ಶನಿ ಗ್ರಹದಲ್ಲಿ ಪ್ರಚಂಡ ಬಿರುಗಾಳಿ

  • ಉತ್ತನೂರು ವೆಂಕಟೇಶ್

ಶನಿ ಗ್ರಹದ ಪ್ರಕ್ಷುಬ್ಧ ವಲಯದಲ್ಲಿ ಪ್ರಚಂಡ ಬಿರುಗಾಳಿ ಅಧ್ಯಯನದಿಂದ ಸೌರ ಮಂಡಲದ ವಾತಾವರಣ ಕುರಿತಂತೆ ವಿಜ್ಞಾನಿಗಳ ಈವರೆಗಿನ ಅರಿವು ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳುವಂತಾಗಿದೆ ಎಂದು ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ ಮತ್ತು ಆರಿಜೋನಾ ವಿಶ್ವವಿಧ್ಯಾ ನಿಲಯಗಳ ಜಂಟಿ ಅಧ್ಯಯನ ತಂಡ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ಈ ಅಧ್ಯಯನ ವರದಿ  ನೇಚರ್ ಅಸ್ಟ್ರಾನಮಿಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಶನಿಗ್ರಹದ ಪ್ರಕ್ಷುಬ್ಧ ವಲಯದಲ್ಲಿ ಬೀಸುವ ಪ್ರಚಂಡ ಶಕ್ತಿಯ ಬಿರುಗಾಳಿಯನ್ನು ಪ್ಲಾನೆಟ್ ಟೆಕ್ನಿಕ್ ಹೆಸರಿನ ಹೊಸ  ತಂತ್ರಜ್ಷಾನ ಬಳಸಿ ಅಧ್ಯಯನ ಮಾಡಲಾಗಿದ್ದು ಇದರಿಂದ ಲಭ್ಯವಾಗಿರುವ  ಮಾಹಿತಿಗಳು  ಶನಿಗ್ರಹ ಹಾಗು ಸೌರಮಂಡಲ ವಾತಾವರಣ ಬಗ್ಗೆ ಹೊಸ ಚಿಂತನೆ ಮತ್ತು ಹೊಸ ಶೋಧನೆಗೆ ಪ್ರೇರೇಪಿಸಿದೆ ಎಂದು ಅಧ್ಯಯನ ತಂಡ ತನ್ನ ವರದಿಯಲ್ಲಿ ಹೇಳಿದೆ. ಇದು ಶನಿಗ್ರಹದ ಮುಂದಿನ ಶೋಧನೆಗಳಿಗೂ ಸಹಕಾರಿಯಾಗಲಿದೆ ಎಂದೂ ತಂಡ ಅಭಿಪ್ರಾಯ ಪಟ್ಟಿದೆ.

ಭೂಮಿಯ ಮೇಲಿನ ಬಿರುಗಾಳಿಗಿಂತ ಅತಿ ವೇಗವಾಗಿ ಈ ಗ್ರಹದಲ್ಲಿ ಗಾಳಿ ಬೀಸುತ್ತದೆ.ಈ ಪ್ರಚಂಡ ಬಿರುಗಾಳಿಯಿಂದ ಗ್ರಹದ ಕೆಳ ಹಂತದ ಅನಿಲ ವಾತಾವರಣದಲ್ಲಿಯ ಕಣಗಳನ್ನು  ಮೇಲು ಭಾಗಕ್ಕೆ ಒಯ್ಯುವ ಮೂಲಕ  ಅಲ್ಲಿಯ ವಾತಾವರಣದಲ್ಲಿಯ ಬದಲಾವಣೆ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅನಿಲಗಳಿಂದ ಕೂಡಿರುವ ಈ ಗ್ರಹ ತುಂಬ ಹಗುರ ವಾದದ್ದು. ಇದು ಎಷ್ಟು ಹಗುರ ಎಂದರೆ  ಈ ಗ್ರಹವನ್ನು ಸಾಗರಕ್ಕೆ ಎಸೆದರೆ, ಅದು ನೀರಿನ ಮೇಲೆ ತೇಲುತ್ತದೆ.

12vichara2

ಸೌರ ಮಂಡಲದಲ್ಲಿಯ ಗ್ರಹಗಳಲ್ಲಿ ಶನಿಗ್ರಹ ವಿಚಿತ್ರ ಹಾಗೂ ವಿಶೇಷತೆಯಿಂದ ಕೂಡಿರುವ ಗ್ರಹ. ಈ ಗ್ರಹದ ಸುತ್ತಲಿನ ವರ್ತುಲಗಳು ಈ ಗ್ರಹಕ್ಕೆ ವಿಶೇಷತೆ ತಂದು ಕೊಟ್ಟಿದೆ. ಗ್ರಹದ ಸುತ್ತ ನಿರಂತರವಾಗಿ ಸುತ್ತುವ ಈ ವರ್ತುಲಗಳು ಹೈಡ್ರೋಜನ್, ಹೀಲಿಯಂ ಮತ್ತು ಅಮೋನಿಯಂ ಮೋಡಗಳಿಂದ ಕೂಡಿವೆ ಹಾಗೆಯೆ ಈ ಗ್ರಹಕ್ಕೆ ೫೩ ಚಂದ್ರರಿದ್ದಾರೆ. ಸೂರ್ಯನಿಂದ  ೮೨ ಕೋಟಿ  ೬೦ ಲಕ್ಷ ಮೈಲುಗಳ ದೂರದಲ್ಲಿರುವ ಈ ಗ್ರಹದ ವಿಸ್ತೀರ್ಣ ೧೧೫೬,೪೬೪ ಕಿ.ಮಿ.

ಭೂಮಿಗಿಂತ ೭೦೦ ಪಟ್ಟು ದೊಡ್ಡದಿರುವ ಇದರ ತಾಪಮಾನ  ಮೈನಸ್ ೧೮೦ ಸೆಲ್ಷಿಯಸ್. ಮೈನಸ್ ತಾಪಮಾನ ಈ ಗ್ರಹದಲ್ಲಿ ಇರುವುದರಿಂದಲೇ ಅಲ್ಲಿಯ ಅನಿಲಗಳು ಗ್ರಹದಿಂದ ಹೊರಹೋಗಲು ಸಾಧ್ಯವಿಲ್ಲ.

ಈ ಗ್ರಹದ ಶೋಧನೆಯಲ್ಲಿ  ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಮತ್ತು ಖಗೋಳ ವಿಜ್ಞಾನಿಗಳಿಗೆ ಹೆಚ್ಚಿನ ಆಸಕ್ತಿ. ಮತ್ತು ಕುತೂಹಲ ೧೯೭೯ ರಲ್ಲಿ ಇದರ ಶೋಧನೆಗೆ ಹೊರಟ ಮೊದಲ ಬಾಹ್ಯಾಕಾಶ ನೌಕೆ ಪಯೋನಿಯರ್-೧. ನಂತರ ದಲ್ಲಿ ಪಯೊನಿಯರ್ -೨, ೧೯೮೦ ರಲ್ಲಿ  ವಾಯೇಜರ್-೧ ಮತ್ತು ವಾಯೇಜರ್ -೨ ಈ ಗ್ರಹ ಕುರಿತಂತೆ ಹೆಚ್ಚು ಹೆಚ್ಚು ಮಾಹಿತಿಯನ್ನು ರವಾನಿಸಿದವು. ಜನವರಿ ೧, ೨೦೦೪ ರಲ್ಲಿ  ಈ ಗ್ರಹದ ಶೋಧನೆಗೆ ಹೊರಟ ಕ್ಯಾಸಿನಿ ಹೈಗನ್ಸ್ ಈ ವರೆವಿಗೆ ೭೪ ಬಾರಿ ಗ್ರಹದ ಪ್ರದಕ್ಷಿಣೆ ಮಾಡಿ ಕುತೂಹಲಕಾರಿ ಮಹಿತಿಯನ್ನು ರವಾನಿಸಿದೆ.

Leave a Comment