ಶಕ್ತಿನಗರ ಮನೆ ಕಳುವು : 6 ಜನ ಬಂಧನ

5.65 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಜಪ್ತಿ
ರಾಯಚೂರು.ಜು.17- ಶಕ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುವ ಆರು ಜನ ಆರೋಪಿಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಮಲ್ಲು ಅಲಿಯಾಸ್ ಮಲ್ಯಾ ತಂದೆ ಗಣಪತಿ, ರವಿ ತಂದೆ ಪ್ರಭು, ಯಲ್ಲಾಲಿಂಗ ತಂದೆ ಹನುಮಂತ, ಹನುಮಂತ ತಂದೆ ಯಂಕಪ್ಪ, ಶ್ಯಾಮಸಿಂಗ್ ತಂದೆ ಖೇಮಸಿಂಗ್ ಹಾಗೂ ಗಿಡ್ಯಾ ಅಲಿಯಾಸ್ ಸರ್ಫುದ್ದೀನ್ ತಂದೆ ಸುಲ್ತಾನ್ ಸಾಬ್ ಇವರನ್ನು ಬಂಧಿಸಲಾಗಿದೆ. ಶಕ್ತಿನಗರದಲ್ಲಿ ಬೀಗ ಹಾಕಿದ ಮನೆಗಳಿಗೆ ದಾಳಿ ಮಾಡಿ, ಕಳುವು ಮಾಡಲಾಗುತ್ತಿತ್ತು. ಆರು ಜನ ಕಳ್ಳರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಶಕ್ತಿನಗರದಲ್ಲಿ ಐದು ಕಳ್ಳತನ ಪ್ರಕರಣ ಪತ್ತೆಯಾಗಿವೆ.
ಬಂಧಿತರಾದ ಆರೋಪಿಗಳಿಂದ 196 ಗ್ರಾಂ ಬಂಗಾರ, 500 ಗ್ರಾಂ. ಬೆಳ್ಳಿ ಸೇರಿ ಒಟ್ಟು 5.65 ಲಕ್ಷ ಬೆಲೆ ಬಾಳುವ ಆಭರಣ ಜಪ್ತಿ ಮಾಡಲಾಗಿದೆ. ಕಳುವು ಮಾಡಲು ಉಪಯೋಗಿಸಿದ ಕ್ರೂಸರ್, ಜೀಪ್ ಮತ್ತು ಇನ್ನಿತರ ವಸ್ತು ಸಹ ಜಪ್ತಿ ಮಾಡಲಾಗಿದೆ. ಶಕ್ತಿನಗರದಲ್ಲಿ ಬೀಗ ಮುರಿದು ಕಳುವು ಮಾಡುತ್ತಿದ್ದ ಪ್ರಕರಣ ಪತ್ತೆಗೆ ಸಂಬಂಧಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಡಿವೈಎಸ್ಪಿ ಹೆಚ್.ಎಸ್. ಶೀಲವಂತ ಇವರ ಸುಪರ್ಧಿಯಲ್ಲಿ ಗ್ರಾಮೀಣ ಸಿಪಿಐ ಅಂಬಾರಾಯ ಎಂ.ಕಮಾನಮನಿ, ಪಿಎಸ್ಐ ಸಾಬಯ್ಯ ಅವರ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆ ಕೈಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿ, ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.

Leave a Comment