ಶಬರಿಮಲೈನತ್ತ ಭಕ್ತರ ಚಿತ್ತ

ತಿರುವನಂತಪುರಂ, ನ. ೧೩: ಅಯೋಧ್ಯೆ ವಿವಾದ ಇತ್ಯರ್ಥವಾದ ನಂತರ ಇದೀಗ ಎಲ್ಲರ ಗಮನ ಕೇರಳದ ಶಬರಿಮಲೈನತ್ತ ತಿರುಗಿದೆ. ಮಂಡಲಪೂಜೆ ಪ್ರಯುಕ್ತ ಇದೇ ನ. ೧೬ ರಿಂದ ಭಕ್ತಾದಿಗಳಿಗಾಗಿ ಬಾಗಿಲು ತೆರೆಯುವ ಶಬರಿಮಲೈನಲ್ಲಿ ಈ ಬಾರಿ ಅತ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗುತ್ತಿದ್ದು, ದೇವಾಲಯ ಹಾಗೂ ಸುತ್ತಮುತ್ತಲ ಪ್ರದೇಶಗಳ ಭದ್ರತ ವ್ಯವಸ್ಥೆ ನೋಡಿಕೊಳ್ಳಲೆಂದೇ ಸುಮಾರು ೧೦,೦೦೦ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ.
೩ ತಿಂಗಳ ಸುದೀರ್ಘ ಮಂಡಲ ಪೂಜೆ ಅವಧಿಯಲ್ಲಿ ದೇವಾಲಯ ಭಕ್ತಾದಿಗಳಿಗೆ ನ. ೧೬ರಿಂದ ಮುಕ್ತವಾಗಲಿದ್ದು, ನ. ೧೫ ರಿಂದಲೇ ಐದು ಹಂತಗಳಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ. ೨೪ ಪೊಲೀಸ್ ಅಧೀಕ್ಷಕರು (ಎಸ್‌ಪಿ), ಎಎಸ್ಪಿಗಳು, ೧೧೨ ಡಿವೈಎಸ್‌ಪಿಗಳು, ೨೬೪ ಇನ್ಸ್‌ಪೆಕ್ಟರ್‌ಗಳು, ೧೧೮೫ ಸಬ್ ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಲಾಗುತ್ತಿದೆ. ಅಲ್ಲದೆ ೩೦೭ ಮಹಿಳಾ ಪೇದೆಗಳೂ ಸೇರಿದಂತೆ ಒಟ್ಟು ೮೪೦೨ ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ಮಂದಿರ ಸಂಕೀರ್ಣದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.
ಶಬರಿಮಲೈ ಮಂದಿರದೊಳಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಆದೇಶದಿಂದ ನುಣುಚಿಕೊಳ್ಳುವಂತಹ ಯಾವುದೇ ಪರ್‍ಯಾಯ ಕಾನೂನು ರಚಿಸಲು ಸಾಧ್ಯವೇ ಇಲ್ಲ ಎಂದು ಈ ತಿಂಗಳ ಆರಂಭದಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.
ಶಬರಿಮಲೈ ಅಯ್ಯಪ್ಪ ಸ್ವಾಮಿ ಮಂದಿರದೊಳಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ ೨೮ಕ್ಕೆ ಆದೇಶ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಸುಪ್ರೀಂನತ್ತ ಗಮನ:
ಸುಪ್ರಿಂ ಕೋರ್ಟಿನ ಈ ತೀರ್ಪು ಪುನರ್ ಪರಿಶೀಲನೆಗೆ ಕೋರಿ ಬಂದಿರುವ ಸುಮಾರು ೬೫ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಸದ್ಯದಲ್ಲೆ ಹೊರಬರುವ ತೀರ್ಪಿನತ್ತ ಇದೀಗ ಎಲ್ಲರ ಗಮನ ಹರಿದಿದೆ. ಶಬರಿಮಲೈ ಅಯ್ಯಪ್ಪ ಸ್ವಾಮಿ ಮಂದಿರದೊಳಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌ನ ತೀರ್ಪಿನ ಅನುಷ್ಟಾನಕ್ಕೆ ಕೇರಳದ ಸಿಪಿಐ (ಎಂ) ಸರ್ಕಾರ ಮುಂದಾದಾಗ ಕಳೆದ ವರ್ಷ ವ್ಯಾಪಕ ಹಿಂಸಾಚಾರ ನಡೆದಿತ್ತು. ರಾಜ್ಯದಲ್ಲಿ ಐದು ಬಾರಿ ಬಂದ್ ಆಚರಿಸಲಾಗಿತ್ತು. ಕನಿಷ್ಟ ೫೦ ಸಾವಿರ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದೆಲ್ಲದರಪರಿಣಾಮವಾಗಿ ಮಂದಿರಕ್ಕೆ ವಾರ್ಷಿಕ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯಲ್ಲೂ ಇಳಿಮುಖವಾಗಿ ಮಂದಿರದ ಆದಾಯವೂ ಕುಸಿದಿತ್ತು.

Leave a Comment