ಶಂಕಿತ ಉಗ್ರರು ೧೦ ದಿನ ಸಿಸಿಬಿ ವಶಕ್ಕೆ

ಬೆಂಗಳೂರು, ಜ.೧೮- ಮೆಹಬೂಬ್ ಪಾಷಾ ಸೇರಿದಂತೆ ನಾಲ್ವರು ಶಂಕಿತ ಉಗ್ರರನ್ನು ೧೦ ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಲಾಗಿದೆ. ದಾಳಿಗೆ ಸಂಚು ರೂಪಿಸುತ್ತಿದ್ದ ಶಂಕಿತ ಉಗ್ರರನ್ನು ಬೆಂಗಳೂರಿನಲ್ಲಿ ಗುರುವಾರ ಬಂಧಿಸಲಾಗಿತ್ತು. ಸಿಸಿಬಿ ಪೊಲೀಸರು ನಿನ್ನೆ ಬೆಂಗಳೂರಿನ ೫೨ನೇ ಸಿಸಿಎಚ್ ವಿಶೇಷ ನ್ಯಾಯಾಲಯ ಮುಂದೆ ಶಂಕಿತ ಉಗ್ರರನ್ನು ಹಾಜರುಪಡಿಸಿದ್ದರು. ನ್ಯಾಯಾಲಯ ೧೦ ದಿನಗಳ ಕಾಲ ಎಲ್ಲರನ್ನೂ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿತು. ಮೆಹಬೂಬ್ ಪಾಷಾ, ಮೊಹಮದ್ ಮನ್ಸೂರ್, ಜವಿವುಲ್ಲಾ ಹಾಗೂ ಸಯ್ಯದ್ ಅಜ್ಮತ್ತುಲ್ಲಾರನ್ನು ಸಿಸಿಬಿ ವಶಕ್ಕೆ ನೀಡಲಾಗಿದೆ. ಗುರಪ್ಪನಪಾಳ್ಯ ಸಮೀಪ ನಾಲ್ವರನ್ನು ಗುರುವಾರ ಪೊಲೀಸರು ಬಂಧಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.

ಸಿಸಿಬಿ ಎಸಿಪಿಗಳಾದ ವೇಣುಗೋಪಾಲ್ ಮತ್ತು ನಾಗರಾಜ್ ನೇತೃತ್ವದಲ್ಲಿ ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಆರೋಪಿಗಳು ಕೋಮುಗಲಭೆ ಸೃಷ್ಟಿಸಲು ಹಾಗೂ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂಬ ಅರೋಪವಿದೆ. ಆರೋಪಿಗಳು ಕೆಲವು ಅಂತರ್ ರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಶಂಕಿತರ ವಿಚಾರಣೆಯಿಂದ ಹೆಚ್ಚಿನ ಮಾಹಿತಿ ಸಿಗುವ ವಿಶ್ವಾಸವಿದೆ.

Leave a Comment