ವೈದ್ಯಕೀಯ ಸೀಟು ಹಂಚಿಕೆ 1100 ಕೋಟಿ ರೂ. ಅವ್ಯವಹಾರ

ಬೆಂಗಳೂರು, ಫೆ. ೧೪- ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 1 ವರ್ಷದ ಅವಧಿಯಲ್ಲಿ ವೈದ್ಯಕೀಯ ಸೀಟುಗಳ ಬ್ಲಾಕಿಂಗ್‌ನಲ್ಲಿ 1,100 ಕೋಟಿ ರೂ. ಅವ್ಯವಹಾರ ನಡೆದಿದೆ ಎನ್ನುವ ಗಂಭೀರ ಮಾಹಿತಿಯನ್ನು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಬಹಿರಂಗಗೊಂಡಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರಬಿದರಿ ಹೊಸ ಬಾಂಬ್ ಸಿಡಿಸಿದ್ದಾರೆ.
1000ಕ್ಕೂ ಅಧಿಕ ಕೋಟಿ ಮೊತ್ತದ ವೈದ್ಯಕೀಯ ಕಾಲೇಜುಗಳ ಅವ್ಯವಹಾರವನ್ನು ಕಣ್ಣಾರೆ ಕಂಡೂ ರಾಜ್ಯ ಸರ್ಕಾರ ಹಾಗೂ ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.
ಶಂಕರ ಬಿದರಿ ಅವರು ಮಾಡಿರುವ ಆರೋಪ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸಂಚಲನ ಸೃಷ್ಟಿ ಮಾಡಿದ್ದು ರಾಜ್ಯದಲ್ಲಿ ಮತ್ತೆ ಸೀಟ್ ಬ್ಲಾಕಿಂಗ್ ದಂಧೆ ತಲೆ ಎತ್ತಿದಂತೆ ಕಾಣುತ್ತಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳ ಸೀಟ್ ಬ್ಲಾಕಿಂಗ್ ದಂಧೆ ಹೊಸದಲ್ಲದಿದ್ದರೂ ಸಾವಿರಾರು ಕೋಟಿ ರೂ. ಮೊತ್ತದ ಇಂತಹ ಹಗರಣದ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಬರೀ ಬಾಯಿಮಾತಿನಲ್ಲಿ ಹೇಳಿ ಸುಮ್ಮನಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ತನಿಖೆ ನಡೆಸುವಂತೆ ಕಳೆದ ಸೆಪ್ಟೆಂಬರ್‌ನಲ್ಲೇ ಪತ್ರ ಬರೆದು ಒತ್ತಾಯಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.
ಹೊಸದಾಗಿ ವೈದ್ಯಕೀಯ ಶಿಕ್ಷಣ ಖಾತೆ ವಹಿಸಿಕೊಂಡಿರುವ ಡಾ. ಕೆ. ಸುಧಾಕರ್ ಅವರಾಗಲೀ ಇಲ್ಲವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಾಗಲಿ ಈ ಸಂಬಂಧ ಕ್ರಮ ಕೈಗೊಳ್ಳುತ್ತಾರ ಎಂಬುದು ಸಧ್ಯಕ್ಕಿರುವ ಕುತೂಹಲ ಎಂದು ತಿಳಿಸಿದ್ದಾರೆ.

Leave a Comment