ವೈನ್ ಶಾಪ್ ಗೇ ಕನ್ನ ಹಾಕಿದ ಕಳ್ಳರು! ಲಕ್ಷಾಂತರ ರೂ. ಮೌಲ್ಯದ ಮಾಲು ಕಳ್ಳರ ಪಾಲು, ಸಿಸಿ ಕೆಮರಾ ಡಿವಿಆರ್ ಹೊತ್ತೊಯ್ದರು 

ಮಂಗಳೂರು, ಎ.3- ಲಾಕ್ ಡೌನ್ ವೇಳೆಯಲ್ಲಿ ಕುಡಿಯಲು ಮದ್ಯ ಸಿಗದೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕುಡುಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಈ ಮಧ್ಯೆ ಪೊಲೀಸ್ ಬಿಗಿ ಭದ್ರತೆ ಇದ್ದರೂ ಖತರ್ನಾಕ್ ಕಳ್ಳರು ವೈನ್ ಶಾಪ್ ಗೇ ಕನ್ನ ಹಾಕಿದ ಘಟನೆ ಇಂದು ಮುಂಜಾನೆ ಕೊಣಾಜೆ ಠಾಣಾ ವ್ಯಾಪ್ತಿಯ ಕುತ್ತಾರ್ ನಿತ್ಯಾನಂದ ನಗರದಲ್ಲಿ ನಡೆದಿದೆ. ಲಕ್ಷಾಂತರ ರೂ. ಮೌಲ್ಯದ ಮದ್ಯದ ಬಾಟಲಿಗಳನ್ನು ಕಳವು ಮಾಡಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಘಟನೆ ವಿವರ:
ಎಂಎಸ್ ಐಎಲ್ ನ ವೈನ್ಸ್ ಶಾಪ್ ನಲ್ಲಿ ಕಳ್ಳತನ ನಡೆದಿದ್ದು ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮದ್ಯ ದೋಚಿದ್ದಾರೆ.  ಪುರುಷೋತ್ತಮ್ ಪಿಲಾರ್ ಅವರಿಗೆ ಸೇರಿದ ವೈನ್ಸ್ ಶಾಪ್ ನ ಶಟರ್ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಡಿಮೆ ಬೆಲೆಯ ಮದ್ಯದ ಬಾಟಲಿ ಸೇರಿದಂತೆ ಅಧಿಕ ಬೆಲೆಯ ಮದ್ಯದ ಬಾಟಲಿಗಳನ್ನು ಕೂಡ ಕಳವುಗೈದಿದ್ದಾರೆ. ಕಳ್ಳತನ ಮಾಡುವುದು ಹೊರಗೆ ಯಾರಿಗೂ ಕಾಣಿಸದಂತೆ ಅಂಗಡಿ ಎದುರು ಬಟ್ಟೆಯನ್ನು ಕಟ್ಟಿದ ಬಳಿಕ ಶಟರ್ ಬಾಗಿಲನ್ನು ಮುರಿದಿದ್ದಾರೆ. ಹೀಗಾಗಿ ಕಳ್ಳರ ಕೃತ್ಯ ಇಂದು ಬೆಳಗ್ಗೆಯಷ್ಟೇ ಬೆಳಕಿಗೆ ಬಂದಿದೆ.
ಸಿಸಿ ಕೆಮರಾ ಡಿವಿಆರ್ ಅನ್ನೂ ದೋಚಿದರು!
ವೈನ್ಸ್ ಅಂಗಡಿಯಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಆದರೆ ಈ ಬಗ್ಗೆ ಮೊದಲೇ ಮಾಹಿತಿ ಪಡೆದಂತಿದ್ದ ಕಳ್ಳರು ಸಿಸಿ ಕೆಮರಾ ದಾಖಲೆ ಹೊಂದಿರುವ ಡಿವಿಆರ್ ಕೂಡ ಕಳವು ನಡೆಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ವೈನ್ಸ್ ಅಂಗಡಿ ತೆರೆದಿದ್ದಕ್ಕೆ ಮುಗಿಬಿದ್ದ ಗ್ರಾಹಕರು!
ಬೆಳ್ಳಂಬೆಳಗ್ಗೆಯೇ ವೈನ್ಸ್ ಶಾಪ್ ಬಾಗಿಲು ತೆರೆದಿದ್ದನ್ನು ಕಂಡ ಗ್ರಾಹಕರು ಮದ್ಯ ಖರೀದಿಗಾಗಿ ಮುಗಿಬಿದ್ದ ಘಟನೆಯೂ ನಡೆಯಿತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ವೈನ್ಸ್ ಶಾಪ್ ಓಪನ್ ಆಗಿದೆ ಎಂದು ಭಾವಿಸಿ ಮದ್ಯ ನೀಡುವಂತೆ ಕೇಳುತ್ತಿದ್ದರು. ಕೊನೆಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ಹೇಳಿದಾಗ ಜಾಗ ಬಿಟ್ಟು ಕದಲಿದರು.
ಪಾನ್ ಶಾಪ್ ನಿಂದ ಸಿಗರೇಟ್ ಕಳವು
ವೈನ್ಸ್ ಶಾಪ್ ಪಕ್ಕದಲ್ಲೇ ಇರುವ ಪಾನ್ ಶಾಪ್ ನಿಂದಲೂ 10 ಪ್ಯಾಕೆಟ್ ಸಿಗರೇಟುಗಳನ್ನು ಕಳ್ಳರು ಕಳವುಗೈದಿದ್ದಾರೆ. ಮೂರು ವರ್ಷದಲ್ಲಿ 10 ನೇ ಬಾರಿ ಇದೇ ರೀತಿಯಲ್ಲಿ ಕಳವು ನಡೆಯುತ್ತಿದೆ ಎಂದು ಪಾನ್ ಶಾಪ್ ಮಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Comment