ವೈದ್ಯರ ನೇರ ನೇಮಕಾತಿ

ತುರುವೇಕೆರೆ, ನ. ೧೨- ಮುಂಬರಲಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 15 ಕ್ಕೆ 15 ಸ್ಥಾನಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ನಡೆಯಲಿರುವ ಡಾ.ಕರಿವೃಷಭ ದೇಶಿಕೇಂದ್ರ ಸ್ವಾಮಿಯವರ 25ನೇ ವರ್ಷದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ 15 ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ ಇದರಲ್ಲಿ ಅನುಮಾನವೇ ಬೇಡ. ನನಗೆ ಹಲವು ಉಪಚುನಾವಣೆಗಳನ್ನು ನಡೆಸಿದ ಅನುಭವವಿದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನರ ನಿರೀಕ್ಷೆ ಮೀರಿ ಸ್ಪಂದಿಸುತ್ತಿದ್ದು, ಹಾಗಾಗಿ ಪಕ್ಷದ 15 ಅಭ್ಯರ್ಥಿಗಳು ಗೆಲ್ಲಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯಲ್ಲಿ ಕೆ.ಪಿ.ಎಸ್.ಸಿ. ಮೂಲಕ ನಡೆಯುತ್ತಿದ್ದ ವೈದ್ಯರ ನೇಮಕಾತಿ ಪದ್ದತಿಯನ್ನು ರದ್ದು ಮಾಡಿದ್ದು, ನೇರವಾಗಿ ನೇಮಕಾತಿ ಮಾಡಿಕೊಳ್ಳುವ ಕ್ರಮಕ್ಕೆ ಮುಂದಾಗಿದ್ದೇವೆ ಹಾಗೂ ಸರ್ಕಾರಿ ಕರ್ತವ್ಯದಲ್ಲಿರುವ ವೈದ್ಯರು ಖಾಸಗಿ ಕ್ಲಿನಿಕ್‍ಗಳನ್ನು ನಡೆಸಿದರೆ ಸರ್ಕಾರಿ ಸೇವೆಗೆ ನ್ಯಾಯ ಒದಗಿಸಿದಂತಾಗುವುದಿಲ್ಲ. ಹಾಗಾಗಿ ಅಂತಹ ವೈದ್ಯರುಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಆದರೆ ಕರ್ತವ್ಯದ ವೇಳೆ ಮುಗಿದ ನಂತರ ಉಚಿತವಾಗಿ ಸಾರ್ವಜನಿಕ ಸೇವೆ ಮಾಡಲು ಅವಕಾಶವಿದೆ. ಈ ನಿಯಮವನ್ನು ದುರುಪಯೋಗಪಡಿಸಿಕೊಂಡಿರುವ ಕೆಲವರು ಖಾಸಗಿ ಕ್ಲಿನಿಕ್‍ಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಅಂತಹವರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ವಾಲ್ಮಿಕಿ ಸಮುದಾಯದ ಮುಖಂಡರಾದ, ವಸಂತ್‌ಕುಮಾರ್, ರಾಮಾಂಜಿನಯ್ಯ, ಸೋಮಶೇಖರಯ್ಯ, ಉಮರಾಜ್ ಸೇರಿದಂತೆ ಹಲವರು ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ದುಂಡಾ ರೇಣುಕಪ್ಪ, ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಕಾಳಂಜಿಹಳ್ಳಿ ಸೋಮಣ್ಣ, ವಿ.ಟಿ.ವೆಂಕಟರಾಮಯ್ಯ, ಎಡಗಿಹಳ್ಳಿವಿಶ್ವನಾಥ್, ಜಿ.ವಿ.ಪ್ರಕಾಶ್, ಡಿ.ಆರ್.ಬಸವರಾಜ್, ಮಂಜುನಾಥ್, ಅನಿತ ನಂಜುಂಡಯ್ಯ, ಶಿಕ್ಷಕ ನಟೇಶ್, ಇಂಡಿಯನ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ರುದ್ರಯ್ಯ ಹಿರೀಮಠ್ ಮತ್ತಿತರರು ಉಪಸ್ಥಿತರಿದ್ದರು.

Leave a Comment