ವ್ಯಾಸರಾಜರ ವೃಂದಾವನ ಧ್ವಂಸ ದುಷ್ಕೃತ್ಯ – ಖಂಡನೆ

* ದುಷ್ಕರ್ಮಿಗಳ ಬಂಧನ, ಶಿಕ್ಷೆಗೆ ಆಗ್ರಹ
ರಾಯಚೂರು.ಜು.18- ಹಿಂದೂ ಸಾಂಪ್ರದಾಯ ಮತ್ತು ಮಾಧ್ವ ಪರಂಪರೆಯ ಪವಿತ್ರ ಸ್ಥಳವಾದ ಗಂಗಾವತಿಯ ನವ ವೃಂದಾವನದಲ್ಲಿರುವ ವ್ಯಾಸರಾಜರ ವೃಂದಾವನ ಧ್ವಂಸ ದುಷ್ಕೃತ್ಯ ಎಲ್ಲಾ ಮಠ ಮಾನ್ಯರು, ಹಿಂದೂ ಜನ ಸಮುದಾಯದ ಒಕ್ಕೊರಳಿನಿಂದ ಖಂಡಿಸಬೇಕೆಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.
ಅವರಿಂದು ನಗರದ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಮುನಿತ್ರೇಯರಲ್ಲಿ ಒಬ್ಬರಾದ ವ್ಯಾಸರಾಜರು ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾವತಾರ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಮಠ ಮತ್ತು ವ್ಯಾಸರಾಜರ ಮಧ್ಯೆ ಧಾರ್ಮಿಕ ಸಂಬಂಧವಿದೆ. ಅವರ ವೃಂದಾವನ ಧ್ವಂಸ ಮಾಡಿರುವುದು ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಮಾಡಿದ ಅಪಚಾರವಾಗಿದೆ.
ಈಗಾಗಲೇ ತಾವು ಈ ವಿಷಯಕ್ಕೆ ಸಂಬಂಧಿಸಿ ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಚರ್ಚಿಸಿದ್ದೇನೆ. ತಕ್ಷಣವೇ ಅವರು ಭದ್ರತೆ ಕಲ್ಪಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಯಾರು ಈ ದುಷ್ಕೃತ್ಯ ಮಾಡಿದ್ದಾರೆ ಎನ್ನುವುದು ತನಿಖೆಗೊಳಪಡಿಸುವುದು ಹಾಗೂ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಹಿಂದೂ ಧಾರ್ಮಿಕ ಪವಿತ್ರ ಸ್ಥಳಗಳಲ್ಲಿ ಇಂತಹ ಅಪಚಾರ ನಡೆಯದಂತೆ ಭದ್ರತೆ ಒದಗಿಸುವ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಬೇಕು.
ನವ ವೃಂದಾವನ ಪ್ರದೇಶಕ್ಕೆ ಸಂಬಂಧಿಸಿ ಉತ್ತರಾಧಿ ಮಠ ಮತ್ತು ರಾಯರ ಮಠದ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಯರ ಮಠ ಅಲ್ಲಿ ಭದ್ರತೆ ವ್ಯವಸ್ಥೆ ಕೈಗೊಳ್ಳುವ ಸಿದ್ಧವಿದ್ದರೂ, ಕಾನೂನಿನ ತೊಡಕಿನಿಂದ ಈ ವ್ಯವಸ್ಥೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನವ ವೃಂದಾವನ ಪ್ರದೇಶದಲ್ಲಿ ಸುರಕ್ಷತೆಗಾಗಿ ಉತ್ತರಾಧಿ ಮಠ, ವ್ಯಾಸರಾಜ ಮಠ ಹಾಗೂ ಇನ್ನಿತರ ಮಠಗಳೊಂದಿಗೆ ಮಾತುಕತೆ ನಡೆಸಲು ತಾವು ಸಿದ್ಧರಿರುವುದಾಗಿ ಹೇಳಿದರು.
ಉತ್ತರಾಧಿ ಮಠ ಮತ್ತು ರಾಯರ ಮಠದ ಭಿನ್ನಾಭಿಪ್ರಾಯ ಈ ಕೃತ್ಯಕ್ಕೆ ಕಾರಣವೆಂದು ಪ್ರತಿಕ್ರಿಯಿಸಿದ ಅವರು, ವ್ಯಾಸರಾಜ ವೃಂದಾವನ ಬಗ್ಗೆ ಏನೆ ಭಿನ್ನಾಭಿಪ್ರಾಯಗಳಿದ್ದರೂ ಸಾಧ್ಯವಿಲ್ಲ. ಯಾರೋ ಕಿಡಿಗೇಡಿಗಳು ಈ ಕೃತ್ಯ ವೆಸಗಿದ್ದಾರೆಂದು ಹೇಳಿದರು. ಹಿಂದೂ ಸಮಾಜಕ್ಕೆ ಇಂದು ಕರಾಳ ದಿನವಾಗಿದೆ. ನಮ್ಮ ಶ್ರದ್ಧಾ ಕೇಂದ್ರವನ್ನು ಈ ರೀತಿ ಧ್ವಂಸ ಮಾಡಿರುವುದು ನಮ್ಮಲ್ಲಿ ರಕ್ತ ಕುದಿಯುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತವಾಗಿ ಈ ಕೃತ್ಯ ವೆಸಗಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಮತ್ತು ಕಠಿಣವಾಗಿ ಶಿಕ್ಷಿಸಬೇಕೆಂದು ಆಗ್ರಹಿಸಿದರು. ಈ ಕೃತ್ಯದ ವಿರುದ್ಧ ಜಾತಿ, ಧರ್ಮ, ಮಠ, ಮಾನ್ಯ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿ ಇದನ್ನು ವಿರೋಧಿಸುವ ಮೂಲಕ ಹಿಂದೂ ಪರಂಪರೆಯ ಸಂರಕ್ಷಣೆಗೆ ಮುಂದಾಗಬೇಕೆಂದು ಹೇಳಿದರು.

Leave a Comment