ಶಂಕರಗೌಡ ಸ್ಮರಣಾರ್ಥ ಆರ್ಟ್ ಗ್ಯಾಲರಿ – ಭರವಸೆ

ರಾಯಚೂರು.ಫೆ.16- ಖ್ಯಾತ ಚಿತ್ರಕಲಾ ಕಲಾವಿದರಾಗಿದ್ದ ದಿ.ಶಂಕರಗೌಡ ಬೆಟ್ಟದೂರು ಅವರ ಸ್ಮರಣಾರ್ಥ ನಗರದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸುವ ಭರವಸೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕ ಅವರು ನೀಡಿದರು.
ಅವರಿಂದು ನಗರದ ಸಾರ್ವಜನಿಕ ಉದ್ಯಾನವನದ ಮುಂಭಾಗದಲ್ಲಿ ಕಲಾ ಸಂಕುಲ ಸಂಸ್ಥೆ ಆಯೋಜಿಸಿದ ರಾಯಚೂರು ಚಿತ್ರಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿತ್ರಕಲಾಕೃತಿಗಳು ನಮ್ಮ ಸೃಜನ ಶೀಲತೆಯ ಪ್ರತೀಕವಾಗಿವೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರು ತಮ್ಮ ಕೃತಿ ಪ್ರದರ್ಶನ ಅಲ್ಲಿಯ ಸಂಸ್ಕೃತಿ ಬಿಂಬಿಸುತ್ತದೆ. ಚಿತ್ರಕಲಾವಿದರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ನಗರದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸಲು ಎಲ್ಲಾ ರೀತಿಯಲ್ಲಿ ಸಹಕರಿಸಲಾಗುತ್ತದೆ. ಈ ಭಾಗದ ಅತ್ಯಂತ ಖ್ಯಾತ ಚಿತ್ರಕಲಾವಿದರಾಗಿದ್ದ ದಿ.ಶಂಕರಗೌಡ ಬೆಟ್ಟದೂರು ಅವರ ಹೆಸರಲ್ಲಿ ಈ ಗ್ಯಾಲರಿ ನಿರ್ಮಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು, ಚಿತ್ರಮಳಿಗೆ ಉದ್ಘಾಟಿಸಿ ಮಾತನಾಡಿದರು. ಇಂತಹ ಪ್ರದರ್ಶನಗಳು ಚಿತ್ರಕಲಾವಿದರಿಗೆ ವೇದಿಕೆ ನಿರ್ಮಿಸಿಕೊಟ್ಟಂತಿದೆ. ಅತ್ಯಂತ ಖ್ಯಾತ ಕಲಾವಿದರು ತಮ್ಮ ಕುಂಚದಿಂದ ಬಿಡಿಸಿದ ಈ ಚಿತ್ರಗಳು ಅತ್ಯಂತ ಆಕರ್ಷಿಕವಾಗಿವೆ. ಇವು ಜನರ ಮನಸ್ಸು ಗೆದ್ದಿವೆಂದರು. ಕಲಾ ಸಂಕುಲ ಸಂಸ್ಥೆ ಅಧ್ಯಕ್ಷರಾಗಿದ್ದ ರೇಖಾ ಬಡಿಗೇರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ದಸ್ತಗಿರಿ ಸಾಬ್ ದಿನ್ನಿ, ರವೀಂದ್ರ ಜಲ್ದಾರ, ಹನೀಶ್ ಫಾತೀಮಾ, ಚಾಂದ್ ಪಾಷಾ, ಈಶ್ವರ, ಈರಣ್ಣ ಬೆಂಗಾಲಿ, ಲಕ್ಷ್ಮೀಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment