ಶತಮಾನದ ಶಾಲೆಗೆ ಬೇಕಿದೆ ಕಾಯಕಲ್ಪ ಮರದ ನೆರಳಲ್ಲ ಪಾಠ

ಹನೂರು, ಫೆ.೧೭- ಶತಮಾನದಷ್ಟು ಹಳೆಯದಾದ, ತನ್ನದೇ ಆದ ಇತಿಹಾಸ ಹೊಂದಿರುವ ಹನೂರು ತಾಲ್ಲೂಕಿನ ಹುತ್ತೂರು ಗ್ರಾಮದ ಶಾಲೆಗಿನ್ನೂ ಮೂಲಸೌಕಱ್ಯದ ಭಾಗ್ಯ ಸಿಕ್ಕಿಲ್ಲ.
ನೂರಾ ಎರಡು ವರ್ಷಗಳಿಂದಲೂ ಶಿಕ್ಷಣವನ್ನು ನೀಡಿರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಕೊಳ್ಳೇಗಾಲ ತಾಲ್ಲೋಕು ಹನೂರು ಶೈಕ್ಷಣಿಕ ವಲಯದ ಒಡೆಯರಪಾಳ್ಯ ಸಮೀಪದ ಹುತ್ತೂರು ಗ್ರಾಮ ಎಂಬುದು ವಿಶೇಷ.
ಈ ಗ್ರಾಮದಲ್ಲಿ ಅಂದಿನ ಬ್ರಿಟೀಷ್ ಸರ್ಕಾರದ ಆಡಳಿತದಲ್ಲಿ ಅಂದರೆ 1915 ರಲ್ಲಿ (ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ ನಡೆದ ಸಂದರ್ಭ) ಪ್ರಾರಂಭಿಸಿ ಶತಮಾನಗಳಿಗೂ ಹೆಚ್ಚು ಕಾಲ ಶಿಕ್ಷಣವನ್ನು ನೀಡಿರುವ ಗ್ರಾಮ ಇಂದು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಿ ಎಂದು ಅಂಗಲಾಚಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದು ವಿಪರ್ಯಾಸವೇ ಸರಿ.
ಶತಮಾನದಿಂದಲೂ ಶಿಕ್ಷಣವನ್ನು ನೀಡಿರುವ ಹಿರಿಮೆಗೆ ಪಾತ್ರವಾಗಿರುವ ಈ ಗ್ರಾಮದಲ್ಲಿ ಶೇ 98% ಪ.ಪಂಗಡದ ನಾಯಕ ಸಮುದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಶಾಲೆಯು ಉನ್ನತೀಕರಿಸಿದ ಶಾಲೆಯಾಗಿದೆ. 1 ರಿಂದ 8 ನೇತರಗತಿಯವರಿಗೆ ಪ್ರಸಕ್ತ ಸಾಲಿನಲ್ಲಿ 144 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 7 ಶಿಕ್ಷಕರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೂ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೇವಲ 5 ಕೊಠಡಿಗಳು ಇರುವುದರಿಂದ ಕೊಠಡಿ ಸಮಸ್ಯೆ ತೀವ್ರವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕಾಡುತ್ತಿದೆ.
ವಿದ್ಯಾರ್ಥಿಗಳ ಅನುಪಾತಕ್ಕೆ ತಕ್ಕಂತೆ ಕೊಠಡಿಗಳು ಇರಬೇಕಾದದ್ದು ನಿಯಮ ಈ ನಿಯಮವನ್ನು ಹೊಸದಾಗಿ ಶಾಲೆ ಪ್ರಾರಂಭಿಸುವವರು ಪಾಲಿಸದೇ ಇದ್ದರೆ ಶಾಲೆ ಪ್ರಾರಂಭಕ್ಕೆ ಅನುಮತಿ ನೀಡುವುದಿಲ್ಲ ಇಷ್ಟಲ್ಲದೇ ಶೌಚಲಾಯ ಕುಡಿಯುವ ನೀರು ಆಟದ ಮೈದಾನ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ನಿಯಮವಿದೆ. ಇಷ್ಟಲ್ಲದೇ ಹೆಣ್ಣು ಮಕ್ಕಳಿಗೆ ಅದರಲ್ಲೂ ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಿಸಬೇಕೆಂದು ಸುಪ್ರೀಂಕೊರ್ಟ್ ಕೂಡ ಆದೇಶ ನೀಡಿದೆ. ಆದರೆ ಈ ಮೇಲಿನ ಎಲ್ಲಾ ಮೂಲಭೂತ ಸಮಸ್ಯೆಗಳು ಇಲ್ಲದೇ ಮಕ್ಕಳು ದಿನದೂಡುತ್ತಿದ್ದಾರೆ. ನಲಿ ಕಲಿ ವಿದ್ಯಾರ್ಥಿಗಳಿಗೆ ಪ್ರತ್ಯಕ ಕೊಠಡಿ ಇರಬೇಕು ಆದರೆ ನಲಿಕಲಿ ಮಕ್ಕಳು ಹಾಗೂ 1 ರಿಂದ 3ನೇ ತರಗತಿ ಮಕ್ಕಳು ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳುವ ದುರ್ದೈವದ ಸಂಗತಿ ಎದುರಾಗಿದೆ.
ನಲಿ ಕಲಿ ಮಕ್ಕಳು ಸೇರಿದಂತೆ ತರಗತಿಗೊಂದರಂತೆ 8 ನೇ ತರಗತಿಯವರೆಗೆ 8 ಕೊಠಡಿಗಳು ಹಾಗೂ ಕಂಪ್ಯೂಟರ್ ಮುಖ್ಯ ಶಿಕ್ಷಕರ ಕೊಠಡಿ ಸೇರಿದಂತೆ ಒಟ್ಟು 10 ಕೊಠಡಿಗಳ ಅವಶ್ಯಕತೆ ಇರಬೇಕು ಆದರೆ ಈ ಶಾಲೆಯಲ್ಲಿ ಇರುವುದು ಕೇವಲ 5 ಕೊಠಡಿಗಳು.
ಈ ಕೊಠಡಿಗಳಲ್ಲಿ ಕೊಠಡಿ ಸಂಖ್ಯೆ 1 ರಲ್ಲಿ ಮುಖ್ಯ ಶಿಕ್ಷಕರ ಕಾರ್ಯಾಲಯ ಇದೆ. ಈ ಕೊಠಡಿಯಲ್ಲಿಯೇ 4 ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ, 2 ನೇ ಕೊಠಡಿಯಲ್ಲಿ ಕಂಪ್ಯೂಟರ್‍ಗಳಿದ್ದು ಆಗಾಗೆ ತರಗತಿಗನುಗುಣವಾಗಿ ಕಂಪ್ಯೂಟರ್ ಬೋಧನೆ, 3 ನೇ ಕೊಠಡಿಯಲ್ಲಿ 1 ರಿಂದ 3 ನೇ ತರಗತಿಯ ಒಟ್ಟು 47 ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ನಲಿ ಕಲಿ ಪಾಠ ಕೇಳುವ ಪ್ರಮೇಯ, 4 ನೇ ಕೊಠಡಿಯಲ್ಲಿ 8ನೇ ತರಗತಿ ಹಾಗೂ 5 ನೇ ಕೊಠಡಿಯಲ್ಲಿ 5ನೇ ತರಗತಿ ವಿದ್ಯಾಥಿಗಳು ವಿದ್ಯಾಭ್ಯಾಸ, ಇನ್ನುಳಿದ ತರಗತಿಗಳಾದ 6 ಮತ್ತು 7 ನೇ ತರಗತಿಗಳ ಮಕ್ಕಳು ಶಾಲೆಯ ಜಗುಲಿಯ ಮೇಲೆ ಹಾಗೂ ಶಾಲಾ ಆವರಣದ ಹುಣಸೆ ಮರದಲ್ಲಿ ಕುಳಿತು ಪಾಠ ಕೇಳುವ ದುಸ್ಥಿತಿಯಲ್ಲಿ ದಿನದೂಡುತ್ತಿದ್ದು ಇಡೀ ಶಿಕ್ಷಣ ವ್ಯವಸ್ಥೆಯನ್ನು ನಾಚಿಸುವಂತೆ ಇದೆ.
ಈ ಬಗ್ಗೆ ಎರಡು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಸಮಸ್ಯೆಯನ್ನು ವಿವರಿಸಿದ್ದಾರೆ. ಮನವಿ ಪತ್ರದಲ್ಲಿ ಒಂದು ಮುಖ್ಯ ಶಿಕ್ಷಕರ ಕೊಠಡಿ, ಮೂರು ತರಗತಿ ಕೊಠಡಿಗಳು, ಸೈಕಲ್ ಸ್ಟಾಂಡ್, ವೇದಿಕೆ ಕಟ್ಟಡ, ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, 200 ಮೀಟರ್ ಶಾಲಾ ಸುತ್ತುಗೋಡೆ, ಆಟದ ಮೈದಾನ ಸಮತಟ್ಟು ಮಾಡುವುದು ಈಗಿರುವ ಬೋರ್‍ವೆಲ್‍ನಲ್ಲಿ ನೀರು ಬಾರದ ಇರುವುದರಿಂದ ಹೊಸದಾಗಿ ಬೋರ್‍ವೆಲ್ ಕೊರೆಯಿಸಬೇಕೆಂದು ಮನವಿ ಮಾಡಿದ್ದಾರೆ.

Leave a Comment