ಶಂಕರ್, ನಾಗೇಶ್ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಜೂ. ೧೪- ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸಚಿವ ಸಂಪುಟಪನ್ನು ವಿಸ್ತರಿಸಿದ್ದು ಪಕ್ಷೇತರ ಶಾಸಕರುಗಳಾದ ಆರ್. ಶಂಕರ್ ಮತ್ತು ಹೆಚ್. ನಾಗೇಶ್ ನೂತನ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿವಾಲಾ ಅವರು ನೂತನ ಸಚಿವರುಗಳಿಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
ಇಂದು ಸಂಪುಟಕ್ಕೆ ಸೇರ್ಪಡೆಯಾದ ಆರ್. ಶಂಕರ್ ಮತ್ತು ಹೆಚ್. ನಾಗೇಶ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯ ಸಚಿವ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಇದ್ದು, ಆ ಪೈಕಿ ಎರಡು ಸ್ಥಾನಗಳನ್ನು ಇಂದು ಭರ್ತಿ ಮಾಡಲಾಗಿದ್ದು, ಮತ್ತೊಂದು ಸ್ಥಾನ ಹಾಗೆಯೇ ಉಳಿದಿದೆ.
ಮೂರನೇ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಶಾಸಕರೊಬ್ಬರನ್ನು ನೇಮಕ ಮಾಡಿ ಸಚಿವರನ್ನಾಗಿಸಲಾಗುತ್ತಿದೆ ಎಂಬ ನಿರೀಕ್ಷೆಗಳು ಹುಸಿಯಾಗಿದ್ದು, ಇಂದು ಪಕ್ಷೇತರ ಶಾಸಕರಿಬ್ಬರು ಮಾತ್ರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜೆಡಿಎಸ್ ಪಾಲಿನ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಪಕ್ಷೇತರರಿಗೆ ಬಿಟ್ಟುಕೊಟ್ಟು ಮತ್ತೊಂದು ಸ್ಥಾನವನ್ನು ವಿಧಾನಪರಿಷತ್ ಸದಸ್ಯ ಫಾರೂಕ್ ಅವರಿಗೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತಾದರೂ ಪಕ್ಷೇತರರನ್ನು ಬಿಟ್ಟು ಯಾರನ್ನು ಸದ್ಯಕ್ಕೆ ಸಚಿವರನ್ನಾಗಿಸುವುದು ಬೇಡ. ಮುಂದೆ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಪಕ್ಷದ ಶಾಸಕರನ್ನು ಪರಿಗಣಿಸೋಣ ಎಂಬ ದೋಸ್ತಿ ನಾಯಕರ ತೀರ್ಮಾನದಿಂದ ಇಂದು ಪಕ್ಷೇತರ ಶಾಸಕರುಗಳು ಮಾತ್ರ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕಸಿದರು.
ಸಚಿವ ಸಂಪುಟ ವಿಸ್ತರಣೆಗೆ ಮಧ್ಯಾಹ್ನ 1 ಗಂಟೆಗೆ ಮುಹೂರ್ತ ನಿಗದಿ ಮಾಡಿತ್ತಾದರೂ ಪ್ರಮಾಣ ವಚನ ಸಮಾರಂಭ 10 ನಿಮಿಷ ತಡವಾಗಿ 1.10 ಕ್ಕೆ ಆರಂಭವಾಗಿ ಐದು ನಿಮಿಷದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಪೂರ್ಣಗೊಂಡಿತು.
ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ, ಸಚಿವರುಗಳಾದ ಎಂ.ಬಿ. ಪಾಟೀಲ್, ಡಿ.ಕೆ. ಶಿವಕುಮಾರ್, ಕೃಷ್ಣಬೈರೇಗೌಡ, ರಹೀಂಖಾನ್, ಬಂಡೆಪ್ಪ ಕಾಶಂಪೂರ್ ಸೇರಿದಂತೆ ಹಲವು ಸಚಿವರು ಶಾಸಕರು, ಸಂಸದರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಸೇರಿದಂತೆ ಎರಡೂ ಪಕ್ಷಗಳ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ಮೂರನೇ ಬಾರಿಗೆ ವಿಸ್ತರಣೆ
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ವಿಧಾನಸೌದದ ಮುಂದೆ ಒಂದು ವರ್ಷದ ಹಿಂದೆ ಮೇ 23 ರಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಮೂರನೇ ಬಾರಿಗೆ ಸಂಪುಟ ವಿಸ್ತರಿಸಿದ್ದಾರೆ.
ಮೊದಲ ಬಾರಿಗೆ ಸಂಪುಟ ವಿಸ್ತರಿಸಿ ಕಾಂಗ್ರೆಸ್‌ನಿಂದ 15 ಮತ್ತು ಜೆಡಿಎಸ್‌ನಿಂದ 10 ಶಾಸಕರನ್ನು ಸಚಿವರನ್ನಾಗಿಸಲಾಗಿತ್ತು. ಡಿಸೆಂಬರ್‌ನಲ್ಲಿ ಸಂಪುಟ ಪುನಾರಚಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮೊದಲ ಕಂತಿನಲ್ಲಿ ಸಚಿವರಾಗಿದ್ದ ಪಕ್ಷೇತರ ಶಾಸಕ ಆರ್. ಶಂಕರ್ ಮತ್ತು ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿ ಅವರನ್ನು ಕೈಬಿಟ್ಟು ಆರು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಸಂಪುಟ ವಿಸ್ತರಿಸಿದ್ದರು. ಈಗ ಪಕ್ಷೇತರ ಶಾಸಕರಿಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಮತ್ತೆ ಮೂರನೇ ಬಾರಿಗೆ ಸಂಪುಟ ವಿಸ್ತರಿಸಿದ್ದಾರೆ.
ಆರು ತಿಂಗಳ ಹಿಂದೆ ಸಚಿವ ಸ್ಥಾನ ಕಳೆದುಕೊಂಡಿದ್ದ ಆರ್. ಶಂಕರ್ ಅವರಿಗೆ ಈಗ ಮತ್ತೆ ಸಚಿವ ಪಟ್ಟ ಸಿಕ್ಕಿದೆ.
 ಅತೃಪ್ತಿ, ಅಸಮಾಧಾನ ಉಲ್ಬಣ
ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಷೇತರ ಶಾಸಕರಿಬ್ಬರಿಗೆ ಮಾತ್ರ ಮಣೆ ಹಾಕಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಶಾಸಕರಲ್ಲಿ ಅಸಮಾಧಾನ, ಅತೃಪ್ತಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಅತೃಪ್ತಿ, ಅಸಮಾಧಾನ ಭುಗಿಲೇಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Leave a Comment