ವೈಭವದ ಸಿದ್ಧರಾಮೇಶ್ವರಸ್ವಾಮಿ ರಥೋತ್ಸವ

ಹುಳಿಯಾರು, ನ. ೯- ಹೋಬಳಿಯ ತಮ್ಮಡಿಹಳ್ಳಿ ಗ್ರಾಮದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಸ್ವಾಮಿಯವರ ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಥೋತ್ಸವವು ಭಾರೀ ಜನಸ್ತೋಮದ ನಡುವೆ ಅತ್ಯಂತ ವೈಭವದಿಂದ ಜರುಗಿತು.

ಹಣ್ಣುಕಾಯಿ ಸೇವೆ, ಅಂಬಿನ ಸೇವೆ, ಗಂಗಮ್ಮನ ಕೆರೆ ಸೇವೆ, ಆರತಿ ಮಹೋತ್ಸವ, ಫಲಹಾರ ಸೇವೆ, ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ, ಫಲಹಾರ ಸೇವೆ, ಅನ್ನಸಂತರ್ಪಣೆ, ತೇರು ಮಂಟಪದ ಕೈಲಾಸೋತ್ಸವ, ಬಸವನೋತ್ಸವ, ತೆಪ್ಪೋತ್ಸವ ಗಂಗಮ್ಮನ ಕೆರೆಗೆ ದಯಮಾಡಿಸಿ ಫಲಹಾರ ಸೇವೆ, ಗುರುಪರವು ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.

ಯಳನಾಡು ಗ್ರಾಮದೇವತೆ ಕರಿಯಮ್ಮ, ತಮ್ಮಡಿಹಳ್ಳಿ ಕರಿಯಮ್ಮ ಅವರ ಸಮ್ಮುಖದಲ್ಲಿ ರಂಗು-ರಂಗಿನ ಬಾವುಟ, ತಳಿರು ತೋರಣಗಳು ಹಾಗೂ ಹೂವಿನ ಹಾರಗಳಿಂದ ಶೃಂಗಾರಗೊಂಡು, ನಗಾರಿ, ನಂದಿಧ್ವಜ ಹಾಗೂ ಮಂಗಳವಾದ್ಯಗಳೊಂದಿಗೆ ಸಾಗಿ ಬಂದ ಮೂವತ್ತಕ್ಕೂ ಹೆಚ್ಚು ಅಡಿ ಎತ್ತರದ ಈ ಮಹಾರಥೋತ್ಸವವನ್ನು ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು.

ಹತ್ತಾರು ಹಳ್ಳಿಗಳಿಂದ ಬಂದಿದ್ದ ಭಕ್ತರು ತೇರು ಎಳೆಯು ಸಂದರ್ಭದಲ್ಲಿ ಹೆಜ್ಜೆ ಹೆಜ್ಜೆಗೂ ಕರ್ಪೂರ ಹಚ್ಚುವ ಮೂಲಕ ಭಕ್ತಿಭಾವ ಸಮರ್ಪಿಸಿದರು. ನಂತರ ಹಣ್ಣು ಕಾಯಿ ಮಾಡಿಸಿಕೊಂಡು ಪ್ರಸಾದ ಸ್ವೀಕರಿಸಿ ಹಿಂದಿರುಗಿದರು. ತುಂತುರು ಮಳೆಯನ್ನೂ ಲೆಕ್ಕಿಸದೆ ರಥೋತ್ಸವ ಮಗಿಯುವ ತನಕ ಭಕ್ತರು ಕದಲದೆ ಭಾಗವಹಿಸಿದ್ದು ವಿಶೇಷವಾಗಿತ್ತು.

Leave a Comment