ಶತಕ ಕಳೆದುಕೊಂಡ ಬಗ್ಗೆ ತಲೆ ಕೆಡಸಿಕೊಂಡಿಲ್ಲ: ರಹಾನೆ

ನಾರ್ಥ್ ಸೌಂಡ್‌,  ಆ 23 – ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನ ಮೊದಲನೇ ದಿನ ಶತಕ ವಂಚಿತನಾಗಿರುವ ಬಗ್ಗೆ ತಲೆ ಕೆಡಸಿಕೊಂಡಿಲ್ಲ ಎಂದು ಭಾರತ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ತಿಳಿಸಿದ್ದಾರೆ.

ಇಲ್ಲಿನ ಸರ್‌ ವಿವಿಯನ್ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಮೊದಲನೇ ದಿನ ಕೇಮರ್‌ ರೋಚ್‌ ಹಾಗೂ ಶನ್ನೋನ್‌ ಗ್ಯಾಬ್ರಿಯಲ್‌ ಅವರ ಮಾರಕ ದಾಳಿಗೆ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ನೆಲಕ್ಕುರುಳಿದ್ದರು. ಆದರೆ, ಅಜಿಂಕ್ಯಾ ರಹಾನೆ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು 81 ರನ್‌ ಗಳಿಸಿ ಔಟ್‌ ಆಗಿದ್ದರು. ಇವರಿಗೆ ರಾಹುಲ್‌ (44) ಹಾಗೂ ಹನುಮ ವಿಹಾರಿ (32) ಸಾಥ್‌ ನೀಡಿದ್ದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಿಂಕ್ಯಾ ರಹಾನೆ, ” ದೀರ್ಘ ಸಮಯ ಕ್ರೀಸ್‌ನಲ್ಲಿ ಉಳಿದರೆ, ತಂಡದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತೇನೆ. ಶತಕ ವಂಚಿತನಾದೆನ್ನಲ್ಲಾ ಎಂಬ ಬೇಸರ ವ್ಯಕ್ತಪಡಿಸುವ ಮನಸ್ಥಿತಿ ನನ್ನದಲ್ಲ. ತಂಡದ ಗೆಲುವಿಗಾಗಿ ಹೋರಾಟ ನಡೆಸುವ ಮನೋಭಾವ ನನ್ನದು ಎಂದರು.

ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್‌ ಸರಣಿ ಆಡಿ ಬರೋಬ್ಬರಿ ಸುಮಾರು ಏಳು ತಿಂಗಳಾಗಿದೆ. ಹಾಗಾಗಿ, ದೀರ್ಘ ಅವಧಿಯ ನಂತರ ನಾವು ಟೆಸ್ಟ್ ಆಡುವಾಗ ಕ್ರೀಸ್‌ನಲ್ಲಿ ಹೊಂದಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಹಾಗಾಗಿ, ಸಾಧ್ಯವಾದಷ್ಟು ಹೆಚ್ಚು ಎಸೆತಗಳನ್ನು ಆಡುವ ಮೂಲಕ ತಂಡಕ್ಕೆ ನೆರವಾಗಬೇಕೆಂಬ ಯೋಜನೆ ಹಾಕಿಕೊಂಡು ಬ್ಯಾಟಿಂಗ್‌ ಮಾಡಿದೆ ಎಂದು ರಹಾನೆ ತಿಳಿಸಿದ್ದಾರೆ.

” ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್‌ ಮಾಡುವುದು ಕಠಿಣವಾಗಿತ್ತು. ಚೆಂಡು ಹೆಚ್ಚು ಪುಟಿದೇಳುತ್ತಿತ್ತು ಹಾಗೂ ಚೆಂಡಿನ ಚಲನೆ ನಿರ್ಧರಿಸುವುದು ಬ್ಯಾಟ್ಸ್‌ಮನ್‌ಗೆ ಕಷ್ಟವಾಗಿತ್ತು. ಆದರೆ, ವೆಸ್ಟ್ ಇಂಡೀಸ್‌ ಬೌಲಿಂಗ್‌ ವಿಭಾಗ ಅತ್ಯುತ್ತಮ ಪ್ರದರ್ಶನ ತೋರಿತ್ತು. 25 ರನ್‌ ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ವೇಳೆ ಕೆ.ಎಲ್‌ ರಾಹುಲ್‌ ಅವರೊಂದಿಗೆ ಆಡಿದ ಜತೆಯಾಟ ನಿರ್ಣಾಯಕವಾಗಿತ್ತು ಎಂದು ಅಜಿಂಕ್ಯಾ ರಹಾನೆ ಹೇಳಿದ್ದಾರೆ.

Leave a Comment