಅಲ್ಲಾಹನು ಶೈತಾನ ಫಾಸಿಕ ಮತ್ತು ಜಾಲಿಮ ಎಂದು ಸಾರಿದ್ದು, ಅದರ ರಕ್ಷಣೆ ಬಹುದೊಡ್ಡ ಕಾರ್ಯವಾಗಿದೆ. ಅದರ ಪಾಲನೆಯಿಂದ ಜೀವನದಲ್ಲಿ ಒಳ್ಳೆಯ ಪರಿಣಾಗಳಾಗುವುದು ಎಂದು ಅವರು ಹೇಳಿದರು.
ನಮ್ಮ ದೇಶದ ಮುಸ್ಲಿಮೇತರರಿಗೆ ಇಸ್ಲಾಂ ಹಾಗೂ ಶರಿಯತ್ ಬಗ್ಗೆ ಇರುವ ತಪ್ಪು ನಂಬಿಕೆಗಳನ್ನು ಹೋಗಲಾಡಿಸಲು ಅದರ ಸಂಪೂರ್ಣ ಪರಿಚಯ ಮಾಡಿಸಬೇಕು. ಅಲ್ಲಾಹನ ಆದೇಶಗಳು ಸಕಲ ಮಾನವರಿಗಾಗಿದೆ. ಅಲ್ಲಾಹನ ಸಕಲ ದಾಸರ ವಿಜಯದ ಮಾರ್ಗ ಆಗಿದೆ. ನಾವೆಲ್ಲ ಭಾರತೀಯರು ಒಂದೆ. ಈ ದೇಶ ನಮ್ಮದು ಇತ್ತು. ನಮ್ಮದು ಇರುತ್ತದೆ ಎಂದು ದೇಶಭಕ್ತರಂತೆ ವರ್ತಿಸಬೇಕು. ಶರಿಯತ್ ಕಾನೂನು ಜೊತೆಗೆ ನಮ್ಮ ದೇಶದ ಕಾನೂನನ್ನು ಗೌರವಿಸಬೇಕು ಎಂದು ಇಸ್ಲಾಂ ಧರ್ಮಿಯರಿಗೆ ಕರೆ ನೀಡಿದರು.
ತಲಾಖ್: ಕೋಪದಿಂದ ಮೂರು ಬಾರಿ ತಲಾಖ್ ಹೇಳುವುದು ಅಲ್ಲಾಹನಿಗೂ ಇಷ್ಟವಿಲ್ಲದ್ದು. ಅದು ಶರಿಯತ್ ಶಿಕ್ಷಣಗಳ ಉಲ್ಲಂಘನೆಯಾಗಿದೆ. ಕೆಲ ಕುಶ್ಕರ್ಮಿಗಳು ಶರಿಯತ್ ಕಾನೂನನ್ನು ಬಿಟ್ಟು ಎಡಸೊಕ್ಕಿನಿಂದ ತಮಗೆ ಬೇಕಾದ ಹಾಗೆ ವರ್ತಿಸುತ್ತಿದ್ದಾರೆ. ಇದು ಅಪರಾಧವಾಗಿದೆ.
ತಲಾಖ್ ಬಗ್ಗೆ ಕೆಲವು ತಪ್ಪು ಅಭಿಪ್ರಾಯಗಳಿವೆ. ತಲಾಖ್ ತೀರ್ಮಾನದ ಮಾತುಕತೆ ಸಂದಾನದ ಮೂಲಕ ಹಲವಾರು ಬಾರಿ ಕೂತು ವಿಚಾರಿಸಿ ಎಲ್ಲ ಪ್ರಯತ್ನಗಳು ವಿಫಲವಾದ ನಂತರ ಚೆನ್ನಾಗಿ ಯೋಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು. ಇದರಲ್ಲಿ ಶರಿಯತ್‍ನ ನಿಯಮಗಳನ್ನು ಅನುಸರಿಸಬೇಕು. ತಲಾಖ ತೀರ್ಮಾನವಾದರೆ ಇದ್ದತನ ಮೂರು ತಿಂಗಳು ಅವಧಿ ಕಳೆಯುವುದಕ್ಕೆ ಕಾಯಬೇಕು. ಈ ಕಾಲದಲ್ಲಿ ಪತಿಗೆ ಪತ್ನಿಯನ್ನು ಮರಳಿ ಪಡೆಯುವ ಹಕ್ಕಿರುತ್ತದೆ. ಇದು ಇತ್ಯರ್ಥವಾಗದಿದ್ದಲ್ಲಿ ಊರಿನ ಖಾಜಿ ನೇತೃತ್ವದಲ್ಲಿ ಇಬ್ಬರು ಸಾಕ್ಷಿ ಮುಂದೆ ಮತ್ತೆ ಮೂರು ಸಲ ತಲಾಖ್ ನೀಡಿ ಅವಳಿಗೆ ಅಝಾದ ಮಾಡಬೇಕು. ಮುಂದೆ ತಲಾಖ್ ಕೊಟ್ಟ ಪತ್ನಿ ತಾನು ಮರು ಮದುವೆಯಾಗಿ ತನ್ನ ಜೀವನ ನಡೆಸಿಕೊಳ್ಳಬಹುದು. ಇದನ್ನು ಮುಸ್ಲಿಂ ಸಮಾಜ ಮನಗಾಣಬೇಕು. ಈ ರೀತಿ ಸಮಸ್ಯೆಗಳನ್ನು ಜಮಾತ್‍ನಿಂದ ನಾವೇ ಪರಿಹರಿಸಲು ಪತ್ರಯತ್ನಿಸಬೇಕು ಎಂದು ಅವರು ಹೇಳಿದರು.
ಮುಸ್ಲಿಂ ಸಮಾಜದಲ್ಲಿ ಆಸ್ತಿಯ ವಾರಸು ಸೊತ್ತಿನ ನಿಯಮಗಳನ್ನೂ ಕುರಾನಿನಲ್ಲಿ ವಿವರಿಸಿದ್ದು, ಅದನ್ನೂ ಸಹ ಶರಿಯತ್ ಪ್ರಕಾರ ಪಾಲಿಸಬೇಕು. ಅಲ್ಲಾಹನು ನಮಗೆ, ನಮ್ಮ ಮಕ್ಕಳಿಗೆ ಜೀವನದಲ್ಲಿ ಇಸ್ಲಾಮಿನಂತೆ ನಡೆಯಲು ಅನುಗ್ರಹಿಸಲಿ ಎಂದು ಐ.ಎಂ. ತೊರಗಲ್ ಕೆ.ಕೆ. ಮುಲ್ಲಾ, ಜೆ.ಎಂ. ಗೋಕಾಕ, ತೌಸಿಫ್ ಅತ್ತಾರ, ಮುಸ್ತಾಕ ಯಾದಗಿರಿ ತಿಳಿಸಿದ್ದಾರೆ.

Leave a Comment