ವೈಟಿಪಿಎಸ್, ಆರ್‌ಪಿಸಿಎಲ್‌ ಖಾಸಗೀಕರಣ

ಕೈಬಿಡಲು ಆಗ್ರಹಿಸಿ, ರಸ್ತೆತಡೆ ಚಳುವಳಿ
ರಾಯಚೂರು.ಫೆ.11- ವೈಟಿಪಿಎಸ್, ಆರ್‌ಪಿಸಿಎಲ್‌ನ್ನು ಪವರ್ ಮೇಕ್ ಕಂಪನಿಗೆ ನೀಡಿದ ಗುತ್ತಿಗೆ ರದ್ದು ಪಡಿಸಿ, ಹಾಲಿ ಕಾರ್ಮಿಕರನ್ನು ಮುಂದುವರೆಸಿ, ಹೊಸ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿ, ಸಿಪಿಐ (ಎಂಎಲ್) ರೆಡ್ ಸ್ಟಾರ್ ತಾಲೂಕು ಸಮಿತಿಯೂ ತಾಲೂಕಿನ ಯದ್ಲಾಪೂರು ವೈಟಿಪಿಎಸ್ ಮುಂದೆ ರಸ್ತೆ ತಡೆ ಚಳುವಳಿ ನಡೆಸಿದರು.
ವೈಟಿಪಿಎಸ್ ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಿ, ಕಾರ್ಮಿಕರನ್ನು ಬೀದಿ ಪಾಲು ಮಾಡಬಾರದೆಂದು ಒತ್ತಾಯಿಸಿದರು. ಡಿ.24 ರಂದು ವೈಟಿಪಿಎಸ್ ಖಾಸಗೀಕರಣ ವಿರುದ್ಧ ಸಿಪಿಐಎಂ ಪಕ್ಷ ಹೋರಾಟ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಸ್ಪಂದಿಸದಿರುವುದರಿಂದ ಇಂದು ಜಿಲ್ಲೆಯಾದ್ಯಂತ ರಸ್ತೆ ತಡೆ ಚಳುವಳಿ ನಡೆಸಲು, ಮುಂದಾಗಿದ್ದಾರೆ. ಜನರ ವಿರೋಧದ ನಡುವೆಯೂ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ, ವೈಟಿಪಿಎಸ್ ಸ್ಥಾಪಿಸಲಾಯಿತು.
ಕೇಂದ್ರ ಸರ್ಕಾರ ಬಿಹೆಚ್ಇಎಲ್ ಮತ್ತು ರಾಜ್ಯ ಸರ್ಕಾರ ಕೆಪಿಸಿಎಲ್ ಮತ್ತು ಐಎಫ್‌ಸಿಎಲ್ ಜಂಟಿ ಸಹಯೋಗದಲ್ಲಿ 13,250 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರ ಭೂಮಿ ಸ್ವಾಧೀನ ಪಡೆಸಿಕೊಳ್ಳಲಾಗಿದೆ. ಕೃಷ್ಣಾ ನದಿ ನೀರು ಸರಬರಾಜು ಮಾಡಲಾಗಿದೆ. ದಕ್ಷಿಣ ಮಧ್ಯ ರೈಲ್ವೆ ಹಾಗೂ ಆರ್‌ಟಿಪಿಎಸ್ ವಿದ್ಯುತ್ ಬಳಸಿಕೊಂಡು ವೈಟಿಪಿಎಸ್ 800 ಮೆ.ವ್ಯಾ. ಸಾಮರ್ಥ್ಯವುಳ್ಳ ವಿದ್ಯುತ್ ಘಟಕಗಳ ಉತ್ಪಾದನೆಗೆ ಸಿದ್ಧವಾಗಿದೆ. ಆದರೆ, ವೈಟಿಪಿಎಸ್ ಖಾಸಗೀಕರಣ ಮಾಡಲು ಮುಂದಾಗಿರುವುದು ಖಂಡನೀಯ.
ಖಾಸಗೀಕರಣವೂ ಜಾರಿಯಾದಲ್ಲಿ 13,250 ಕೋಟಿ ಹೂಡಿಕೆಯ ಪ್ಲ್ಯಾಂಟ್ ಖಾಸಗೀಕರಣವಾಗಲಿದೆ. ಕಳೆದ ಮೂರು ವರ್ಷಗಳಲ್ಲಿ ದುಡಿಯುತ್ತಿರುವ 750 ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ. ಭೂ ಕಳೆದುಕೊಂಡವರು ತೀವ್ರ ಅತಂತ್ರಕ್ಕೊಳಗಾಗಲಿದ್ದಾರೆ. ಹೈ-ಕ ಭಾಗದ 2500 ನಿರುದ್ಯೋಗಿ ಯುವಕರು ಖಾಯಂ ಉದ್ಯೋಗದಿಂದ ವಂಚಿತರಾಗಲಿದ್ದಾರೆ.
ಹೈ-ಕ 371 (ಜೆ) ಕಲಂ ಉಲ್ಲಂಘಿಸಿದ್ದಾರೆ. ಕೂಡಲೇ ಯಾವುದೇ ಕಾರಣಕ್ಕೂ ಪವರ್ ಮೇಕ್ ಕಂಪನಿಯೊಂದಿಗೆ ಮಾಡಿಕೊಂಡಿರುವ ಪ್ಯಾಕೇಜ್ ಗುತ್ತಿಗೆ ಒಡಂಬಡಿಕೆ ರದ್ದು ಪಡಿಸಿ, ಹಳೆ ಕಾರ್ಮಿಕರಿಗೆ ಸೇವಾ ಭದ್ರತೆ ಮತ್ತು ಹೊಸ ನೇಮಕಾತಿಗೆ ಮುಂದಾಗಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ನಾಗಲಿಂಗ ಸ್ವಾಮಿ, ಜಿ.ಅಮರೇಶ, ರವಿದಾದಸ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.

Leave a Comment