ಶರಣ ಕ್ರಾಂತಿಯಾಗಿ 900 ವರ್ಷಗಳಾದರೂ ಅಸಮಾನತೆ ಅಳಿದಿಲ್ಲ : ಕಾರಜೋಳ

ಬೆಂಗಳೂರು, ಫೆ. 16- ವಿಶ್ವಗುರು ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರು 900 ವರ್ಷಗಳ ಹಿಂದೆ ಸಾಮಾಜಿಕ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದ್ದರೂ ಅಸಮಾನತೆ ಇನ್ನೂ ಅಳಿದಿಲ್ಲ. ಶರಣರ ಆಶಯವಾಗಿದ್ದ ಸಾಮಾಜಿಕ ಸಮಾನತೆ ಕುರಿತು ಎಲ್ಲರೂ ಚಿಂತನೆ ನಡೆಸಬೇಕಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎನ್. ಕಾರಜೋಳ ಹೇಳಿದರು.
ನಗರದ ತುಮಕೂರು ರಸ್ತೆಯಲ್ಲಿರುವ ನಂದಿ ಮೈದಾನದಲ್ಲಿಂದು ಆಯೋಜಿಸಿದ್ದ ಅಸಂಖ್ಯ ಪ್ರಮುಖರ ಗಣ ಮೇಳ, ಸರ್ವ ಶರಣರ ಸಮಾವೇಶದಲ್ಲಿ ಮಾತನಾಡಿದ ಅವರು, ಶರಣರು ಈ ಸಮಾವೇಶ ನೋಡಿದರೆ 12ನೇ ಶತಮಾನದ ಅನುಭವ ಮಂಟಪ ನೆನಪಿಗೆ ಬರುತ್ತದೆ. ಅಂದು ಅಲ್ಲಮ್ಮ ಪ್ರಭು ಅವರ ನೇತೃತ್ವದಲ್ಲಿ ಈ ಸಮ್ಮೇಳನ ನಡೆದಿತ್ತು. ಈಗ ಮತ್ತೆ ನಡೆಯುತ್ತಿದೆ ಎಂದರು.
ಶರಣ ಕ್ರಾಂತಿಯಾಗಿ 900 ವರ್ಷಗಳಾದರೂ ಶೋಷಣೆ ನಿಂತಿಲ್ಲ, ಸಮಾನತೆ ಬಂದಿಲ್ಲ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಮಾನವ ಯಾರನ್ನೂ ಶೋಷಣೆ ಮಾಡಬಾರದೆಂಬುದು ಬಸವಧರ್ಮ, ಇಡೀ ಜಗತ್ತಿನಲ್ಲಿ ಯಾವುದಾದರೂ ಶ್ರೇಷ್ಠ ಧರ್ಮವಿದ್ದರೆ ಅದು ಬಸವಣ್ಣನ ಲಿಂಗಾಯತ ಧರ್ಮ ಎಂದರು. ವಿಶ್ವಗುರು ಬಸವಣ್ಣ ಅವರು ಮಾನವರೆಲ್ಲ ಒಂದೇ ಎಂಬ ಥೇರನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಎಳೆಯುವ ಕೆಲಸ ಮಾಡಬೇಕಿದೆ. ಬಸವ ಧರ್ಮ ಎಂಬ ಲಿಂಗಾಯತ ಧರ್ಮ ಮಾನವ ಧರ್ಮ ಆಗಬೇಕು ಎಂಬ ಆಶಯ ತಮ್ಮದು ಎಂದರು.

ಸಮಾನತೆಗಾಗಿ ಸಮಾವೇಶ ಬಿ.ವೈ ವಿಜಯೇಂದ್ರ
ಈ ಅಸಂಖ್ಯ ಪ್ರಮಥರ ಗಣಮೇಳವನ್ನು ಸಮಾನತೆಯ ಸಂದೇಶಕ್ಕಾಗಿ ನಡೆಸಲಾಗುತ್ತದೆ. ಸಮಾಜದಲ್ಲಿನ ಅಂಧಕಾರವನ್ನು ಹೋಗಲಾಡಿಸಿ ಸಮಾನತೆಯನ್ನು ಬೆಳೆಸಲು ಈ ಸಮಾವೇಶ ನಡೆಸಿದ್ದೇವೆ ಎಂದು ಈ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವಿ ವಿಜಯೇಂದ್ರ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಜಾತಿ-ಧರ್ಮಗಳನ್ನು ನೋಡದೆ ಎಲ್ಲರ ಅಭಿವೃದ್ಧಿಗೆ ಹಣ ನೀಡಿದ್ದಾರೆ ಎಂದರು. ಅಂದು ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ನಡೆದ ಗಣಮೇಳ ಇಂದು ಮುರುಘಾ ಶರಣರ ನೇತೃತ್ವದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಕನ್ನಡ ನಾಡಿನ ಹೆಮ್ಮೆಯ ವಿಚಾರ ಎಂದರು.
ಅಂದು ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಗಣಮೇಳ ನಡೆದಾಗ ಬಿಜ್ಜಳರ ಆಡಳಿತವಿತ್ತು. ಇಂದು ಯಡಿಯೂರಪ್ಪನವರ ಆಡಳಿತವಿದೆ. ಇಲ್ಲಿ ಗಣಮೇಳ ನಡೆಯುತ್ತಿದೆ. ಬಸವಣ್ಣನವರ ಕಾಲದ ಗಣಮೇಳ ಮರುಕಳಿಸುತ್ತಿದೆ. ದ್ವೇಷ ಮತ್ತು ಅಸೂಯೆಗಳು ಹೋಗಿ ಶಾಂತಿ ನೆಲಸಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಸವದಿ ಹೇಳಿಕೆ
ಇದೇ ಸಮಾವೇಶದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮನುಷ್ಯ ಮೂರು ವಿಚಾರವನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಹುಟ್ಟು-ಸಾವು-ಬದುಕು ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಆದರೆ, ಹುಟ್ಟು-ಸಾವಿನ ಮಧ್ಯೆ ಸರಿಯಾದ ಜೀವನ ನಡೆಸಬೇಕು ಎಂದರು.
ಅಕ್ಕ-ಪಕ್ಕ ಕುಳಿತ ವಿಜಯೇಂದ್ರ, ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಯಡಿಯೂರಪ್ಪ ಪುತ್ರ ವಿಜಯೇಂದ್ರ ಪಕ್ಕದಲ್ಲೇ ಕುಳಿತು ಇಬ್ಬರು ನಗುತ್ತ ಗಹನ ಚರ್ಚೆಯಲ್ಲಿ ತೊಡಗಿದ್ದು, ವಿಶೇಷವಾಗಿತ್ತು.ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಹುಟ್ಟುಹಬ್ಬದ ದಿನವಾದ ಇಂದು ಸಿದ್ದರಾಮಯ್ಯ ಅವರು ಸವದಿ ಅವರ ಕೈ ಕುಲುಕಿ ಶುಭ ಹಾರೈಸಿದರು.

ಪುಸ್ತಕ ಬಿಡುಗಡೆ
ಇದೇ ಸಂದರ್ಭದಲ್ಲಿ ಮುರುಘಾ ಶ್ರೀಗಳ `ಮಹಾ ಬೆರಗು’ ಪುಸ್ತಕದ ಇಂಗ್ಲಿಷ್ ಅನುವಾದದ `ವಂಡರ್ ವಂಡರ್’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ದಾಖಲೆ
ಇಂದು ಶಿವಯೋಗ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಮಂದಿ ಇಷ್ಟಲಿಂಗ ಪೂಜೆ ಮಾಡಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ದಾಖಲಾಗಿದ್ದು, ವೇದಿಕೆಯಲ್ಲಿ ಮುರುಘಾ ಶ್ರೀಗಳನ್ನು `ಇಂಡಿಯಾ ಬುಕ್ ಆಫ್ ರೆಕಾರ್ಡ್’ ಪ್ರತಿನಿಧಿಗಳು ಸನ್ಮಾನಿಸಿದರು.
ಅಚ್ಚುಕಟ್ಟಾದ ವ್ಯವಸ್ಥೆ
ಈ ಗಣಮೇಳಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಊಟ-ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ಝಳವನ್ನು ತಪ್ಪಿಸಲು ದೊಡ್ಡ ಪೆಂಡಾಲ್ ಹಾಕಲಾಗಿತ್ತು.

Leave a Comment