ಶತನಾಮನೋತ್ಸವ ಕಾರ್ಯಕ್ರಮ

ಧಾರವಾಡ,ಆ.10- ಶ್ರೀಮನ್ನಿರಂಜನ ಜಗದ್ಗುರು ಮುರುಘರಾಜೇಂದ್ರ ಪ್ರಸಾದನಿಲಯ ಶತಮಾನೋತ್ಸವ ಕಾರ್ಯಕ್ರಮ ಹಾಗೂ ‘ಮೃತ್ಯುಂಜಯ ಲೀಲಾವಿಲಾಸ’ ಪ್ರವಚನ ಆ.೧೨ ರಿಂದ ಸೆಪ್ಟಂಬರ್ ೦೯ ರವರೆಗೆ  ಮುರುಘಾಮಠದ ಆವರಣದಲ್ಲಿ ಜರುಗಲಿವೆ ಎಂದು ಮುರಘಾಮಠದ ಪೀಠಾಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಘಾಮಠ ೨೫೦ ವರ್ಷಗಳ ಉಜ್ವಲ ಪರಂಪರೆಯನ್ನು ಹೊಂದಿದ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಈ ಮಠಕ್ಕೆ ಕಾಯಕಲ್ಪ ನೀಡಿ ಅದನ್ನು ಉತ್ತರೋತ್ತರವಾಗಿ ಬೆಳೆಸಿ, ಅದರ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದವರು  ಮೃತ್ಯುಂಜಯಪ್ಪಗಳು. ಅದನ್ನು ಇನ್ನಷ್ಟು ಏರೆತ್ತರಕ್ಕೆ ಕೊಂಡೊಯ್ದುವರು  ಮಹಾಂತಪ್ಪಗಳು. ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀಮಠ ಸಾಗುತ್ತಿದೆ.  ಮನ್ನಿರಂಜನ ಮುರುಘರಾಜೇಂದ್ರ ಪ್ರಸಾದನಿಲಯವು ಶ್ರೀ ಮೃತ್ಯುಂಜಯ ಅಪ್ಪಗಳ ಅಂತಃಕರಣ-ಅನುಕಂಪದ ಪ್ರಸಾದ ನಿಲಯ ಸ್ಥಾಪನೆಯಾಗಿ ಶತಮಾನದ ಅಂಚಿನಲ್ಲಿದೆ. ಶ್ರೀಮಠವು ಪ್ರಸಾದನಿಲಯದ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಿದೆ ಎಂದರು.
ಈ ನಿಮಿತ್ತ ನೂರೊಂದು ಧಾರ್ಮಿಕ ಗ್ರಂಥಗಳ ಲೋಕಾರ್ಪಣೆ, ಸಮಾಜಕ್ಕೆ ಸ್ಮರಣೀಯ ಸೇವೆ ಸಲ್ಲಿಸಿದ ಗಣ್ಯರ ಸನ್ಮಾನ, ಶತಮಾನೋತ್ಸವ ಸ್ಮಾರಕ ಭವನದ ಉದ್ಘಾಟನೆ ಮತ್ತು ಸ್ಮರಣ ಸಂಪುಟ ಲೋಕಾರ್ಪಣೆ ಮುಂತಾದ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಾಡಿನ ಅನೇಕ ಹಿರಿಯ ಪೂಜ್ಯರು, ಗಣ್ಯ-ಮಾನ್ಯರು, ಸಾಹಿತಿ-ಕಲಾವಿದರು ಈ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದರು.
ಆ.೧೨ ರ ಸಂಜೆ ೬:೦೦ ಗಂಟೆಗೆ ಪ್ರಸಾದನಿಲಯದ ಶತಮಾನೋತ್ಸವ ಹಾಗೂ  ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮಗಳ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ನೆರವೇರಿಸಲಿದ್ದಾರೆ. ಡಾ.  ಶಿವಮೂರ್ತಿ ಮುರುಘಾ ಶರಣರ ಮತ್ತು ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯವಹಿಸುವರು. ಡಾ. ಸಿದ್ಧರಾಮ ಮಹಾಸ್ವಾಮಿಗಳು,  ಮಹಾಂತ ದೇವರು ಸಮ್ಮುಖವಹಿಸುವರು. ಮಾಜಿ ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆವಹಿಸುವರು.ಡಾ. ಪಿ. ಈಶ್ವರ ಭಟ್ ಗ್ರಂಥ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.
ಸೆ. ೦೭ ಸಂಜೆ ೬-೦೦ ಗಂಟೆಗೆ ಪ್ರವಚನ ಮುಕ್ತಾಯ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉದ್ಘಾಟಿಸುವರು. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸಾನಿಧ್ಯವಹಿಸಲಿದ್ದು, ಗಣ್ಯರು ಅತಿಥಿಯಾಗಿ ಆಗಮಿಸುವರು. ಆ. ೮ ಸೆ. ೦೮ ಮುಂಜಾನೆ ೧೦:೦೦ ಗಂಟೆಗೆ ಧರ್ಮಸಭೆಯು ಸಿದ್ದೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿದೆ ಎಂದರು.
ಅಂದು ಸಂಜೆ ೬:೦೦ ಗಂಟೆಗೆ ನಡೆಯುವ ಧರ್ಮಸಭೆಯನ್ನು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಉದ್ಘಾಟಿಸುವರು. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದು,ಹೆಚ್. ಡಿ. ದೇವೇಗೌಡ ಮಾಜಿ ಪ್ರಧಾನ ಮಂತ್ರಿಗಳು, ಜಿ. ಪರಮೇಶ್ವರ ಉಪಮುಖ್ಯಮಂತ್ರಿಗಳು, ಬಸವರಾಜ ಹೊರಟ್ಟಿ ಹಂಗಾಮಿ ಸಭಾಪತಿಗಳು, ಎಂ. ಬಿ. ಪಾಟೀಲ ಮಾಜಿ ಜಲಸಂಪನ್ಮೂಲ ಸಚಿವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.
ಸೆ. ೦೯ ಮುಂಜಾನೆ ೧೦:೦೦ ಗಂಟೆಗೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂರು ಗೃಂಥಗಳ ಲೋಕಾರ್ಪಣೆ ಮಾಡುವರು. ಪ್ರತಿಪಕ್ಷದ ನಾಯಕ ಬಿ. ಎಸ್. ಯಡಿಯೂರಪ್ಪನ ಅವರು ದಾಸೋಹ ಭವನ ಉದ್ಘಾಟನೆ ಮಾಡಲಿದ್ದು ಕೇಂದ್ರ ಸಚಿವ ಅನಂತಕುಮಾರ ಸ್ಮರಣ ಸಂಪುಟ ಬಿಡುಗಡೆ ಮಾಡುವರು. ಡಾ. ಶಿವಮೂರ್ತಿ ಮುರುಘಾ ಶರಣರು,   ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಾನಿಧ್ಯವಹಿಸಲಿದ್ದು, ಜಗದ್ಗುರು ಮುರುಘರಾಜೇಂದ್ರ ಪ್ರಸಾದ ನಿಲಯ ಅಧ್ಯಕ್ಷ ವಿನಯ ಕುಲಕರ್ಣಿ ಅಧ್ಯಕ್ಷತೆವಹಿಸುವರು ಎಂದು ತಿಳಿಸಿದರು.

Leave a Comment