ವ್ಯಾಸರಾಜರ ಬೃಂದಾವನ ಧ್ವಂಸ : ಉಭಯ ಮಠ ಆಕ್ರೋಶ

ರಾಯಚೂರು.ಜು.18- ಗಂಗಾವತಿ ತಾಲೂಕಿನ ಆನೆಗುಂದ ಸಮೀಪದಲ್ಲಿರುವ ವ್ಯಾಸರಾಜರ ಬೃಂದಾವನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಉತ್ತರಾಧಿ ಮಠ ಮತ್ತು ರಾಯರ ಮಠಗಳಿಂದ ತೀವ್ರವಾದ ಅಸಮಾಧಾನ ವ್ಯಕ್ತಗೊಂಡು ಈ ಪ್ರಕರಣವನ್ನು ಬಲವಾಗಿ ಖಂಡಿಸಲಾಗುತ್ತಿದೆ.
ಗುರು ರಾಯರ ನಾಲ್ಕು ಅವತಾರಗಳಲ್ಲಿ ವ್ಯಾಸರಾಜರು ಒಬ್ಬರೆನ್ನುವುದು ನಂಬಿಕೆ. ಮಾಧ್ವ ಪರಂಪರೆಯ ಶ್ರೀಗಳಾದ ವ್ಯಾಸರಾಜರ ಬೃಂದಾವನ ರಾಯರ ಮಠ ಮತ್ತು ಉತ್ತರಾಧಿ ಮಠಗಳಿಗೆ ಅತ್ಯಂತ ಪವಿತ್ರ ಸ್ಥಳಗಳಾಗಿವೆ. ನಿನ್ನೆ ಮಧ್ಯ ರಾತ್ರಿ ಯಾರೋ ದುಷ್ಕರ್ಮಿಗಳು ಬೃಂದಾವನ ಸಂಪೂರ್ಣ ಧ್ವಂಸಗೊಳಿಸಿ, 3 ಅಡಿ ಹಾಳಕ್ಕೆ ನೆಲ ತೋಡಲಾಗಿದೆ. ಯಾರು ಈ ಕೃತ್ಯ ವೆಸಗಿದ್ದಾರೆಂದು ಇನ್ನೂ ಸ್ಪಷ್ಟವಾಗಿಲ್ಲ.
ಆದರೆ, ಗಂಗಾವತಿ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ದೂರು ನೀಡಲಾಗಿದೆ. ನಿಧಿ ಆಸೆಗೆ ಯಾರೋ ದುಷ್ಕರ್ಮಿಗಳು ಈ ಕೃತ್ಯವೆಸಗಿರಬಹುದೆಂದು ಶಂಕಿಸಲಾಗುತ್ತಿದೆ. ಮಾಧ್ವ ಪರಂಪರೆಯ ಭಕ್ತರಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನವ ಬೃಂದಾವನಕ್ಕೆ ಸಂಬಂಧಿಸಿ ರಾಯರ ಮಠ ಮತ್ತು ಉತ್ತಾರಧಿ ಮಠದ ಮಧ್ಯೆ ತೀವ್ರ ವಿವಾದವಿತ್ತು.
ಅನೇಕ ಸಲ ಈ ಬೃಂದಾವನಕ್ಕಾಗಿ ಉಭಯರ ಮಧ್ಯೆ ಬಹಿರಂಗ ಘರ್ಷನೆ ಘಟನೆ ನಡೆದಿವೆ. ಆದರೆ, ನಿನ್ನೆ ರಾತ್ರಿ ಬೃಂದಾವನ ಧ್ವಂಸ ಘಟನೆ ಎರಡು ಮಠ ಭಕ್ತರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬೃಂದಾವನ ಧ್ವಂಸ ಮಾಡಿದವರು ಯಾರಿದ್ದರೂ, ತಕ್ಷಣವೇ ಅವರನ್ನು ಬಂಧಿಸಬೇಕೆಂದು ಎಲ್ಲರ ಒಕ್ಕೊರಳಿನ ಆಗ್ರಹವಾಗಿದೆ.

Leave a Comment