ವೈದ್ಯರ ನಿರ್ಲಕ್ಷ್ಯಕ್ಕೆ ಶಿಶು ಬಲಿ: ಆರೋಪ

ಪುತ್ತೂರು, ನ.೧೪- ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಜನಿಸಿದ ಶಿಶುವನ್ನು ನಿತ್ರಾಣದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕೊಂಡೊಯ್ದು ದಾಖಲಿಸಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೆ ಶಿಶು ಅಲ್ಲಿ ಮೃತ ಪಟ್ಟ ಮತ್ತು ಶಿಶುವಿನ ಸಾವಿಗೆ ಶಸ್ತ್ರಚಿಕಿತ್ಸೆ ಮಾಡಿದ ಪುತ್ತೂರಿನ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪಿಸಿ ಮೃತ ಶಿಶುವಿನ ಷೋಷಕರು, ಸಂಬಂಧಿಕರು ಆಸ್ಪತ್ರೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಕೆಮ್ಮನ ಎಂಬಲ್ಲಿನ ನಿವಾಸಿ ಮಹಮ್ಮದ್ ಅಶ್ರಫ್ ಮತ್ತು ಫಾತಿಮತ್ ಜೊಹರಾ ದಂಪತಿಯ ಹೆಣ್ಣು ಶಿಶು ಮೃತಪಟ್ಟಿದ್ದು, ಈ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.
ತುಂಬು ಗರ್ಭಿಣಿಯಾಗಿದ್ದ ಫಾತಿಮತ್ ಜೊಹರಾ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಪತಿ ಹಾಗೂ ಮನೆಯವರು ಆಕೆಯನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಆಸ್ಪತ್ರೆಯ ವೈದ್ಯರು ನ.೯ರಂದು ಸಿಜೇರಿಯನ್ ಹೆರಿಗೆ ಮಾಡಿಸಿದ್ದರು. ಆದರೆ ಆಗ ತಾನೇ ಜನಿಸಿದ ನವಜಾತ ಶಿಶುವಿನ ಆರೋಗ್ಯದಲ್ಲಿ ಸಮಸ್ಯೆ ಇರುವ ಕಾರಣಕ್ಕಾಗಿ ತಕ್ಷಣ ಶಿಶುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.ಅಲ್ಲಿ ನ.೧೨ರಂದು ಬೆಳಿಗ್ಗೆ ಮಗು ಮೃತಪಟ್ಟಿದೆ.
ಘಟನೆಗೆ ಸಂಬಂಧಿಸಿ ಮೃತ ಶಿಶುವಿನ ತಂದೆ ಮತ್ತು ತಾಯಿ ಕಡೆಯವರು ಭಾನುವಾರ ರಾತ್ರಿ ಆಸ್ಪತ್ರೆಯ ಬಳಿ ಜಮಾಯಿಸಿ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ತಿಳಿದ ಪುತ್ತೂರು ನಗರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಜಮಾಯಿಸಿದ ಜನರನ್ನು ಅಲ್ಲಿಂದ ಚದುರಿಸಿದರು. ಬಳಿಕ ಮೃತ ಶಿಶುವಿನ ತಂದೆ ಮಹಮ್ಮದ್ ಅಶ್ರಫ್ ಅವರು ಪುತ್ತೂರು ನಗರ ಠಾಣೆಗೆ ತೆರಳಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ವಿರುದ್ಧ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ಮೃತ ಶಿಶುವಿನ ತಂದೆ ಮಹಮ್ಮದ್ ಅಶ್ರಫ್ ಅವರಿಂದ ಹೇಳಿಕೆ ಪಡೆದು ಕೊಂಡ ಪುತ್ತೂರು ನಗರ ಠಾಣೆಯ ಎಸ್‌ಐ ಅಜಯ್‌ಕುಮಾರ್ ಅವರು ಮೆಡಿಕಲ್ ಬೋರ್ಡ್‌ಗೆ ವರದಿ ಕಳುಹಿಸಿ ಅಲ್ಲಿಂದ ಬಂದ ವರದಿಯಂತೆ ತನಿಖೆ ಕೈಗೊಳ್ಳಲಾಗುವುದು ತಿಳಿಸಿರುವುದಾಗಿ ತಿಳಿದು ಬಂದಿದೆ,
ವೈದ್ಯರ ನಿರ್ಲಕ್ಷ -ತಂದೆಯ ಆರೋಪ
ಈ ಕುರಿತು ಮಂಗಳೂರಿನ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಪುತ್ತೂರು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಎಂದು ನಮ್ಮಲ್ಲಿ ಅಲ್ಲಿನ ವೈದ್ಯರು ಮೌಕಿಕವಾಗಿ ತಿಳಿಸಿದ್ದಾರೆ. ಪುತ್ತೂರು ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಆಸ್ಪತ್ರೆಯ ಬಿಲ್ ನಾನೇ ಜಮೆ ಮಾಡುತ್ತೇನೆ. ಅವರು ಹೋಗಲಿ ಎಂದು ಸಂಬಂಧಪಟ್ಟ ವೈದ್ಯರು ತಿಳಿಸಿರುವುದಾಗಿ ಆಸ್ಪತ್ರೆಯ ಸಿಬಂದಿ ನಮ್ಮಲ್ಲಿ ಹೇಳಿದ್ದಾರೆ. ಜೊತೆಗೆ ಸರ್ಜರಿ ಆಗಿರುವ ಫಾತಿಮತ್ ಜೊಹರಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ . ಇದರಿಂದ ನಮಗೆ ಪುತ್ತೂರು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಶಿಶು ಮೃತಪಟ್ಟಿದೆ ಎಂದು ಸಂಶಯ ಬರುತ್ತಿದೆ ಎಂದು ಮಹಮ್ಮದ್ ಆಶ್ರಫ್ ಅವರು ಆರೋಪಿಸಿದ್ದಾರೆ.

ನಿರ್ಲಕ್ಷ್ಯವಾಗಿಲ್ಲ: ವೈದ್ಯಾಧಿಕಾರಿ
ವೈದ್ಯರು ಯಾವುದೇ ಕಾರಣಕ್ಕೂ ಚಿಕಿತ್ಸೆ ವೇಳೆ ನಿರ್ಲಕ್ಷ್ಯ ಮಾಡಿಲ್ಲ. ನ.೮ಕ್ಕೆ ರಾತ್ರಿ ಗಂಟೆ ೧೨.೩೦ಕ್ಕೆ ಮಹಿಳೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಮಾನ್ಯ ಹೆರಿಗೆಗಾಗಿ ಪ್ರಥಮ ಆದ್ಯತೆ ನೀಡುವಂತೆ ಸರ್ಕಾರ ಸುತ್ತೊಲೆ ಹೊರಡಿಸುವ ಹಿನ್ನಲೆಯಲ್ಲಿ ಅದರಂತೆ ನಾವು ಕ್ರಮ ಕೈಗೊಂಡಿದ್ದೇವೆ. ನ.೯ರಂದು ಡೆಲಿವರಿ ಕೊಠಡಿಯಲ್ಲಿ ಆಕೆಗೆ ನೋವು ಬರುವ ಇಂಜಕ್ಷನ್ ನೀಡಲಾಗಿದೆ. ಸಾಮಾನ್ಯ ಹೆರಿಗೆ ಸಾಧ್ಯವಾಗದ ಕಾರಣ ತಕ್ಷಣ ಸಿಜೇರಿಯನ್ ಹೆರಿಗೆಗಾಗಿ ಗರ್ಭಿಣಿ ಮಹಿಳೆ ಮತ್ತು ಅವರ ಕಡೆಯವರಿಬ್ಬರಿಂದ ಸಹಿ ಪಡೆದೇ ಸಿಜೇರಿಯನ್ ಹೆರಿಗೆ ಮಾಡಲಾಗಿದೆ. ಜನಿಸಿದ ಶಿಶುವನ್ನು ವೈದ್ಯರು ಪರೀಕ್ಷಿಸಿದಾಗ ಶಿಶು ನಿತ್ರಾಣದಿಂದ ಕೂಡಿರುವುದು ಅರಿವಿಗೆ ಬಂದಿತ್ತು .ಈ ಹಿನ್ನಲೆಯಲ್ಲಿ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರ ಮನೆಯವರ ಜೊತೆ ಮಂಗಳೂರಿನ ಆಸ್ಪತ್ರೆಗೆ ನಮ್ಮ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಕಳುಹಿಸಿಕೊಡಲಾಗಿದೆ. ನ.೧೨ರಂದು ಬೆಳಿಗ್ಗೆ ಶಿಶು ಮೃತಪಟ್ಟಿರುವ ವಿಚಾರ ನಮಗೆ ತಿಳಿದು ಬಂದಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರು ತಿಳಿಸಿದ್ದಾರೆ.

Leave a Comment