ವೈದ್ಯಕೀಯ ಕಾಲೇಜು ಉಳಿವಿಗೆ ಡಿಕೆಶಿ ಪಣ

ಬೆಂಗಳೂರು, ಅ. ೨೯- ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಮಂಜೂರಾಗಿರುವ ವೈದ್ಯಕೀಯ ಕಾಲೇಜನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಪ್ರಾಣ ಬೇಕಾದರೂ ಹೋಗಲಿ, ಕಾಲೇಜನ್ನು ಬಿಟ್ಟು ಕೊಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಜೆ‌ಟ್‌ನಲ್ಲಿ ಕನಕಪುರ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದ್ದರು. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಒಂದು ತಿಂಗಳಲ್ಲೇ ವೈದ್ಯಕೀಯ ಕಾಲೇಜು ರದ್ದು ಮಾಡಿದ್ದಾರೆ. ಈಗಾಗಲೇ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಲಾಗಿದೆ. ಹಣವೂ ಬಿಡುಗಡೆಯಾಗಿದೆ. ಹೌಸಿಂಗ್ ಬೋರ್ಡ್ ಜಾಗವನ್ನು ಹಿಂದೆಯೇ ಸಚಿವ ಸೋಮಣ್ಣ ಕೊಟ್ಟಿದ್ದರು. ಈಗ ಏಕಾಏಕಿ ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ಕೊಟ್ಟಿರುವುದು ಸರಿಯಲ್ಲ ಎಂದರು.
ಚಿಕ್ಕಬಳ್ಳಾಪುರಕ್ಕೆ ಬೇಕಿದ್ದರೆ 3 ಕಾಲೇಜು ಕೊಡಲಿ, ನನ್ನ ಅಭ್ಯಂತರವಿಲ್ಲ, ಕನಕಪುರ ಕಾಲೇಜನ್ನು ಸ್ಥಳಾಂತರಿಸಲು ಬಿಡಲ್ಲ, ಇದು ನನ್ನ ಕನಸಿನ ಯೋಜನೆ, ನನಗೆ ಭಾವನಾತ್ಮಕ ಸಂಬಂಧವಿದೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದರು.
ಈ ಹಿಂದೆ ಯಡಿಯೂರಪ್ಪನವರು ನನ್ನ ಮನೆಗೆ ಬಂದು ಕೆಲಸ ಮಾಡಿಕೊಡಿ ಎಂದಾಗ ನಾನು ರಾಜಕಾರಣ ಮಾಡದೆ ಕೆಲಸ ಮಾಡಿಕೊಟ್ಟಿದ್ದೇನೆ. ಯಡಿಯೂರಪ್ಪ ಅವರಿಗೆ ಎಷ್ಟು ಸಾವಿರ ಕೋಟಿ ರೂ. ಕೆಲಸ ಮಾಡಿಕೊಟ್ಟಿದ್ದೇನ ಎಂಬುದು ನನಗೆ ಗೊತ್ತಿದೆ. ವಿಪಕ್ಷ ನಾಯಕ ಬಂದಾಗ ನಾನು ರಾಜಕಾರಣ ಮಾಡಿಲ್ಲ ಎಂದರು.
ಕನಕಪುರಕ್ಕೆ ವೈದ್ಯಕೀಯ ಕಾಲೇಜು ಕೊಟ್ಟರೆ ಸರಿ,ಇಲ್ಲದಿದ್ದರೆ ಹೋರಾಟಕ್ಕೆ ಸಿದ್ಧ, ವಿಧಾನಸೌಧದಲ್ಲೇ ನನ್ನ ಪ್ರಾಣ ಬೇಕಿದ್ದರೆ ಹೋಗಲಿ, ಆದರೆ, ಮೆಡಿಕಲ್ ಕಾಲೇಜನ್ನು ಬಿಟ್ಟುಕೊಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅನರ್ಹ ಶಾಸಕ ಸುಧಾಕರ್ ಮೆಡಿಕಲ್ ಕಾಲೇಜನ್ನು ಸ್ಥಳಾಂತರ ಮಾಡಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಯಾಱ್ರಿ ಸುಧಾಕರ್, ನನ್ನ ಮೇಲೆ ಸೇಡಿದ್ದರೆ ತೀರಿಸಿಕೊಳ್ಳಲಿ ಅಥವಾ ನನ್ನನ್ನು ನೇಣಿಗೆ ಹಾಕಲಿ, ಆದರೆ, ಮೆಡಿಕಲ್ ಕಾಲೇಜಿಗೆ ಅಡ್ಡಿ ಬಂದರೆ ಬಿಡುವುದಿಲ್ಲ ಎಂದರು.
ಡಿ.ಕೆ. ಶಿವಕುಮಾರ್ ಸಮಸ್ಯೆಯಿಂದ ಹೊರ ಬಂದರೆ ಅತ್ಯಂತ ಖುಷಿಪಡುವ ವ್ಯಕ್ತಿ ನಾನು ಎಂಬ ಯಡಿಯೂರಪ್ಪನವರ ಹೇಳಿಕೆಗೆ ಈಗ ಪ್ರತಿಕ್ರಿಯಿಸಲ್ಲ, ನಾನು ಮಾತನಾಡಿ ಅವರ ಕುರ್ಚಿಗೆ ಸಮಸ್ಯೆ ತರಲು ಬಯಸುವುದಿಲ್ಲ, ಯಡಿಯೂರಪ್ಪನವರು ನನ್ನ ಜತೆ ಏನು ಮಾತಾಡಿಲ್ಲ. ಆದರೆ, ಬಿಜೆಪಿ ಸ್ನೇಹಿತರು ನನಗೆ ಶುಭ ಕೋರಿದ್ದಾರೆ. ಅವರ ಹೆಸರನ್ನು ನಾನು ಈಗ ಹೇಳಲ್ಲ ಎಂದರು.
ಹೊಸಕೋಟೆ ಉಪಚುನಾವಣೆಯ ರಣಾಂಗಣಕ್ಕೆ ಅನರ್ಹ ಶಾಸಕ ಎನ್.‌ಟಿ‌.ಬಿ ಆಹ್ವಾನ ಕೊಟ್ಟಿರುವಬಗ್ಗೆ ಪ್ರತಿಕ್ರಿಯಿಸಿದ ಅವರು, ಎಂ.ಟಿ.ಬಿ. ನಾಗರಾಜ್ ದೊಡ್ಡವರು. ಅವರ ಬಗ್ಗೆ ಮಾತನಾಡಲ್ಲ ಎಂದರು.
ಉಪ ಚುನಾವಣೆಯ ಬಗ್ಗೆ ಇನ್ನು ನಾನು ಅಧ್ಯಕ್ಷರೊಂದಿಗೆ ಮಾತನಾಡಿಲ್ಲ ಎಂದು ಅವರು ಹೇಳಿದರು. ಆತ್ಮಹತ್ಯೆ ಮಾಡಿಕೊಂಡ ಪರಮೇಶ್ವರ್ ಪಿಎ ರಮೇಶ್ ನಮ್ಮ ಹುಡುಗ, ನಮ್ಮ ಕ್ಷೇತ್ರದವನು, ಅವನು ಈ ರೀತಿ ಮಾಡಿಕೊಂಡಿರುವುದು ದುರ್ದೈವ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Leave a Comment