ಶತ್ರು ನಾಶಕ್ಕೆ ಸಿಎಂ ಪ್ರತ್ಯಂಗಿರ ಹೋಮ

ಚಿಕ್ಕಮಗಳೂರು, ಡಿ. ೭- ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಶೃಂಗೇರಿಯಲ್ಲಿ ಪ್ರತ್ಯಂಗಿರ ಹೋಮದಲ್ಲಿ ಪಾಲ್ಗೊಂಡರು. ಆರೋಗ್ಯವೃದ್ಧಿ, ಶತ್ರು ನಾಶಕ್ಕಾಗಿ ಈ ಪ್ರತ್ಯಂಗಿರ ಹೋಮ ನಡೆಯುತ್ತಿದ್ದು, ಈ ಹೋಮದಲ್ಲಿ ಮುಖ್ಯಮಂತ್ರಿಗಳ ಜತೆ ಸಚಿವ ರೇವಣ್ಣ ಹಾಗೂ ಕುಟುಂಬಸ್ಥರು ಪಾಲ್ಗೊಂಡರು.

ಯಾಗದ ಪೂರ್ವಾಹುತಿವರೆಗೂ ವೃತದಲ್ಲಿರುವ ಕುಮಾರಸ್ವಾಮಿ, ಹೋಮಕ್ಕೂ ಮುನ್ನ ಶೃಂಗೇರಿ ಶಾರದಾಂಬೆಯ ದರ್ಶನ ಪ‌ಡೆದರು. ಶೃಂಗೇರಿಯಲ್ಲಿ ಇಂದು ನಡೆದ ಹೋಮದಲ್ಲಿ ಪಾಲ್ಗೊಳ್ಳಲು ನಿನ್ನೆಯೇ ಚಿಕ್ಕಮಗಳೂರಿಗೆ ಆಗಮಿಸಿ ಕೊಪ್ಪ ತಾಲ್ಲೂಕಿನ ಗುಡ್ಡೆಗೌಡ ಗ್ರಾಮದ ಸಲವಾನೆ ಎಸ್ಟೇಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲಿಂದ ನೇರವಾಗಿ ಇಂದು ಬೆಳಿಗ್ಗೆ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಆಗಮಿಸಿದರು.

ಶೃಂಗೇರಿ ಮಠದ ಆವರಣದಲ್ಲಿರವ ಶಕ್ತಿ ಗಣಪತಿ ಪ್ರದೋಷ ದೇವಾಲಯದ ಪ್ರಾಂಗಣದಲ್ಲಿ ಈ ಹೋಮ ನಡೆದಿದೆ.

ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಇದಕ್ಕೂ ಮೊದಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶೃಂಗೇರಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು. ಶೃಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಇಂದಿರಾ ಕ್ಯಾಂಟೀನ್‌ನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿಗಳು ಕ್ಯಾಂಟೀನ್‌ನಲ್ಲೇ ಕೇಸರಿ ಬಾತ್ ಮತ್ತು ಉಪ್ಪಿಟ್ಟು ಸೇವಿಸಿ, ಕೇಸರಿ ಬಾತ್ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಟಿ.ಡಿ ರಾಜೇಗೌಡ, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಂ ಭೋಜೇಗೌಡ. ಧರ್ಮೇಗೌಡ ಭಾಗಿಯಾಗಿದ್ದರು.

ಶ್ರೀಗಳ ಆರೋಗ್ಯ ಆತಂಕ ಬೇಡ

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳಿವೆ. ಅವರ ಆರೋಗ್ಯದ ಬಗ್ಗೆ ಜನರಿಗೆ ಆತಂಕ ಬೇಡ. ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಂದು ಇದೇ ಮೊದಲ ಬಾರಿಗೆ ಕುಮಾರಸ್ವಾಮಿ, ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಆರೋಗ್ಯದ ಬಗ್ಗೆ ಮಠದ ಕಿರಿಯ ಸ್ವಾಮೀಜಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಹಲವು ತಜ್ಞ ವೈದ್ಯರ ತಂಡ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡಿದೆ. ಸ್ವಾಮೀಜಿ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿ ಮಾಹಿತಿ ಪಡೆದುಕೊಳ್ಳುವಂತೆಯೂ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

Leave a Comment