ವೈಯಕ್ತಿಕ ನಿಂದನೆಯಲ್ಲಿ ತೊಡಗಿದರೆ ಗಂಭೀರ ಕ್ರಮ

ಬೆಂಗಳೂರು.ಏ.15. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ನಾಯಕರು ಪರಸ್ಪರ ಅವಹೇಳನಕಾರಿ ಹಾಗೂ ವೈಯಕ್ತಿಕ ನಿಂದನೆಗಳಲ್ಲಿ ತೊಡಗಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮೊದಲ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ವೈಯಕ್ತಿಕ ನಿಂದನೆಯಲ್ಲಿ ತೊಡಗಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ  ಸುಪ್ರೀಂಕೋರ್ಟ್ ಸಹ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ‘ಜೈ ಭಜರಂಗ ಬಲಿ’ ಎಂದು ಘೋಷಣೆ ಕೂಗಿದ ಉತ್ತರಪ್ರದೇಶ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ 72 ಗಂಟೆಗಳ ಅವಧಿಗೆ ಹಾಗೂ ಮುಸ್ಲಿಮರ ಮತದಾನಕ್ಕೆ ಕರೆ ನೀಡಿದ ಬಿಎಸ್ ಪಿ ನಾಯಕಿ ಮಾಯಾವತಿ ಅವರಿಗೆ 48 ಗಂಟೆಗಳ ಕಾಲ ಪ್ರಚಾರಕ್ಕೆ ತಡೆ ನೀಡಿ ಚುನಾವಣಾ ಆಯೋಗ ಆದೇಶ ನೀಡಿದೆ. ರಾಜ್ಯದಲ್ಲಿ ಕೂಡ ವೈಯಕ್ತಿಕ ನಿಂದನೆಯಲ್ಲಿ ತೊಡಗುವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಚುನಾವಣಾ ಆಯೋಗದ ನೀತಿ ಅನುಸಾರ, ಕ್ರಿಮಿನಲ್‍ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ತಮ್ಮ ವಿರುದ್ಧದ ಪ್ರಕರಣದ ಕುರಿತು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಜಾಹೀರಾತು ನೀಡುವುದು ಕಡ್ಡಾಯ. ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ, ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ತಾವು ಚುನಾವಣಾಧಿಕಾರಿ ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಪ್ರಕಟಿಸಿರುವ ಕ್ರಿಮಿನಲ್ ಪ್ರಕರಣದ ಕುರಿತು ಮೂರು ದಿನಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಮೂರು ದಿನ ಜಾಹೀರಾತು ನೀಡಬೇಕು. ಆಯಾ ಪಕ್ಷಗಳು ಕೂಡ ಈ ಸಂಬಂಧ ವಿವರಗಳನ್ನು ತಮ್ಮ ವೆಬ್ ಸೈಟ್ ನಲ್ಲಿ ಹಾಕಬೇಕು. ಈ ನಿಯಮ ಪಾಲಿಸದ ಅಭ್ಯರ್ಥಿಗಳು ತಕ್ಷಣ ಪಾಲಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.

ರಾಜ್ಯದ ಮೊದಲನೇ ಹಂತದ ಚುನಾವಣೆಗೂ ಮುಂನ್ನ 48 ಗಂಟೆಗಳ ಅವಧಿಯಲ್ಲಿ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ನೀಡುವ ಮುನ್ನ ಪಕ್ಷಗಳು ಹಾಗೂ ಅಭ್ಯರ್ಥಿಗಳು ಪೂರ್ವ ಪ್ರಾಮಾಣೀಕರಣ ಸಮಿತಿಯ ಅನುಮೋದನೆ ಪಡೆಯುವುದು ಕಡ್ಡಾಯ ಎಂದರು.

ಚುನಾವಣೆಗೂ ಮುನ್ನ 48 ಗಂಟೆಗಳ ಅವಧಿ ಮಾಧ್ಯಮಗಳಿಗೆ ಸೈಲೆನ್ಸ್ ಪಿರಿಯಡ್ ಆಗಿರುತ್ತದೆ. ಮಾಧ್ಯಮಗಳು ಯಾವುದೇ ರಾಜಕೀಯ ಪಕ್ಷದ ಪರ ಸುದ್ದಿಗಳನ್ನು ಪ್ರಸಾರ ಮಾಡಬಾರದು. ಸಾರ್ವತ್ರಿಕ ಚುನಾವಣೆಯ ಮೇ 19ರ ಕೊನೆಯ ಹಂತದ ಮತದಾನ ನಡೆಯುವವರೆಗೆ ಯಾವುದೇ ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸುವಂತಿಲ್ಲ ಎಂದರು.

ಮೇ 19ರಂದು ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯಲಿದ್ದು, ಅಲ್ಲಿನ ಮತದಾರರಿಗೆ ಇನ್ನೂ ನೋಂದಣಿಯ ಅವಕಾಶವಿದೆ ಎಂದರು.

77. 63 ಕೋಟಿ ರೂ. ವಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯನಿರತವಾಗಿರುವ ಫ್ಲೈಯಿಂಗ್,  ಸ್ಟಾಟಿಕ್‍ ಹಾಗೂ ಇತರ ಕಾವಲು ಪಡೆಗಳು ಇಲ್ಲಿಯವರೆಗೆ ಒಟ್ಟು 77.63 ಕೋಟಿ ನಗದನ್ನು  ವಶಪಡಿಸಿಕೊಂಡಿದೆ.

ಫ್ಲೈಯಿಂಗ್, ಸ್ಟಾಟಿಕ್‍ ಸೇರಿ ಇತರ ಪಡೆಗಳು 15.81 ಕೋಟಿ ರೂ. ಹಾಗೂ 62.32 ಕೋಟಿ ರೂ. ಮೌಲ್ಯದ 17,744ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ.

6.42 ಕೋಟಿ ರೂ. ಮೌಲ್ಯದ 135.5 ಕೆಜಿ ಮಾದಕ ದ್ರವ್ಯಗಳು, 3.57 ಕೋಟಿ  ರೂ. ಮೌಲ್ಯದ  ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,752 ಎಫ್‍ಐಆರ್  ದಾಖಲಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಇಲ್ಲಿಯವರೆಗೆ 15.04 ಕೋಟಿ ರೂ. ಹಾಗೂ 6.51  ಕೋಟಿ ರೂ.ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದೆ.

ಅಬಕಾರಿ  ಇಲಾಖೆ ಇಲ್ಲಿಯವರೆಗೆ 35.97 ಕೋಟಿ ರೂ. ಮೌಲ್ಯದ 8.83 ಲಕ್ಷ ಲೀಟರ್ ಮದ್ಯ, 4.48 ಲಕ್ಷ  ರೂ ಮೌಲ್ಯದ 14 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು 2399 ಗಂಭೀರ ಪ್ರಕರಣಗಳನ್ನು  ದಾಖಲಿಸಿಕೊಂಡಿದೆ.

ಚುನಾವಣಾ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಒಟ್ಟು  95422 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರಗಳನ್ನು  ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.  ಸಿಆರ್ ಪಿಸಿ ಕಾಯ್ದೆಯಡಿ 44844 ಪ್ರಕರಣಗಳನ್ನು ದಾಖಲಿಸಲಾಗಿದೆ. 39427 ಜಾಮೀನು ರಹಿತ  ವಾರಂಟ್ ಗಳನ್ನು ಜಾರಿಗೊಳಿಸಲಾಗಿದೆ ಎಂದು ಚುನಾವಣಾ ಆಯೋಗದ ವರದಿ ತಿಳಿಸಿದೆ.

ಇಲ್ಲಿಯವರೆಗೆ  ಸಾಮಾಜಿಕ ಜಾಲತಾಣಗಳ ಮೂಲಕ 315 ದೂರುಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ 215 ಪೋಸ್ಟ್ ಗಳು ಹೆಚ್ಚಿನ ಖರ್ಚು ವೆಚ್ಚದ ಕುರಿತಾಗಿದೆ ಎಂದು ವರದಿ ತಿಳಿಸಿದೆ.

Leave a Comment